ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ ಅಣಕು ಶವಯಾತ್ರೆ

Last Updated 4 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ನರೇಂದ್ರ ಮೋದಿ ಅವರು ಭಾಷಣದಲ್ಲಿ ಮಹದಾಯಿ ವಿವಾದದ ಬಗ್ಗೆ ಪ್ರಸ್ತಾಪಿಸದಿರುವುದನ್ನು ಖಂಡಿಸಿ ಜನಸಾಮಾನ್ಯರ ಪಕ್ಷದ ಸದಸ್ಯರು, ಅವರ ಅಣಕು ಇಲ್ಲಿ ಶವಯಾತ್ರೆ ನಡೆಸಿದರು.

ಮೋದಿ ಅವರ ಭಾಷಣ ಮುಗಿಯುತ್ತಿದ್ದಂತೆ, ಪ್ರತಿಭಟನಾಕಾರರು ಬಿಳಿ ಬಟ್ಟೆ ಹೂದಿಸಿ ಹೂವು ಹಾಕಿದ್ದ ಮೋದಿ ಅವರ ಅಣಕು ಶವವನ್ನು ಚಟ್ಟದಲ್ಲಿ ಹೊತ್ತುಕೊಂಡು ಸ್ವಾತಂತ್ರ್ಯ ಉದ್ಯಾನ, ಕನಕದಾಸ ರಸ್ತೆ ಹಾಗೂ ಶೇಷಾದ್ರಿ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದರು.   ಸ್ವಾತಂತ್ರ್ಯ ಉದ್ಯಾನದಲ್ಲಿ ಅಣಕು ಶವಕ್ಕೆ ಬೆಂಕಿ ಇಟ್ಟರು.

‘ನಮ್ಮ ಪಾಲಿಗೆ ಮೋದಿ ಸತ್ತರು’ ಎಂದು ಬಾಯಿ ಬಡಿದುಕೊಂಡರು.

ಇದೇ ವೇಳೆ, ‘ಭಾಷಣ ಸಾಕು ಅಭಿವೃದ್ಧಿ ಬೇಕು’, ‘ನಿಮ್ಮ ಮನದ ಮಾತು ಬಿಡಿ, ಜನರ ಮಾತು ಕೇಳಿ’, ‘ರಕ್ತ ಕೊಟ್ಟೇವು ನೀರು ಬಿಡೆವು’, ‘ಮೋದಿಯ ಓಳು ಜನಸಾಮಾನ್ಯರ ಗೋಳು’, ‘ಮನ್‌ ಕೀ ಬಾತ್‌ ಬಂದ್‌ ಕರೋ, ಜನ್‌ ಕೀ ಬಾತ್ ಸುನೋ’ ಎಂಬ ಘೋಷವಾಕ್ಯಗಳನ್ನು ಹೊಂದಿರುವ ಫಲಕಗಳನ್ನು ಪ್ರದರ್ಶಿಸಿದರು.‌

ವಿವಾದ ಬಗೆಹರಿಸಲು ಪ್ರಧಾನಿ ಮಧ್ಯಸ್ಥಿಕೆ ವಹಿಸಬೇಕು ಎಂದು ಆಗ್ರಹಿಸಿ ಸಾಹಿತಿ ಚಂದ್ರಶೇಖರ ಪಾಟೀಲ ಹಾಗೂ ಕಳಸಾ ಬಂಡೂರಿ ನಾಲಾ ಮಲಪ್ರಭಾ ಜೋಡಣೆ ಯುವ ಹೋರಾಟ ಕೇಂದ್ರ ಸಮಿತಿ ಅಧ್ಯಕ್ಷ ವಿಜಯ ಕುಲಕರ್ಣಿ ನೇತೃತ್ವದಲ್ಲಿ ಜ. 31ರಿಂದಲೇ ಸ್ವಾತಂತ್ರ್ಯಉದ್ಯಾನದಲ್ಲಿ ಅಹೋರಾತ್ರಿ ಧರಣಿ ನಡೆಯುತ್ತಿದೆ.

50 ಮಂದಿ ವಶಕ್ಕೆ: ಕರಾಳ ದಿನ ಆಚರಿಸಿದ ಕನ್ನಡ ಸಂಘಟನೆಗಳ ಒಕ್ಕೂಟದ ಕಾರ್ಯಕರ್ತರು ಬಿಜೆಪಿಯ ಪರಿವರ್ತನಾ ರ‍್ಯಾಲಿ ಸಮಾರೋಪ ಸಮಾರಂಭಕ್ಕೆ ಮುತ್ತಿಗೆ ಹಾಕಲು ಯತ್ನಿಸಿದರು.

ಒಕ್ಕೂಟದ ಅಧ್ಯಕ್ಷ ವಾಟಾಳ್‌ ನಾಗರಾಜ್‌ ನೇತೃತ್ವದಲ್ಲಿ ಸ್ವಾತಂತ್ರ್ಯ ಉದ್ಯಾನದಿಂದ  ಮೈದಾನದತ್ತ ಮೆರವಣಿಗೆ ಹೊರಟಿದ್ದ ಪ್ರತಿಭಟನಾಕಾರರನ್ನು ಪೊಲೀಸರು ಶೇಷಾದ್ರಿ ರಸ್ತೆಯಲ್ಲೇ ತಡೆದರು. ಈ ವೇಳೆ ಮಾತಿನ ಚಕಮಕಿ ನಡೆಯಿತು.

ವಾಟಾಳ್‌ ನಾಗರಾಜ್, ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದು ಸೇರಿದಂತೆ 50 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದು ಬಸ್ಸಿನಲ್ಲಿ ಆಡುಗೋಡಿ ಸಿಎಆರ್ ಮೈದಾನಕ್ಕೆ ಕರೆದೊಯ್ದರು. ಅವರೆಲ್ಲರನ್ನೂ ರಾತ್ರಿ ಬಿಡುಗಡೆ ಮಾಡಿದರು.

* ಮಹದಾಯಿ ಯೋಜನೆ ಬಗ್ಗೆ ಮೋದಿ ಮಾತನಾಡಬೇಕು. ಇಲ್ಲದಿದ್ದರೆ, ಬಂದ್ ಬದಲು ನಿಶ್ಯಬ್ಧ ಪ್ರತಿಭಟನೆ ನಡೆಸಲಿದ್ದೇವೆ

– ವಾಟಾಳ್‌ ನಾಗರಾಜ್

* ಮೋದಿ ಇಡೀ ದೇಶದ ಪ್ರಧಾನಿ. ಅವರು ಮೌನಿ ಬಾಬಾ ಆಗಿರೋದನ್ನು ಬಿಡಬೇಕು. ಕಳಸಾ ಬಂಡೂರಿ ವಿವಾದದ ಬಗ್ಗೆ ಮಾತನಾಡಬೇಕು  

– ಚಂದ್ರಶೇಖರ ಪಾಟೀಲ

ಕಾಂಗ್ರೆಸ್‌ ಮುಕ್ತ ಮಾಡುವುದಾಗಿ ಹೇಳಿರುವುದು ಮೋದಿ ಕಲ್ಪನೆ ಅಷ್ಟೇ. ಅದನ್ನು ಜನರು ತೀರ್ಮಾನ ಮಾಡಬೇಕು

- ಎಚ್‌.ಡಿ.ದೇವೇಗೌಡ, ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT