ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಮಾನತೆಯ ಸಮಾಜ ಭಾಷಣಕ್ಕೆ ಸೀಮಿತ’

ಪುತ್ತೂರಿನ ಹಾರಾಡಿ ಮಕ್ಕಳ ಸಾಹಿತ್ಯ ಸಂಭ್ರಮದ ಸಮಾರೋಪ ಸಮಾರಂಭ
Last Updated 12 ಏಪ್ರಿಲ್ 2018, 10:16 IST
ಅಕ್ಷರ ಗಾತ್ರ

ಪುತ್ತೂರು: ‘ಸಮಾನತೆಯ ಆಧಾರದಲ್ಲಿ ಹೊಸ ಸಮಾಜ ಸೃಷ್ಟಿ ಮಾಡಬೇಕಾದ ನಾವು ಮೂಲದಲ್ಲೇ ಅಸಮಾನತೆ ಸೃಷ್ಟಿಸುತ್ತಿರುವ ಕಾರಣ ಸಮಾನತೆ ಎಂಬುದು ಕೇವಲ ಭಾಷಣಕ್ಕೆ ಸೀಮಿತವಾಗಿದೆ. ಇಂದು ಶಿಕ್ಷಣದ ಹಂತದಲ್ಲೇ ಅಸಮಾನತೆ ತಾಂಡವವಾಡುತ್ತಿದೆ' ಎಂದು ಪತ್ರಕರ್ತ ಸುಧಾಕರ ಸುವರ್ಣ ತಿಂಗಳಾಡಿ ಹೇಳಿದರು.

ಪುತ್ತೂರಿನ ಹಾರಾಡಿ ಸರ್ಕಾರಿ ಮಾದರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಡಾ. ಶಿವರಾಮ ಕಾರಂತ ಸಾಹಿತ್ಯ ವೇದಿಕೆ ಮತ್ತು `ಶಿವರಂಗ'ದ ಜಂಟಿ ಆಶ್ರಯದಲ್ಲಿ ಬುಧವಾರ ನಡೆದ ಮಕ್ಕಳ ಸಾಹಿತ್ಯ ಸಂಭ್ರಮದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಸಮಾನತೆಯ ಸಮಾಜ ನಿರ್ಮಾಣದ ಕೆಲಸ ಮಕ್ಕಳ ಮೂಲಕ ನಡೆಯಬೇಕು. ನಮ್ಮ ಮಕ್ಕಳನ್ನು ಸಮಾನತೆಯ ತತ್ವದ ಅಡಿಯಲ್ಲಿ ಬೆಳೆಸಿದರೆ ಭವಿಷ್ಯದ ಸಮಾಜ ಸಮಾನತೆಯ ಬುನಾದಿಯಲ್ಲಿ ಬೆಳೆಯುತ್ತದೆ. ಆದರೆ ಇಂದು ಶಿಕ್ಷಣ ರಂಗವೇ ಅಸಮಾನತೆಯ ಕೂಪದಲ್ಲಿದೆ. ಸರ್ಕಾರಿ, ಖಾಸಗಿ, ಕನ್ನಡ, ಇಂಗ್ಲಿಷ್ ಎಂಬ ಭೇದಗಳ ಮಧ್ಯೆ ಮಕ್ಕಳು ಬೆಳೆಯುತ್ತಿದ್ದಾರೆ. ಇಂಥ ತಾರತಮ್ಯದ ವ್ಯವಸ್ಥೆಯಲ್ಲಿ ಮಕ್ಕಳು ಹೇಗೆ ಸಮಾನತೆಯ ಸಮಾಜ ನಿರ್ಮಾಣ ಮಾಡಲು ಸಾಧ್ಯ’ ಎಂದು ಅವರು ಪ್ರಶ್ನಿಸಿದರು.

‘ವಿದ್ಯಾರ್ಥಿ ಹಂತದಲ್ಲೇ ಮಕ್ಕಳಿಗೆ ಹೆತ್ತವರು ಸಾಹಿತ್ಯದ ಅಭಿರುಚಿ ಮೂಡಿಸಲು ಪ್ರಯತ್ನಿಸಬೇಕು. ಅದರ ಬದಲು ಹೆತ್ತವರು ಟಿವಿ ಮುಂದೆ ಕಾಲ ಕಳೆಯುತ್ತಾ ಮಕ್ಕಳನ್ನು ಮಾತ್ರ ಓದಲು, ಬರೆಯಲು ಹಚ್ಚಿದರೆ ಅದು ಫಲ ನೀಡದು’ ಎಂದು ತಿಳಿಸಿದರು.

ಪುತ್ತೂರಿನ ರಾಮಕೃಷ್ಣ ಪ್ರೌಢಶಾಲೆಯ ನಿವೃತ್ತ ಮುಖ್ಯ ಶಿಕ್ಷಕ ಶ್ರೀಧರ ರೈ ಕೈಕಾರ ಅವರು ಮುಖ್ಯ ಅತಿಥಿಯಾಗಿ ಮಾತನಾಡಿ, ‘ಇಂದಿನ ಮಕ್ಕಳಿಗೆ ಎಲ್ಲ ರೀತಿಯ ಅನುಕೂಲಗಳೂ ಇವೆ. ಅದನ್ನು ಸದುಪಯೋಗ ಮಾಡಿಕೊಳ್ಳುವ ಕಲೆಯನ್ನು ಹೆತ್ತವರು ಮತ್ತು ಶಿಕ್ಷಕರು ಕಲಿಸಿಕೊಡಬೇಕಿದೆ. ಪ್ರತಿಯೊಬ್ಬ ಮಗುವಿನಲ್ಲೂ ವಿಶೇಷ ಶಕ್ತಿ ಇದ್ದೇ ಇದೆ. ಅದನ್ನು ಬೆಳಕಿಗೆ ತರಬೇಕಾದರೆ ಅವಕಾಶ ಮುಖ್ಯ’ ಎಂದರು.

ಅಧ್ಯಕ್ಷತೆ ವಹಿಸಿದ್ದ ಹಾರಾಡಿ ಶಾಲೆಯ ಹಿರಿಯ ವಿದ್ಯಾರ್ಥಿನಿ ಭಾಗ್ಯಲಕ್ಷ್ಮಿ ಮಾತನಾಡಿ, ‘ ಬಿಡುವಿನ ಸಮಯದಲ್ಲಿ ವಿದ್ಯಾರ್ಥಿಗಳು ಸ್ವಲ್ಪ ಮಟ್ಟಿಗಾದರೂ ಕತೆ, ಕಾದಂಬರಿ, ಪತ್ರಿಕೆ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದರು.

ಶಿಕ್ಷಣ ಸಂಯೋಜಕ ಲೋಕಾನಂದ, ಹಾರಾಡಿ ಶಾಲೆಯ ಮುಖ್ಯ ಶಿಕ್ಷಕ ಮುದರ.ಎಸ್,ಕ್ಷೇತ್ರ ಸಂಪನ್ಮೂಲ ಕೇಂದ್ರದ ಬಿಆರ್ಪಿ ದಿನೇಶ್ ಮಾಚಾರ್, ಶಾಲಾ ಎಸ್ಡಿಎಂಸಿಯ ಉಪಾಧ್ಯಕ್ಷ ಅಬೂಬಕ್ಕರ್ ಬಲ್ನಾಡು, ಶಾಲಾ ಎಸ್ಡಿಎಂಸಿ ಅಧ್ಯಕ್ಷೆ ಪ್ರತಿಮಾ ರೈ, ಹಿರಿಯ ರಂಗಕಮರ್ ಐ.ಕೆ. ಬೊಳುವಾರು, ಶಿಕ್ಷಕ ಪ್ರಶಾಂತ್ ಹಾರಾಡಿ  ಇದ್ದರು. ವಿದ್ಯಾರ್ಥಿ ಶ್ರೀನಿಧಿ ಸ್ವಾಗತಿಸಿದರು. ಶಿವಾನಿ ಬಿ. ವಂದಿಸಿದರು. ದಿಶಾ ಪರ್ಲ್‌ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT