ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪ್ಪನ ಗೆಲುವು ಕಣ್ತುಂಬಿಕೊಂಡ ಮಗ

ಫ್ರೆಂಚ್‌ ಓಪನ್‌ ಟೆನಿಸ್‌: ಮೂರನೇ ಸುತ್ತಿಗೆ ಲಗ್ಗೆ ಇಟ್ಟ ಜೊಕೊವಿಚ್‌
Last Updated 30 ಮೇ 2019, 19:52 IST
ಅಕ್ಷರ ಗಾತ್ರ

ಪ್ಯಾರಿಸ್‌: ಸುಜಾನೆ ಲೆಂಗ್ಲೆನ್‌ ಅಂಗಳದಲ್ಲಿ ಗುರುವಾರ ನಡೆದ ಪುರುಷರ ಸಿಂಗಲ್ಸ್‌ ವಿಭಾಗದ ಎರಡನೇ ಸುತ್ತಿನ ಪಂದ್ಯವು ಭಾವನಾತ್ಮಕ ಕ್ಷಣಕ್ಕೆ ಸಾಕ್ಷಿಯಾಯಿತು.

ವಿಶ್ವ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನದಲ್ಲಿರುವ ನೊವಾಕ್‌ ಜೊಕೊವಿಚ್‌ 6–1, 6–4, 6–3ರಲ್ಲಿ ಸ್ವಿಟ್ಜರ್‌ಲೆಂಡ್‌ನ ಹೆನ್ರಿ ಲಾಕ್ಸನೆನ್‌ ಅವರನ್ನು ಪರಾಭವಗೊಳಿಸಿದರು. ಜೊಕೊವಿಚ್‌ ಅವರ ನಾಲ್ಕು ವರ್ಷದ ಮಗ ಸ್ಟೀಫನ್‌, ಆಟಗಾರರ ಗ್ಯಾಲರಿಯಲ್ಲಿ ಕುಳಿತು ಅಪ್ಪನ ಗೆಲುವನ್ನು ಕಣ್ತುಂಬಿಕೊಂಡನು.

‘ನನ್ನ ಆಟವನ್ನು ನೋಡಲು ಇದೇ ಮೊದಲ ಸಲ ಸ್ಟೀಫನ್‌ ಕ್ರೀಡಾಂಗಣಕ್ಕೆ ಬಂದಿದ್ದ. ಅವನಿಗೆ ಗೆಲುವಿನ ಉಡುಗೊರೆ ನೀಡಿದ್ದರಿಂದ ಖುಷಿಯಾಗಿದೆ. ಈ ದಿನ ನನ್ನ ಪಾಲಿಗೆ ತುಂಬಾ ವಿಶೇಷವಾದುದು. ಈ ಕ್ಷಣವನ್ನು ಎಂದಿಗೂ ಮರೆಯುವುದಿಲ್ಲ’ ಎಂದು ಜೊಕೊವಿಚ್‌ ಭಾವನಾತ್ಮಕವಾಗಿ ನುಡಿದರು.

ಸರ್ಬಿಯಾದ ಜೊಕೊವಿಚ್‌, ಮೊದಲ ಸೆಟ್‌ನಲ್ಲಿ ನಿರಾಯಾಸವಾಗಿ ಗೆದ್ದರು. ಎರಡು ಬಾರಿ ಎದುರಾಳಿಯ ಸರ್ವ್‌ ಮುರಿದು ಪ್ರೇಕ್ಷಕರಿಂದ ಚಪ್ಪಾಳೆ ಗಿಟ್ಟಿಸಿದರು.

ಟೂರ್ನಿಯಲ್ಲಿ ಅಗ್ರಶ್ರೇಯಾಂಕ ಹೊಂದಿರುವ ನೊವಾಕ್‌, ಎರಡನೇ ಸೆಟ್‌ನಲ್ಲಿ ಲಾಕ್ಸನೆನ್‌ ಅವರಿಂದ ಪ್ರಬಲ ಪೈಪೋಟಿ ಎದುರಿಸಿದರು. ಎಂಟು ಗೇಮ್‌ಗಳಲ್ಲಿ ಇಬ್ಬರೂ ಸಮಬಲದಿಂದ ಹೋರಾಡಿದರು. ನಂತರದ ಎರಡು ಗೇಮ್‌ಗಳಲ್ಲಿ ಪರಾಕ್ರಮ ಮೆರೆದ ಜೊಕೊವಿಚ್‌ ಸಂಭ್ರಮಿಸಿದರು.

ಮೂರನೇ ಗೇಮ್‌ನಲ್ಲೂ ಸರ್ಬಿಯಾದ ಆಟಗಾರ ಮೇಲುಗೈ ಸಾಧಿಸಿದರು.

ಮುಂದಿನ ಸುತ್ತಿನಲ್ಲಿ ಜೊಕೊವಿಚ್‌, ಇಟಲಿಯ ಆಟಗಾರ ಸ್ಯಾಲ್ವಟೋರ್‌ ಕ್ಯಾರಸೊ ಎದುರು ಸೆಣಸಲಿದ್ದಾರೆ.

ಎರಡನೇ ಸುತ್ತಿನ ಇನ್ನೊಂದು ಹಣಾಹಣಿಯಲ್ಲಿ ಕ್ಯಾರಸೊ 6–1, 6–2, 6–4ರಲ್ಲಿ ಫ್ರಾನ್ಸ್‌ನ ಗಿಲ್ಲೆಸ್‌ ಸಿಮನ್‌ಗೆ ಆಘಾತ ನೀಡಿದ್ದರು.

ಇತರೆ ಪಂದ್ಯಗಳಲ್ಲಿ ಡಾಮಿನಿಕ್‌ ಥೀಮ್‌ 6–3, 6–7, 6–3, 7–5ರಲ್ಲಿ ಅಲೆಕ್ಸಾಂಡರ್‌ ಬಬ್ಲಿಕ್‌ ಎದುರೂ, ಲಿಯೊನಾರ್ಡೊ ಮೇಯರ್‌ 4–6, 6–3, 6–4, 7–5ರಲ್ಲಿ ಡೀಗೊ ಸ್ವಾರ್ಟ್ಜ್‌ಮನ್‌ ಮೇಲೂ, ದುಸಾನ್‌ ಲಾಜೊವಿಚ್‌ 6–3, 6–3, 6–4ರಲ್ಲಿ ಏಲಿಯಟ್‌ ಬೆಂಚೆಟ್ರೀಟ್‌ ವಿರುದ್ಧವೂ ಗೆದ್ದರು.

ಮೂರನೇ ಸುತ್ತಿಗೆ ಸೆರೆನಾ: ಮಹಿಳಾ ಸಿಂಗಲ್ಸ್‌ ವಿಭಾಗದಲ್ಲಿ ಕಣದಲ್ಲಿರುವ ಅಮೆರಿಕದ ಸೆರೆನಾ ವಿಲಿಯಮ್ಸ್‌, ಮೂರನೇ ಸುತ್ತಿಗೆ ಲಗ್ಗೆ ಇಟ್ಟರು.

ಎರಡನೇ ಸುತ್ತಿನ ಹಣಾಹಣಿಯಲ್ಲಿ ಸೆರೆನಾ 6–3, 6–2 ನೇರ ಸೆಟ್‌ಗಳಿಂದ ಜಪಾನ್‌ನ ಕುರುಮಿ ನಾರಾ ಅವರನ್ನು ಸೋಲಿಸಿದರು.

ಜಪಾನ್‌ನ ಆಟಗಾರ್ತಿ, ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ನವೊಮಿ ಒಸಾಕ 4–6, 7–5, 6–3ರಲ್ಲಿ ಬೆಲಾರಸ್‌ನ ವಿಕ್ಟೋರಿಯಾ ಅಜರೆಂಕಾ ಅವರನ್ನು ಮಣಿಸಿದರು.

ಕ್ಯಾತರಿನಾ ಸಿನಿಯಾಕೊವಾ 7–6, 6–7, 6–3ರಲ್ಲಿ ಮರಿಯಾ ಸಕ್ಕಾರಿ ಎದುರೂ, ಆ್ಯಷ್ಲೆಗ್‌ ಬಾರ್ಟಿ 7–5, 6–1ರಲ್ಲಿ ಡೇನಿಯೆಲ್‌ ಕಾಲಿನ್ಸ್‌ ಮೇಲೂ, ಇಗಾ ಸ್ವಿಯಾಟೆಕ್‌ 6–3, 6–0ರಲ್ಲಿ ವಾಂಗ್‌ ಕ್ವಿಯಾಂಗ್‌ ವಿರುದ್ಧವೂ, ಅಮಂಡಾ ಅನಿಸಿಮೋವಾ 6–4, 6–2ರಲ್ಲಿ ಆರ್ಯನ ಸಬಲೆಂಕಾ ಮೇಲೂ, ಏಕ್ತರಿನಾ ಅಲೆಕ್ಸಾಂಡ್ರೋವಾ 3–6, 6–1, 6–4ರಲ್ಲಿ ಸಮಂತಾ ಸೊಸುರ್‌ ಎದುರೂ, ಬೆಲಿಂದಾ ಬೆನ್‌ಸಿಸ್‌ 4–6, 6–4, 6–4ರಲ್ಲಿ ಲೌರಾ ಸಿಗ್ಮಂಡ್‌ ವಿರುದ್ಧವೂ ವಿಜಯಿಯಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT