ಗುರುವಾರ , ಜುಲೈ 7, 2022
23 °C
ಬೆಂಗಳೂರು ಓಪನ್ ಎರಡನೇ ಲೆಗ್ ಎಟಿಪಿ ಚಾಲೆಂಜರ್‌ ಟೂರ್ನಿ: ರಾಮ್‌ಕುಮಾರ್‌ಗೆ ಸೋಲು

ಎಟಿಪಿ ಚಾಲೆಂಜರ್‌ ಟೂರ್ನಿ: ಪ್ರೀಕ್ವಾರ್ಟರ್‌ಗೆ ಮುನ್ನಡೆದ ಸಿದ್ದಾರ್ಥ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ವೈಲ್ಡ್‌ಕಾರ್ಡ್ ಪ್ರವೇಶ ಪಡೆದಿದ್ದ ಸಿದ್ಧಾರ್ಥ್‌ ರಾವತ್ ಅವರು ಮುಕುಂದ್‌ ಶಶಿಕುಮಾರ್ ಸವಾಲು ಮೀರಿ  ಬೆಂಗಳೂರು ಓಪನ್ ಎರಡನೇ ಲೆಗ್‌ನ ಎಟಿಪಿ ಚಾಲೆಂಜರ್ ಟೆನಿಸ್‌ ಟೂರ್ನಿಯ ಪ್ರೀಕ್ವಾರ್ಟರ್‌ಫೈನಲ್‌ಗೆ ಲಗ್ಗೆಯಿಟ್ಟರು. ಆದರೆ ಅನುಭವಿ ಆಟಗಾರ ರಾಮ್‌ಕುಮಾರ್ ರಾಮನಾಥನ್ ಅವರ ಸವಾಲು ಅಂತ್ಯವಾಯಿತು.

ಕರ್ನಾಟಕ ರಾಜ್ಯ ಲಾನ್ ಟೆನಿಸ್‌ ಸಂಸ್ಥೆಯ (ಕೆಎಸ್‌ಎಲ್‌ಟಿಎ) ಅಂಗಣದಲ್ಲಿ ನಡೆಯುತ್ತಿರುವ ಟೂರ್ನಿಯ ಪುರುಷರ ಸಿಂಗಲ್ಸ್ ವಿಭಾಗದ ಮೊದಲ ಸುತ್ತಿನ ಪಂದ್ಯದಲ್ಲಿ ಭಾರತದ ಸಿದ್ಧಾ‌ರ್ಥ್‌ 6–4, 6–4ರಿಂದ ಭಾರತದವರೇ ಆದ ಮುಕುಂದ್ ಅವರನ್ನು ಮಣಿಸಿದರು.

ಟೂರ್ನಿ ಗೆಲ್ಲುವ ಭರವಸೆಯ ಆಟಗಾರನಾಗಿದ್ದ ರಾಮ್‌ಕುಮಾರ್ ಅವರು 6-4, 3-6, 2-6ರಿಂದ ಫ್ರಾನ್ಸ್‌ನ ಮಥಾಯಿಸ್‌ ಬೌರ್ಗ್‌ ಎದುರು ಎಡವಿದರು. ಮೊದಲ ಸೆಟ್‌ ಗೆದ್ದು ಆತ್ಮವಿಶ್ವಾಸದಿಂದ ಮುನ್ನುಗ್ಗಿದ್ದ ಭಾರತದ ಅಗ್ರ ಕ್ರಮಾಂಕದ ಆಟಗಾರ ಎರಡು ಮತ್ತು ಮೂರನೇ ಸೆಟ್‌ಗಳಲ್ಲಿ ಎಡವಿದರು.

ಚುನ್‌ ಸಿನ್‌ ಪರಾಭವ: ಬೆಂಗಳೂರು ಓಪನ್ ಮೊದಲ ಲೆಗ್‌ನಲ್ಲಿ ಚಾಂಪಿಯನ್‌ ಪಟ್ಟ ಧರಿಸಿದ್ದ ಚುನ್‌ ಸಿನ್ ಸೆಂಗ್‌ ಇಲ್ಲಿ ಮೊದಲ ಸುತ್ತಿನಲ್ಲೇ ಮುಗ್ಗರಿಸಿದರು. ಉತ್ತಮ ಲಯದಲ್ಲಿದ್ದ ಚುನ್‌ 2-6, 2-6ರಿಂದ ಕ್ವಾಲಿಫೈಯರ್‌ನಿಂದ ಗೆದ್ದು ಬಂದ ಆಟಗಾರ ಗ್ರೀಸ್‌ನ ಮಾರ್ಕೊಸ್‌ ಕ್ಯಾಲೊವೆಲೊನಿಸ್‌ ಎದುರು ಸೋತರು.

ಸಿಂಗಲ್ಸ್ ವಿಭಾಗದ ಮೊದಲ ಸುತ್ತಿನ ಫಲಿತಾಂಶಗಳು: ರಷ್ಯಾದ ಆ್ಯಂಡ್ರೆ ಕುಜ್ನೆತ್ಸೊವ್‌ಗೆ 6-1, 1-6, 6-3ರಿಂದ ಜೆಕ್‌ ಗಣರಾಜ್ಯದ ವಿಟ್‌ ಕೊಪ್ರಿವಾ ಎದುರು ಜಯ; ಫ್ರಾನ್ಸ್‌ನ ಮಥಾಯಿಸ್‌ ಬೌರ್ಗ್‌ ಅವರಿಗೆ 4-6, 6-3, 6-2ರಿಂದ ಭಾರತದ ರಾಮ್‌ಕುಮಾರ್ ರಾಮನಾಥನ್ ವಿರುದ್ಧ ಜಯ; ಕ್ರೊವೇಷ್ಯಾದ ಬೊರ್ನಾ ಗೊಜೊ ಅವರಿಗೆ 4-6, 6-3, 6-4ರಿಂದ ರಷ್ಯಾದ ಡಾಮಿನಿಕ್ ಪಲಾನ್ ಎದುರು ಗೆಲುವು; ಸ್ವಿಟ್ಜರ್ಲೆಂಡ್‌ನ ಜೊಹಾನ್ ನಿಕಲ್ಸ್ ಅವರಿಗೆ 6-7 (1), 6-1, 7-5ರಿಂದ ಇಟಲಿಯ ರೌಲ್ ಬ್ರಾಂಕಾಶಿಯೊ ಎದುರು ಗೆಲುವು; ಫ್ರಾನ್ಸ್‌ನ ಎಂಜೊ ಕೌಸಾಡ್‌ ಅವರಿಗೆ 6-1, 6-1ರಿಂದ ಭಾರತದ ನಿತಿನ್ ಕುಮಾರ್ ಸಿನ್ಹಾ ಎದುರು ಜಯ; ಭಾರತದ ಸಿದ್ದಾರ್ಥ್ ರಾವತ್‌ ಅವರಿಗೆ 6-4, 6-4ರಿಂದ ಮುಕುಂದ್ ಶಶಿಕುಮಾರ್ ವಿರುದ್ಧ ಜಯ, ಗ್ರೀಸ್‌ನ ಮಾರ್ಕಸ್‌ ಕ್ಯಾಲೊವೆಲೊನಿಸ್‌ ಅವರಿಗೆ 6-2, 6-2ರಿಂದ ಚೀನಾ ತೈಪೆಯ ಚುನ್ ಸಿಂಗ್ ಎದುರು ಗೆಲುವು.

ಡಬಲ್ಸ್ ವಿಭಾಗದ ಪ್ರೀಕ್ವಾರ್ಟರ್‌ಫೈನಲ್ ಫಲಿತಾಂಶಗಳು: ಭಾರತದ ಎನ್‌. ಶ್ರೀರಾಮ್ ಬಾಲಾಜಿ– ವಿಷ್ಣು ವಿನೋದ್ ಜೋಡಿಗೆ 6-4, 6-2ರಿಂದ ಭಾರತದ ಸೂರಜ್ ಪ್ರಬೋಧ್‌–ರಿಷಿ ರೆಡ್ಡಿ ವಿರುದ್ಧ ಗೆಲುವು; ಉಕ್ರೇನ್‌ನ ವ್ಲಾಡಿಸ್ಲಾವ್‌ ಒರ್ಲೊವ್‌ – ಗ್ರೀಸ್‌ನ ಕಾಯ್‌ ವೆನೆಲ್ಟ್‌ ಅವರಿಗೆ 7-5, 6-4ರಿಂದ ವಿಟ್‌ ಕೊಪ್ರಿಯಾ– ಜೊರೊಸ್ಲಾವ್ ಪಾಸ್ಪಿಸಿಲ್ ಎದುರು ಗೆಲುವು; ಭಾರತದ ಜೀವನ್ ನೆಡುಂಚೆರಿಯನ್‌ –ಪೂರವ್ ರಾಜಾ ಅವರಿಗೆ 6-3, 7-5ರಿಂದ ಆಸ್ಟ್ರೇಲಿಯಾದ ಥಾಮಸ್‌ ಫ್ಯಾನ್‌ಕಟ್‌– ಜೇಸನ್ ಕುಬ್ಲೆರ್ ಎದುರು ಜಯ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು