ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೆನಿಸ್‌: ಭಾರತದ ಜಯಭೇರಿ

Last Updated 9 ಏಪ್ರಿಲ್ 2019, 15:52 IST
ಅಕ್ಷರ ಗಾತ್ರ

ಬ್ಯಾಂಕಾಕ್‌: ಅಜಯ್‌ ಮಲಿಕ್‌ ಅವರ ಅಮೋಘ ಆಟದ ಬಲದಿಂದ ಭಾರತ ಜೂನಿಯರ್‌ ಬಾಲಕರ ತಂಡವು ಡೇವಿಸ್‌ ಕಪ್‌, ಏಷ್ಯಾ ಒಸೀನಿಯಾ ಅರ್ಹತಾ ಟೆನಿಸ್‌ ಟೂರ್ನಿಯ ಪಂದ್ಯದಲ್ಲಿ ಜಯಭೇರಿ ಮೊಳಗಿಸಿದೆ.

ಮಂಗಳವಾರ ನಡೆದ ಪೈಪೋಟಿಯಲ್ಲಿ ಭಾರತ 3–0ರಿಂದ ಇಂಡೊನೇಷ್ಯಾವನ್ನು ಮಣಿಸಿತು.

ಮೊದಲ ಸಿಂಗಲ್ಸ್‌ನಲ್ಲಿ ಕಣಕ್ಕಿಳಿದಿದ್ದ ಅಜಯ್‌, ಮೋಡಿ ಮಾಡಿದರು. ಅವರು 6–4, 6–2 ನೇರ ಸೆಟ್‌ಗಳಿಂದ ಮೊಹ್‌ ಗುಣಾವನ್‌ ತ್ರಿಸ್ಮುವಂತರ ಅವರನ್ನು ಪರಾಭವಗೊಳಿಸಿದರು.

ಮೊದಲ ಸೆಟ್‌ನ ಆರಂಭದ ಎಂಟು ಗೇಮ್‌ಗಳಲ್ಲಿ ಎದುರಾಳಿಯಿಂದ ಪ್ರಬಲ ಪೈಪೋಟಿ ಎದುರಿಸಿದ ಭಾರತದ ಆಟಗಾರ ನಂತರ ಮಿಂಚಿದರು. ಶರವೇಗದ ಸರ್ವ್‌ ಮತ್ತು ಬಲಿಷ್ಠ ಕ್ರಾಸ್‌ಕೋರ್ಟ್‌ ಸ್ಮ್ಯಾಷ್‌ಗಳ ಮೂಲಕ ಮೊಹ್‌ ಅವರನ್ನು ಮಣಿಸಿದರು.

ಎರಡನೇ ಸೆಟ್‌ನಲ್ಲೂ ಅಜಯ್‌ ಆಟ ರಂಗೇರಿತು. ಆರಂಭದಲ್ಲೇ ಎದುರಾಳಿಯ ಸರ್ವ್‌ ಮುರಿದು ಮುನ್ನಡೆ ಪಡೆದ ಅವರು ನಂತರವೂ ಪರಿಣಾಮಕಾರಿ ಸಾಮರ್ಥ್ಯ ತೋರಿ ಗೆಲುವಿನ ತೋರಣ ಕಟ್ಟಿದರು.

ಎರಡನೇ ಸಿಂಗಲ್ಸ್‌ನಲ್ಲಿ ಸುಶಾಂತ್‌ ದಬಾಸ್‌ ಅವರು ನವಾಲ್ಡೊ ಜತಿ ಅಗತ್ರ ವಿರುದ್ಧ ಗೆದ್ದು ಭಾರತಕ್ಕೆ 2–0 ಮುನ್ನಡೆ ತಂದುಕೊಟ್ಟರು.

ಡಬಲ್ಸ್‌ ವಿಭಾಗದ ಪಂದ್ಯದಲ್ಲೂ ಭಾರತ ಪ್ರಾಬಲ್ಯ ಮೆರೆಯಿತು. ಅಜಯ್‌ ಮತ್ತು ದೀವೇಶ್‌ ಗೆಹ್ಲೋಟ್‌ 6–7, 6–2, 10–4ರಲ್ಲಿ ಅಗತ್ರ ಮತ್ತು ಲಕ್ಕಿ ಕ್ಯಾಂಡ್ರ ಕುರ್ನಿವಾನ್‌ ಅವರನ್ನು ಸೋಲಿಸಿದರು.

ಮುಂದಿನ ಪಂದ್ಯದಲ್ಲಿ ಭಾರತ, ಆಸ್ಟ್ರೇಲಿಯಾ ಎದುರು ಸೆಣಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT