ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫ್ರೆಂಚ್‌ ಓಪನ್‌ : ಫೆಡರರ್‌ ಕ್ವಾರ್ಟರ್‌ಫೈನಲ್‌ಗೆ, ಬೋಪಣ್ಣ, ಪೇಸ್‌ ಹೊರಕ್ಕೆ

Last Updated 2 ಜೂನ್ 2019, 19:16 IST
ಅಕ್ಷರ ಗಾತ್ರ

ಪ್ಯಾರಿಸ್‌ (ಎಎಫ್‌ಪಿ): ಸ್ವಿಟ್ಜರ್‌ಲೆಂಡ್‌ ಆಟಗಾರ ರೋಜರ್‌ ಫೆಡರರ್‌ ಅವರು ಭಾನುವಾರ ಫ್ರೆಂಚ್‌ ಓಪನ್‌ ಟೆನಿಸ್‌ ಟೂರ್ನಿಯಲ್ಲಿ 12ನೇ ಬಾರಿ ಕ್ವಾರ್ಟರ್‌ಫೈನಲ್‌ ತಲುಪಿದ ಸಾಧನೆ ಮಾಡಿದರು. ಆ ಮೂಲಕ 28 ವರ್ಷಗಳ ಬಳಿಕ ಗ್ರ್ಯಾನ್‌ಸ್ಲಾಮ್‌ ಒಂದರ ಎಂಟರ ಘಟ್ಟ ಪ್ರವೇಶಿಸಿದ ಅತಿ ಹಿರಿಯ ಆಟಗಾರ ಎನಿಸಿಕೊಂಡರು. 1991ರಲ್ಲಿ ಜಿಮ್ಮಿ ಕಾನರ್ಸ್‌ ಯುಎಸ್‌ ಓಪನ್‌ ಟೆನಿಸ್‌ ಟೂರ್ನಿಯಲ್ಲಿ ಈ ಸಾಧನೆಗೆ ಪಾತ್ರರಾಗಿದ್ದರು.

37 ವರ್ಷದ ಫೆಡರರ್‌, ಪ್ರಿಕ್ವಾರ್ಟರ್‌ಫೈನಲ್‌ನಲ್ಲಿ ಅರ್ಜೆಂಟೀನಾದ ಲಿಯೊನಾರ್ಡೊ ಮೇಯರ್‌ ವಿರುದ್ಧ 6–2, 6–3, 6–3 ಸೆಟ್‌ಗಳಿಂದ ಜಯದ ತೋರಣ ಕಟ್ಟಿದರು.

ಮಹಿಳಾ ಸಿಂಗಲ್ಸ್‌ನಲ್ಲಿ ತಮ್ಮ ಗೆಲುವಿನ ಓಟವನ್ನು ಬ್ರಿಟನ್‌ ಆಟಗಾರ್ತಿ ಜೊಹಾನ್ನಾ ಕೊಂಟಾ ಅವರು ಭಾನುವಾರ ಟೂರ್ನಿಯ ಕ್ವಾರ್ಟರ್‌ಫೈನಲ್‌ಗೆ ಲಗ್ಗೆಯಿಟ್ಟರು. ಕ್ರೊವೇಷ್ಯಾದ ಡೊನ್ನಾ ವೆಕಿಕ್‌ ಅವರನ್ನು 6–2, 6–4 ಸೆಟ್‌ಗಳಿಂದ ಅವರು ಮಣಿಸಿದರು.
ಆ ಮೂಲಕ 36 ವರ್ಷಗಳ ಬಳಿಕ ಫ್ರೆಂಚ್‌ ಓಪನ್‌ ಟೂರ್ನಿಯ ಎಂಟರ ಘಟ್ಟಕ್ಕೆ ಲಗ್ಗೆಯಿಟ್ಟ ಮೊದಲ ಬ್ರಿಟಿಷ್‌ ಆಟಗಾರ್ತಿ ಪಟ್ಟ ಅವರಿಗೆ ಸಿಕ್ಕಿತು.

ಮಹಿಳೆಯರ ನಾಲ್ಕನೇ ಸುತ್ತಿನ ಇತರ ಪಂದ್ಯಗಳಲ್ಲಿ ಮರ್ಕೆಟಾ ವೊಂಡ್ರೊಸೊವಾ ಅವರು ಅನಸ್ತಾಸಿಯಾ ಸೆವಾತ್ಸೊವಾ ವಿರುದ್ಧ ಹಾಗೂ ಪೆಟ್ರಾ ಮಾರ್ಟಿಕ್‌ ಅವರು ಕಯ್ಯಾ ಕನೆಪಿ ಎದುರು ಗೆಲುವಿನ ನಗೆ ಬೀರಿದರು.

ಈ ಋತುವಿನಲ್ಲಿ ಸತತ ಮೂರನೇ ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿ ಗೆದ್ದು ದಾಖಲೆ ಬರೆಯಲು ಅಣಿಯಾಗಿದ್ದ ವಿಶ್ವ ನಂ.1 ಆಟಗಾರ್ತಿ ಜಪಾನ್‌ನ ನವೊಮಿ ಒಸಾಕ ಶನಿವಾರ ಮುಗ್ಗರಿಸಿದ್ದಾರೆ. ಮೂರನೇ ಸುತ್ತಿನ ಪಂದ್ಯದಲ್ಲಿ ಅವರು ಕಟೆರಿನಾ ಸಿನಿಯಾಕೊವಾ ವಿರುದ್ಧ ನೇರ ಸೆಟ್‌ಗಳಿಂದ ಸೋತರು.

ಶನಿವಾರ ಮೂರನೇ ಸುತ್ತಿನ ಮತ್ತೊಂದು ಅಚ್ಚರಿಯ ಫಲಿತಾಂಶದಲ್ಲಿ 24ನೇ ಗ್ರ್ಯಾನ್‌ಸ್ಲಾಮ್‌ ಕನಸಿನಲ್ಲಿದ್ದ ಅಮೆರಿಕದ ಸೆರೆನಾ ವಿಲಿಯಮ್ಸ್‌ ಅವರು ತಮ್ಮದೇ ದೇಶದ ಸೋಫಿಯಾ ಕೆನಿನ್‌ ವಿರುದ್ಧ 2–6, 5–7 ಸೆಟ್‌ಗಳಿಂದ ಎಡವಿದರು.

ಟೂರ್ನಿಯಿಂದ ಬೋಪಣ್ಣ, ಲಿಯಾಂಡರ್‌ ಪೇಸ್‌ ಹೊರಕ್ಕೆ

ಭಾರತದ ರೋಹನ್‌ ಬೋಪಣ್ಣ ಹಾಗೂ ಅವರ ರೋಮೆನಿಯಾ ಜೊತೆಗಾರ ಮಾರಿಯಸ್‌ ಕೊಪಿಲ್‌ ಅವರು ಟೂರ್ನಿಯಲ್ಲಿ ನಿರಾಸೆ ಕಂಡರು. ಪುರುಷರ ಡಬಲ್ಸ್‌ನ ಮೂರನೇ ಸುತ್ತಿನ ಪಂದ್ಯದಲ್ಲಿ ಸರ್ಬಿಯಾದ ಡುಸನ್ ಲಾಜೊವಿಕ್‌ ಹಾಗೂ ಜಾಂಕೊ ಟಿಪ್ಸಾರೆವಿಕ್‌ ಜೋಡಿಗೆ 6–1, 5–7, 6–7 (8–10) ಸೆಟ್‌ಗಳಿಂದ ಶರಣಾಯಿತು. ಪ್ರಬಲ ಪೈಪೋಟಿ ಕಂಡುಬಂದ ಪಂದ್ಯದಲ್ಲಿ ಮೊದಲ ಸೆಟ್‌ ಭರ್ಜರಿಯಾಗಿ ಗೆದ್ದರೂ ಅದೇ ಪ್ರದರ್ಶನವನ್ನು ಮುಂದುವರಿಸುವಲ್ಲಿ ಭಾರತ–ರೋಮೆನಿಯಾ ಜೋಡಿ ವಿಫಲವಾಯಿತು.

ಶನಿವಾರ ನಡೆದ ಪುರುಷರ ಡಬಲ್ಸ್‌ಪಂದ್ಯದಲ್ಲಿ ಭಾರತದ ಅನುಭವಿ ಆಟಗಾರ ಲಿಯಾಂಡರ್‌ ಪೇಸ್‌ ಕೂಡ ಸೋಲಿನೊಂದಿಗೆ ಅಭಿಯಾನ ಕೊನೆಗೊಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT