ಫೈನಲ್‌ಗೆ ರೋಜರ್‌ ಫೆಡರರ್‌

7
ಎಟಿಪಿ ಹ್ಯಾಲೆ ಟೆನಿಸ್‌ ಟೂರ್ನಿ: ಡೆನಿಸ್‌ ಕುಡ್ಲಾಗೆ ನಿರಾಸೆ

ಫೈನಲ್‌ಗೆ ರೋಜರ್‌ ಫೆಡರರ್‌

Published:
Updated:

ಹ್ಯಾಲೆ ವೆಸ್ಟ್‌ಫಲೆನ್‌, ಜರ್ಮನಿ: ಇಲ್ಲಿ ನಡೆಯುತ್ತಿರುವ ಎಟಿಪಿ ಹ್ಯಾಲೆ ಟೆನಿಸ್‌ ಟೂರ್ನಿಯಲ್ಲಿ ರೋಜರ್‌ ಫೆಡರರ್‌ ಅವರು ಫೈನಲ್‌ ಪ್ರವೇಶಿಸಿದ್ದಾರೆ.  ಶನಿವಾರ ನಡೆದ ಸೆಮಿಫೈನಲ್‌ ಪಂದ್ಯದಲ್ಲಿ ಅವರು ಅಮೆರಿಕದ ಡೆನಿಸ್‌ ಕುಡ್ಲಾ ಅವರನ್ನು 7–6, 7–5ರಿಂದ ಮಣಿಸಿದರು. 

ರ‍್ಯಾಂಕಿಂಗ್‌ ಪಟ್ಟಿಯಲ್ಲಿ 109ನೇ ಸ್ಥಾನದಲ್ಲಿರುವ ಡೆನಿಸ್‌ ಅವರು 90 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಸ್ವಿಟ್ಜರ್‌ಲೆಂಡ್‌ನ ಅಗ್ರ ಶ್ರೇಯಾಂಕಿತ ಆಟಗಾರನಿಗೆ ತೀವ್ರ ಪೈಪೋಟಿ ನೀಡಿದರು. ಪಂದ್ಯದ ಆರಂಭದಿಂದಲೂ ಬಿರುಸಿನ ಆಟ ಆಡಿದ ಡೆನಿಸ್‌ ಅವರು ಮೊದಲ ಸೆಟ್‌ನಲ್ಲಿ 2–0ಯಿಂದ ಮುನ್ನಡೆ ಸಾಧಿಸಿದ್ದರು. ಆದರೆ, ಕೂಡಲೇ ಎಚ್ಚೆತ್ತಿಕೊಂಡ ರೋಜರ್‌, ಅಮೆರಿಕದ ಆಟಗಾರನಿಗೆ ಸವಾಲು ಒಡ್ಡಿದರು. ತಮ್ಮ ಎಂದಿನ ಆಟದ ಲಯಕ್ಕೆ ಮರಳಿದ ಫೆಡರರ್‌ ಅವರು ಉತ್ತಮ ಸರ್ವ್‌ ಹಾಗೂ ಬಲಶಾಲಿ ಹೊಡೆತಗಳ ಮೂಲಕ ಎದುರಾಳಿಗೆ ಉತ್ತರ ನೀಡಿದರು. 

ಬ್ಯಾಕ್‌ಹ್ಯಾಂಡ್‌ ಮೂಲಕ ಅಮೋಘವಾಗಿ ಚೆಂಡನ್ನು ಬಾರಿಸಿದ ಫೆಡರರ್‌ ಸೆಟ್‌ ಅನ್ನು ಟೈಬ್ರೇಕರ್‌ಗೆ ಕೊಂಡೊಯ್ದರು. ಮೋಹಕವಾಗಿ ಚೆಂಡನ್ನು ಡ್ರಾಪ್‌ ಮಾಡಿ ಟೈಬ್ರೇಕರ್‌ ಗೆದ್ದು ಮೊದಲ ಸೆಟ್‌ ಅನ್ನು ತಮ್ಮದಾಗಿಸಿಕೊಂಡರು. 

ಎರಡನೇ ಸೆಟ್‌ನಲ್ಲೂ ಇಬ್ಬರು ಆಟಗಾರರು ಸಮಬಲದ ಸಾಮರ್ಥ್ಯ ತೋರಿದರು. ಫೆಡರರ್‌ ಅವರಿಗೆ ತೀವ್ರ ಪ್ರತಿರೋಧ ಒಡ್ಡಿದ ಡೆನಿಸ್‌, ಹಲವು ಬಾರಿ ಉತ್ತಮ ಸರ್ವ್‌ ಹಾಗೂ ಬ್ಯಾಕ್‌ಹ್ಯಾಂಡ್‌ ಹೊಡೆತಗಳ ಮೂಲಕ ಸೆಟ್‌ ಮೇಲೆ ಹಿಡಿತ ಸಾಧಿಸಲು ಯತ್ನಿಸಿದರು. ಜಿದ್ದಾಜಿದ್ದಿನ ಹೋರಾಟದಿಂದ ಕೂಡಿದ್ದ ಈ ಸೆಟ್‌ನ ಕೊನೆಯಲ್ಲಿ ಸರ್ವೀಸ್‌ ಬ್ರೇಕ್‌ ಪಡೆದ ಫೆಡರರ್‌ ಅವರು ಪಾಯಿಂಟ್‌ ಗಳಿಸಿ ಪಂದ್ಯ ಜಯಿಸಿದರು. 

ಇನ್ನೊಂದು ಸೆಮಿಫೈನಲ್‌ ಪಂದ್ಯದಲ್ಲಿ ಸ್ಪೇನ್‌ನ ರಾಬರ್ಟೊ ಬೌಟಿಸ್ಟಾ ಹಾಗೂ ಕ್ರೊವೇಷ್ಯಾದ ಬೊರ್ನಾ ಕೊರಿಕ್‌ ಅವರು ಸೆಣಸಲಿದ್ದಾರೆ.  

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !