ಸೋಮವಾರ, ಸೆಪ್ಟೆಂಬರ್ 28, 2020
29 °C
ಡೇವಿಸ್‌ ಕಪ್‌ ಟೆನಿಸ್‌: ಭಾರತ ತಂಡ ಪ್ರಕಟ; ಸುಮಿತ್‌ ನಗಾಲ್‌ ಅಲಭ್ಯ

ಪ್ರಮುಖರಿಗೆ ಪಾಕ್‌ ‘ಟಿಕೆಟ್‌’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ (ಪಿಟಿಐ): ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧದ ಡೇವಿಸ್‌ ಕಪ್‌ ಏಷ್ಯಾ ಒಸೀನಿಯಾ ಒಂದನೇ ಗುಂಪಿನ ಪಂದ್ಯಕ್ಕೆ ಸೋಮವಾರ ಭಾರತ ಟೆನಿಸ್‌ ತಂಡವನ್ನು ಪ್ರಕಟಿಸಲಾಗಿದೆ.

ಅಖಿಲ ಭಾರತ ಟೆನಿಸ್‌ ಸಂಸ್ಥೆಯ (ಎಐಟಿಎ) ಆಯ್ಕೆ ಸಮಿತಿಯು ಪ್ರಮುಖ ಆಟಗಾರರಿಗೆ ತಂಡದಲ್ಲಿ ಅವಕಾಶ ಕಲ್ಪಿಸಿದೆ.

ಗಾಯಗೊಂಡಿರುವ ಸುಮಿತ್‌ ನಗಾಲ್‌ ಅವರು ಆಯ್ಕೆಗೆ ಅಲಭ್ಯರಾಗಿದ್ದಾರೆ. ಹೀಗಾಗಿ ರೋಹಿತ್‌ ರಾಜಪಾಲ್‌, ಬಲರಾಮ್‌ ಸಿಂಗ್‌, ಜೀಶನ್‌ ಅಲಿ, ನಂದನ್‌ ಬಾಳ್ ಮತ್ತು ಅಂಕಿತಾ ಭಾಂಬ್ರಿ ಅವರಿದ್ದ ಸಮಿತಿಯು ಸಾಕೇತ್‌ ಮೈನೇನಿಗೆ ಸ್ಥಾನ ನೀಡಿದೆ.

2018ರ ಸೆಪ್ಟೆಂಬರ್‌ನಲ್ಲಿ ನಡೆದಿದ್ದ ಸರ್ಬಿಯಾ ಎದುರಿನ ಡೇವಿಸ್‌ ಕಪ್‌ ವಿಶ್ವ ಗುಂಪಿನ ‘ಪ್ಲೇ ಆಫ್‌’ ಪಂದ್ಯದ ಡಬಲ್ಸ್‌ನಲ್ಲಿ ಮೈನೇನಿ ಅವರು ರೋಹನ್‌ ಬೋಪಣ್ಣ ಜೊತೆಗೂಡಿ ಆಡಿದ್ದರು. ಆ ಹಣಾಹಣಿಯಲ್ಲಿ ಭಾರತದ ಜೋಡಿಯು ನಿಕೋಲಾ ಮಿಲೋಜೆವಿಚ್‌ ಮತ್ತು ಡೇನಿಲೊ ಪೆಟ್ರೊವಿಚ್‌ ಎದುರು ಸೋತಿತ್ತು.

31 ವರ್ಷದ ಮೈನೇನಿ, ಹೋದ ವಾರ ನಡೆದಿದ್ದ ಚೆಂಗ್ಡು ಚಾಲೆಂಜರ್‌ನ ಡಬಲ್ಸ್‌ನಲ್ಲಿ ಚಾಂಪಿಯನ್‌ ಆಗಿದ್ದರು.

ಪ್ರಜ್ಞೇಶ್‌ ಗುಣೇಶ್ವರನ್‌ ಮತ್ತು ರಾಮಕುಮಾರ್‌ ರಾಮನಾಥನ್‌, ಸಿಂಗಲ್ಸ್‌ನಲ್ಲಿ ತಂಡದ ಸವಾಲು ಮುನ್ನಡೆಸಲಿದ್ದಾರೆ. ರೋಹನ್‌ ಬೋಪಣ್ಣ ಮತ್ತು ದಿವಿಜ್‌ ಶರಣ್‌ ಅವರು ಡಬಲ್ಸ್‌ನಲ್ಲಿ ಜೊತೆಯಾಗಲಿದ್ದಾರೆ.

ಪ್ರಜ್ಞೇಶ್‌ ಅವರು ವಿಶ್ವ ಕ್ರಮಾಂಕ ಪಟ್ಟಿಯಲ್ಲಿ 90ನೇ ಸ್ಥಾನದಲ್ಲಿದ್ದಾರೆ. ರಾಮಕುಮಾರ್‌ ಮತ್ತು ಮೈನೇನಿ ಕ್ರಮವಾಗಿ 184 ಮತ್ತು 271ನೇ ಸ್ಥಾನಗಳಲ್ಲಿದ್ದಾರೆ.

ಭಾರತ ಮತ್ತು ಪಾಕಿಸ್ತಾನ ನಡುವಣ ಪೈಪೋಟಿ ಸೆಪ್ಟೆಂಬರ್‌ 14 ಮತ್ತು 15ರಂದು ಇಸ್ಲಾಮಬಾದ್‌ನಲ್ಲಿ ಆಯೋಜನೆಯಾಗಿದೆ. ಉಭಯ ತಂಡಗಳು ಇದುವರೆಗೂ ಡೇವಿಸ್‌ ಕಪ್‌ನಲ್ಲಿ ಆರು ಬಾರಿ ಮುಖಾಮುಖಿಯಾಗಿದ್ದು ಎಲ್ಲಾ ಹಣಾಹಣಿಗಳಲ್ಲೂ ಭಾರತವೇ ಗೆದ್ದಿದೆ.

‘ಹುಲ್ಲಿನಂಕಣದಲ್ಲಿ ಮೈನೇನಿ ಉತ್ತಮ ಗೆಲುವಿನ ದಾಖಲೆ ಹೊಂದಿದ್ದಾರೆ. ಶರವೇಗದ ಸರ್ವ್‌ಗಳನ್ನು ಸಿಡಿಸಬಲ್ಲ ಸಾಮರ್ಥ್ಯ ಹೊಂದಿದ್ದಾರೆ. ಹೀಗಾಗಿ ಅವರಿಗೆ ಅವಕಾಶ ನೀಡಿದ್ದೇವೆ’ ಎಂದು ಆಯ್ಕೆ ಸಮಿತಿ ಮುಖ್ಯಸ್ಥ ರೋಹಿತ್‌ ರಾಜಪಾಲ್‌ ತಿಳಿಸಿದ್ದಾರೆ.

‘ಜರ್ಮನಿಯಲ್ಲಿ ನಡೆದಿದ್ದ ಟೂರ್ನಿಯ ವೇಳೆ ಪಾದ ಉಳುಕಿತ್ತು.ಅದರಿಂದ ಇನ್ನೂ ಚೇತರಿಸಿಕೊಂಡಿಲ್ಲ. ಹೀಗಾಗಿ ಡೇವಿಸ್‌ ಕಪ್‌ನಲ್ಲಿ ಆಡಲು ಸಾಧ್ಯವಿಲ್ಲ ಎಂದು ಸುಮಿತ್‌, ಇ–ಮೇಲ್‌ ಮೂಲಕ ನಮಗೆ ಮಾಹಿತಿ ನೀಡಿದ್ದಾರೆ. ಆದ್ದರಿಂದ ಅವರನ್ನು ಆಯ್ಕೆಗೆ ಪರಿಗಣಿಸಿಲ್ಲ’ ಎಂದಿದ್ದಾರೆ.

‘ಸುಮಿತ್‌ ನೀಡಿರುವ ಕಾರಣದ ಸತ್ಯಾಸತ್ಯತೆಯನ್ನು ಪರಿಶೀಲಿಸುತ್ತೇವೆ. ಒಂದೊಮ್ಮೆ ಸುಳ್ಳು ಮಾಹಿತಿ ನೀಡಿರುವುದು ಖಚಿತವಾದರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಈ ಸಂಬಂಧ ಎಐಟಿಎಗೂ ದೂರು ನೀಡುತ್ತೇವೆ’ ಎಂದು ತಿಳಿಸಿದ್ದಾರೆ.

ತಂಡ ಇಂತಿದೆ: ಪ್ರಜ್ಞೇಶ್‌ ಗುಣೇಶ್ವರನ್‌, ರಾಮಕುಮಾರ್‌ ರಾಮನಾಥನ್‌, ಸಾಕೇತ್‌ ಮೈನೇನಿ, ರೋಹನ್‌ ಬೋಪಣ್ಣ ಮತ್ತು ದಿವಿಜ್‌ ಶರಣ್‌.

ಕಾಯ್ದಿರಿಸಿದ ಆಟಗಾರ: ಶಶಿಕುಮಾರ್‌ ಮುಕುಂದ್‌.

ಆಟವಾಡದ ನಾಯಕ: ಮಹೇಶ್‌ ಭೂಪತಿ.

ಕೋಚ್‌: ಜೀಶನ್‌ ಅಲಿ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು