ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹ್ಯಾಟ್ರಿಕ್ ಸಾಧನೆ; ಪ್ರಶಸ್ತಿ ದಾಖಲೆ

ಆಸ್ಟ್ರೇಲಿಯಾ ಓಪನ್ ಟೆನಿಸ್ ಟೂರ್ನಿ: ಸರ್ಬಿಯಾದ ನೊವಾಕ್‌ ಜೊಕೊವಿಚ್‌ಗೆ ಮಣಿದ ಸ್ಪೇನ್‌ನ ರಫೆಲ್‌ ನಡಾಲ್‌
Last Updated 27 ಜನವರಿ 2019, 20:15 IST
ಅಕ್ಷರ ಗಾತ್ರ

ಮೆಲ್ಬರ್ನ್‌: ಬಲಿಷ್ಠ ಎದುರಾಳಿ ಸ್ಪೇನ್‌ನ ರಫೆಲ್ ನಡಾಲ್ ಅವರನ್ನು ಮೂರು ನೇರ ಸೆಟ್‌ಗಳಲ್ಲಿ ಮಣಿಸಿದ ಸರ್ಬಿಯಾದ ನೊವಾಕ್ ಜೊಕೊವಿಚ್‌, ಆಸ್ಟ್ರೇಲಿಯಾ ಓಪನ್ ಟೆನಿಸ್‌ ಟೂರ್ನಿಯ ಪ್ರಶಸ್ತಿ ಮುಡಿಗೇರಿಸಿಕೊಂಡರು.

ರೋಡ್ ಲಾವೆರ್‌ ಅರೆನಾದಲ್ಲಿ ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ನಡಾಲ್ ಎದುರು 6–3, 6–2, 6–3ರಲ್ಲಿ ಗೆದ್ದ ಜೊಕೊವಿಚ್‌ ಅಂಗಣದ ನಡುವೆ ಮಂಡಿಯೂರಿ ಆಕಾಶ ದಿಟ್ಟಿಸಿ ಏದುಸಿರು ಬಿಟ್ಟರು.

ಅವರು ಈ ರೀತಿ ಸಂಭ್ರಮಿಸಲು ಕಾರಣವೂ ಇತ್ತು. ಇದು ಅವರು ಗೆದ್ದ ದಾಖಲೆಯ ಪ್ರಶಸ್ತಿಯಾಗಿತ್ತು.

ನುವಾರದ ಜಯದೊಂದಿಗೆ ಆಸ್ಟ್ರೇಲಿಯಾ ಓಪನ್ ಟೂರ್ನಿಯಲ್ಲಿ ಏಳು ಬಾರಿ ಪ್ರಶಸ್ತಿ ತಮ್ಮದಾಗಿಸಿಕೊಂಡ ಸಾಧನೆ ಅವರದಾಯಿತು.

ಈ ಮೂಲಕ ರೋಜರ್ ಫೆಡರರ್‌ ಮತ್ತು ರಾಯ್‌ ಎಮರ್ಸನ್ ಅವರ ದಾಖಲೆಯನ್ನು ಸರ್ಬಿಯಾ ಆಟಗಾರ ಹಿಂದಿಕ್ಕಿದರು. ಸತತ ಮೂರು ಗ್ರ್ಯಾನ್‌ ಸ್ಲಾಂ ಪ್ರಶಸ್ತಿ ಗೆದ್ದ ಆಟಗಾರ ಎಂಬ ಖ್ಯಾತಿಯನ್ನೂ ತಮ್ಮದಾಗಿಸಿಕೊಂಡರು. ಕಳೆದ ವರ್ಷ ವಿಂಬಲ್ಡನ್ ಮತ್ತು ಅಮೆರಿಕ ಓಪನ್ ಪ್ರಶಸ್ತಿ ಅವರ ಪಾಲಾಗಿದ್ದವು.

ವರ್ಷದ ಹಿಂದೆ ಮೊಣಕೈ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ನೊವಾಕ್‌ ವಿಶ್ವ ರ‍್ಯಾಂಕಿಂಗ್‌ನ ಅಗ್ರ 20ರ ಒಳಗೆ ಸ್ಥಾನ ಕಳೆದುಕೊಂಡು ನಿರಾಸೆಗೆ ಒಳಗಾಗಿದ್ದರು. ಆದರೆ ನಂತರ ಪುಟಿದೆದ್ದಿದ್ದರು.

ಮಂಕಾದ ನಡಾಲ್‌: ಜೊಕೊವಿಚ್ ಮತ್ತು ನಡಾಲ್ ಈ ಹಿಂದೆ ಒಟ್ಟು 52 ಬಾರಿ ಮುಖಾಮುಖಿಯಾಗಿದ್ದರು. ಈ ಪೈಕಿ 27 ಬಾರಿ ಜೊಕೊವಿಚ್ ಗೆದ್ದಿದ್ದರು. ಭಾನುವಾರ ನಡಾಲ್ ನೀರಸ ಆಟವಾಡಿದರು. ಜೊಕೊವಿಚ್‌ ಆರಂಭದಿಂದಲೇ ಪಂದ್ಯದ ಮೇಲೆ ಹಿಡಿತ ಸಾಧಿಸಿದರು. ಮೊದಲ ಸೆಟ್‌ನ ಮೊದಲ ನಾಲ್ಕು ಗೇಮ್‌ಗಳಲ್ಲಿ ಒಂದು ಪಾಯಿಂಟ್ ಕೂಡ ಬಿಟ್ಟುಕೊಡದೆ ಜೊಕೊವಿಚ್‌ ಗೆದ್ದರು. 36 ನಿಮಿಷಗಳಲ್ಲಿ ಸೆಟ್ ಗೆದ್ದರು.

ಎರಡನೇ ಸೆಟ್‌ ಕೂಡ ಬಹು ತೇಕ ಏಕಪಕ್ಷೀಯವಾಗಿತ್ತು. ಸರ್ವ ಕಾಪಾಡಿಕೊಂಡು ಮುನ್ನುಗ್ಗಿದ ಜೊಕೊ ವಿಚ್‌ ಎದುರು ನಡಾಲ್‌ ಮಂಕಾದರು. ಐದನೇ ಗೇಮ್‌ ರೋಚಕ ವಾಗಿತ್ತು. ಇಬ್ಬರೂ ಆಟಗಾರರು ಜಿದ್ದಾಜಿದ್ದಿಯ ಆಟವಾಡಿದರು. ಕೊನೆಯಲ್ಲಿ ಜೊಕೊವಿಚ್ ಮೇಲುಗೈ ಸಾಧಿಸಿದರು.

ಸೆಟ್‌ನಲ್ಲಿ 5–2ರ ಮುನ್ನಡೆ ಸಾಧಿಸಿದ್ದ ಸಂದರ್ಭದಲ್ಲಿ ಸತತ ಮೂರು ಏಸ್ ಸಿಡಿಸಿದ ಜೊಕೊವಿಚ್‌ ಪಂದ್ಯದಲ್ಲಿ 2–0 ಮುನ್ನಡೆಯೊಂದಿಗೆ ನಗೆ ಸೂಸಿದರು. ಮೂರನೇ ಗೇಮ್‌ನಲ್ಲೂ ಆಧಿಪತ್ಯ ಮುಂದುವರಿಯಿತು. ಲಯ ಕಂಡುಕೊಳ್ಳಲು ನಡಾಲ್ ನಡೆಸಿದ ಪ್ರಯತ್ನಗಳೆಲ್ಲವೂ ವಿಫಲವಾದವು; ಜೊಕೊವಿಚ್‌ ಆಸ್ಟ್ರೇಲಿಯಾ ಓಪನ್‌ನ ರಾಜನಾಗಿ ಮೆರೆದರು.

*
ಸತತ ಮೂರು ಗ್ರ್ಯಾನ್‌ಸ್ಲಾಂ ಪ್ರಶಸ್ತಿ ಗೆಲ್ಲುವುದು ಸುಲಭದ ಮಾತಲ್ಲ. ಹೀಗಾಗಿ ಇಂದು ವರ್ಣಿಸಲಾಗದಷ್ಟು ಖುಷಿಯಾಗಿದೆ.
–ನೊವಾಕ್ ಜೊಕೊವಿಚ್‌, ಸರ್ಬಿಯಾದ ಆಟಗಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT