ಮೈಸೂರು: ಭಾರತದ ಸಿದ್ಧಾರ್ಥ್ ರಾವತ್ ಇಲ್ಲಿ ನಡೆಯುತ್ತಿರುವ ಮೈಸೂರು ಓಪನ್ ಟೆನಿಸ್ ಟೂರ್ನಿಯ ಪ್ರೀ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು.
ಚಾಮರಾಜಪುರಂನ ಮೈಸೂರು ಟೆನಿಸ್ ಕ್ಲಬ್ (ಎಂಟಿಸಿ)ನಲ್ಲಿ ಮಂಗಳವಾರ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಪಂದ್ಯದಲ್ಲಿ ಸಿದ್ಧಾರ್ಥ್ ಅವರು 6–3, 6–2ರಲ್ಲಿ ಅಮೆರಿಕದ ಡಾಲಿ ಬ್ಲಾಂಚ್ ವಿರುದ್ಧ ಗೆದ್ದರು.
ಆಕರ್ಷಕ ಸರ್ವ್ ಹಾಗೂ ಬ್ಯಾಕ್‌ಹ್ಯಾಂಡ್, ಗ್ರೌಂಡ್‌ಸ್ಟ್ರೋಕ್ ಹೊಡೆತಗಳಿಂದ ಬ್ಲಾಂಚ್ ಅವರನ್ನು ಕಾಡಿದ ಸಿದ್ಧಾರ್ಥ್, 1 ಗಂಟೆ 38 ನಿಮಿಷದಲ್ಲಿ ಗೆಲುವು ತಮ್ಮದಾಗಿಸಿಕೊಂಡರು.
ಮತ್ತೊಂದು ಪಂದ್ಯದಲ್ಲಿ ಭಾರತದ ಇಶಾಖ್ ಇಕ್ಬಾಲ್ ಅವರು ಮೈಸೂರಿನ ಸೂರಜ್ ಪ್ರಭೋದ್ ವಿರುದ್ಧ 7–6, 6–0ರಲ್ಲಿ ಗೆದ್ದರು. ಮೊದಲ ಸೆಟ್‌ನಲ್ಲಿ ಜಿದ್ದಾಜಿದ್ದಿನಿಂದ ಪೈಪೋಟಿ ನಡೆಸಿದ ಇಬ್ಬರೂ ಆಟಗಾರರು ಎಲ್ಲರ ಗಮನ ಸೆಳೆದರು. ಟ್ರೈಬ್ರೇಕರ್‌ನಲ್ಲಿ ಸೆಟ್ ಅನ್ನು ತಮ್ಮದಾಗಿಸಿಕೊಂಡ ಇಕ್ಬಾಲ್, ಎರಡನೇ ಸೆಟ್‌ನಲ್ಲಿ ಪಾರಮ್ಯ ಮೆರೆದರು.
ಫೈಸಲ್ ಖಮರ್ 6–1, 6–1ರಲ್ಲಿ ರಿಷಿ ರೆಡ್ಡಿ ವಿರುದ್ಧ ಗೆದ್ದರೆ, ಕರಣ್ ಸಿಂಗ್ ಅವರು ಕಜಕಸ್ತಾನದ ಗ್ರಿಗೋರಿ ಲೊಮಕಿನ್ ಅವರನ್ನು 6–3, 3–6, 7–6ರಲ್ಲಿ ಮಣಿಸಿದರು. 2 ಗಂಟೆ 4 ನಿಮಿಷ ನಡೆದ ಪಂದ್ಯವು ನೋಡುಗರನ್ನು ತುದಿಗಾಲಲ್ಲಿ ನಿಲ್ಲಿಸಿತು.
ಸಂದೇಶ್, ಕಾಮತ್‌ಗೆ ನಿರಾಸೆ: ಭಾರತದ ಸಂದೇಶ್ ದತ್ತಾತ್ರೇಯ ಕುರಳೆ, ಮಾಧ್ವಿನ್ ಕಾಮತ್ ನಿರಾಸೆ ಅನುಭವಿಸಿದರು. ಸಂದೇಶ್ 5–7, 1–6 ರಲ್ಲಿ ಮಲೇಷ್ಯಾದ ಮಿತ್ಸುಕಿ ಲಿಯಾಂಗ್ ವಿರುದ್ಧ ಸೋತರೆ, ಮಾಧ್ವಿನ್ ಕಾಮತ್ 1–6, 0–1 ರಲ್ಲಿ ದಕ್ಷಿಣ ಕೊರಿಯಾದ ವೂಬಿನ್ ಶಿನ್ ಅವರಿಗೆ ಮಣಿದರು. ಮೊದಲ ಸೆಟ್ ಸೋತು ಎರಡನೇ ಸೆಟ್‌ನಲ್ಲಿ ಹಿನ್ನಡೆ ಅನುಭವಿಸಿದ್ದ ಕಾಮತ್ ಪಂದ್ಯದಿಂದ ಹಿಂದೆ ಸರಿದರು.
ಡಬಲ್ಸ್‌ನಲ್ಲಿ ಋತ್ವಿಕ್ ಚೌಧರಿ ಮತ್ತು ನಿಕಿ ಪೂಣಚ್ಚ ಜೋಡಿಯು ಎಸ್.ಡಿ.ಪ್ರಜ್ವಲ್ ದೇವ್ ಹಾಗೂ ಜಿ.ಸಾಯಿ ಕಾರ್ತಿಕ್ ರೆಡ್ಡಿ ಅವರನ್ನು 6–7, 7–6, 10–7ರಿಂದ ಸೋಲಿಸಿತು. ಪರೀಕ್ಷಿತ್ ಸೋಮಾನಿ ಹಾಗೂ ಮನೀಷ್ ಸುರೇಶ್ ಕುಮಾರ್ ಜೋಡಿ 6–2, 6–3ರಿಂದ ತುಷಾರ್ ಮದನ್– ಲೋಹಿತಾಕ್ಷ ಬದ್ರಿನಾಥ್ ವಿರುದ್ಧ ಗೆದ್ದಿತು.
ಫೈಸಲ್ ಖಮರ್ ಹಾಗೂ ಫರ್ದೀನ್ ಖಮರ್ ಜೋಡಿಯು ಚಂದ್ರಿಲ್ ಸೂದ್– ಲಕ್ಷಿತ್ ಸೂದ್ ಜೋಡಿಯನ್ನು 1–6, 6–4, 10–8ರಿಂದ ಮಣಿಸಿದರೆ, ಫ್ರಾನ್ಸ್‌ನ ಫ್ಲಾರೆಂಟ್ ಬಾಕ್ಸ್– ಭಾರತದ ನಿತಿನ್ ಕುಮಾರ್ ಸಿನ್ಹಾ ಅವರು 6–3, 6–2ರಲ್ಲಿ ಭಾರತದ ದಿಗ್ವಿಜಯ್ ಪ್ರತಾಪ್ ಸಿಂಗ್– ಜಗ್ಮೀತ್ ಸಿಂಗ್ ವಿರುದ್ಧ ಗೆದ್ದರು. ಸೂರಜ್ ಪ್ರಭೋದ್– ರಿಷಿ ರೆಡ್ಡಿ ವಿರುದ್ಧ ಗೆಲುವು ಪಡೆದ ಆಸ್ಟ್ರೇಲಿಯಾದ ಎಲಿಸ್ ಬೇಕ್– ಉಕ್ರೇನ್ ವ್ಲಾಡಿಸ್ಲಾವ್ ಒರ್ಲಾವ್ ಕ್ವಾರ್ಟರ್ ಫೈನಲ್
ಪ್ರವೇಶಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.