ಮಂಗಳವಾರ, ಅಕ್ಟೋಬರ್ 26, 2021
20 °C

ಟೆನಿಸ್‌ ಟೂರ್ನಿ: ಅನಸ್ತಾಸಿಯಾ ಮಣಿಸಿದ ಲೇಲಾ, ಮರ್ರೆ ಜಯಭೇರಿ

ಎಪಿ Updated:

ಅಕ್ಷರ ಗಾತ್ರ : | |

Prajavani

ಇಂಡಿಯನ್ ವೆಲ್ಸ್, ಅಮೆರಿಕ: ಒಂಬತ್ತನೇ ಶ್ರೇಯಾಂಕದ ಅನಸ್ತಾಸಿಯಾ ಪಾವ್ಲಿಚೆಂಕೊವಾ ಅವರಿಗೆ ಆಘಾತ ನೀಡಿದ ಯುವ ಆಟಗಾರ್ತಿ ಲೇಲಾ ಫರ್ನಾಂಡಸ್‌, ಬಿಎನ್‌ಪಿ ಪರಿಬಾಸ್‌ ಓಪನ್ ಟೆನಿಸ್‌ ಟೂರ್ನಿಯ ಮೂರನೇ ಸುತ್ತಿಗೆ ಲಗ್ಗೆಯಿಟ್ಟರು.

ಅಮೆರಿಕ ಓಪನ್ ರನ್ನರ್ ಅಪ್ ಆಗಿರುವ ಕೆನಡಾದ ಲೇಲಾ 5-7, 6-3, 6-4ರಿಂದ ರಷ್ಯಾ ಆಟಗಾರ್ತಿಯನ್ನು ಮಣಿಸಿದರು. ಮೊದಲ ಸೆಟ್‌ ಸೋತರೂ ಎಂದೆಗುಂದದ 23ನೇ ಶ್ರೇಯಾಂಕದ ಲೇಲಾ, ಅನುಭವಿ ಎದುರಾಳಿ ವಿರುದ್ಧ ಗೆದ್ದು ಬೀಗಿದರು.

ಟೂರ್ನಿಯ ಡಬಲ್ಸ್ ವಿಭಾಗದಲ್ಲೂ ಲೇಲಾ ಮುನ್ನಡೆದರು. ಅಮೆರಿಕದ ಕೊಕೊ ಗಫ್‌ ಜೊತೆಗೂಡಿದ ಅವರು ಕ್ವಾರ್ಟರ್‌ಫೈನಲ್‌ ತಲುಪಿದ್ದಾರೆ.

ಮಹಿಳಾ ಸಿಂಗಲ್ಸ್ ಮತ್ತೊಂದು ಪಂದ್ಯದಲ್ಲಿ ಫ್ರೆಂಚ್ ಓಪನ್‌ ಚಾಂಪಿಯನ್‌, ಪೋಲೆಂಡ್‌ನ ಇಗಾ ಸ್ವೆಟೆಕ್‌ 6-1, 6-0ರಿಂದ ರಷ್ಯಾದ ವೆರೋನಿಕಾ ಕುದರ್ಮೆಟೊವಾ ಎದುರು ಜಯ ಸಾಧಿಸಿದರು. ಕೇವಲ 54 ನಿಮಿಷಗಳಲ್ಲಿ ಸ್ವೆಟೆಕ್ ಅವರಿಗೆ ಜಯ ಒಲಿಯಿತು.

ಮರ್ರೆ ಜಯಭೇರಿ: ಎರಡು ಬಾರಿಯ ಗ್ರ್ಯಾನ್‌ಸ್ಲಾಮ್ ಚಾಂಪಿಯನ್‌, ಬ್ರಿಟನ್‌ನ ಆ್ಯಂಡಿ ಮರ್ರೆ 2016ರ ಬಳಿಕ ಮೊದಲ ಬಾರಿ ಟೂರ್ನಿಯ ಮೂರನೇ ಸುತ್ತು ತಲುಪಿದರು. ಪುರುಷರ ಸಿಂಗಲ್ಸ್ ವಿಭಾಗದ ಎರಡನೇ ಸುತ್ತಿನ ಪಂದ್ಯದಲ್ಲಿ ಅವರು 5-7, 6-3, 6-2ರಿಂದ ಸ್ಪೇನ್‌ನ 18ರ ಹರೆಯದ ಕಾರ್ಲೊಸ್ ಅಲ್ಕರೆಜ್ ಅವರನ್ನು ಮಣಿಸಿದರು.

34 ವರ್ಷದ ಮರ್ರೆ ಅವರು ಟೂರ್ನಿಗೆ ವೈಲ್ಡ್ ಕಾರ್ಡ್‌ ಪ್ರವೇಶ ಪಡೆದಿದ್ದಾರೆ.

ಇನ್ನೊಂದು ಪಂದ್ಯದಲ್ಲಿ ಕೆನಡಾದ ಫೆಲಿಕ್ಸ್ ಅಗರ್‌ ಅಲಿಯಾಸ್ಸಿಮ್ ಅವರು 4–6, 2–6ರಿಂದ ಸ್ಪೇನ್‌ನ ಆಲ್ಬರ್ಟ್‌ ರಾಮೊಸ್‌ ವಿನೊಲಾಸ್ ಎದುರು ಮಣಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು