ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಟಿಎಫ್‌ ಮಹಿಳಾ ಟೆನಿಸ್ ಟೂರ್ನಿ: ಎಂಟರ ಘಟ್ಟಕ್ಕೆ ಅಂಕಿತಾ– ಪ್ರಾರ್ಥನಾ

ಐಟಿಎಫ್‌ ಮಹಿಳಾ ಟೆನಿಸ್ ಟೂರ್ನಿ: ಈಡನ್‌ಗೆ ಮಣಿದ ಶರ್ಮದಾ
Last Updated 8 ಮಾರ್ಚ್ 2023, 15:03 IST
ಅಕ್ಷರ ಗಾತ್ರ

ಬೆಂಗಳೂರು: ರೋಚಕ ಹಣಾಹಣಿಯಲ್ಲಿ ಗೆದ್ದ ಭಾರತದ ಅಂಕಿತಾ ರೈನಾ ಮತ್ತು ಪ್ರಾರ್ಥನಾ ಥೊಂಬಾರೆ ಜೋಡಿಯು ಐಟಿಎಫ್‌ ಮಹಿಳಾ ಟೆನಿಸ್‌ ಟೂರ್ನಿಯ ಎಂಟರಘಟ್ಟ ಪ್ರವೇಶಿಸಿತು.

ಕರ್ನಾಟಕ ರಾಜ್ಯ ಲಾನ್ ಟೆನಿಸ್‌ ಸಂಸ್ಥೆಯ (ಕೆಎಸ್‌ಎಲ್‌ಟಿಎ) ಅಂಗಣದಲ್ಲಿ ನಡೆಯುತ್ತಿರುವ ಟೂರ್ನಿಯ ಡಬಲ್ಸ್ ವಿಭಾಗದ ಮೊದಲ ಸುತ್ತಿನ ಹಣಾಹಣಿಯಲ್ಲಿ ಅಂಕಿತಾ–ಪ್ರಾರ್ಥನಾ ಮಂಗಳವಾರ 5-7, 6-3, 10-6ರಿಂದ ಭಾರತದ ಶರ್ಮದಾ ಬಾಲು ಮತ್ತು ಜರ್ಮನಿಯ ಸಾರಾ ರೆಬೆಕ್ಕಾ ಸೆಕುಲಿಚ್‌ ಅವರನ್ನು ಮಣಿಸಿದರು.

ಸುಮಾರು ಎರಡು ತಾಸು ನಡೆದ ಸೆಣಸಾಟ ಪ್ರೇಕ್ಷಕರನ್ನು ತುದಿಗಾಲ ಮೇಲೆ ನಿಲ್ಲುವಂತೆ ಮಾಡಿತು. ಮೊದಲ ಸೆಟ್‌ನ ಆರಂಭಿಕ ಹಂತದಲ್ಲಿ ಚುರುಕಿನ ಆಟವಾಡಿದ ಶರ್ಮದಾ–ಸಾರಾ ಎರಡು ಗೇಮ್‌ಗಳ ಮುನ್ನಡೆ ಸಾಧಿಸಿದರು. ಬಳಿಕ ಪೈಪೋಟಿ ನೀಡಿದ ಅಂಕಿತಾ– ಪ್ರಾರ್ಥನಾ ಮಿಂಚಿನ ಹೊಡೆತಗಳ ಮೂಲಕ ಎದುರಾಳಿಗಳನ್ನು ಕಾಡಿದರು. ಆದರೆ ಸೆಟ್‌ ಗೆದ್ದುಕೊಳ್ಳುವಲ್ಲಿ ಶರ್ಮದಾ ಜೋಡಿ ಯಶಸ್ವಿಯಾಯಿತು.

ಎರಡನೇ ಸೆಟ್‌ನಲ್ಲಿ ರೆಬೆಕ್ಕಾ ಅವರು ನಿರೀಕ್ಷೆಗೆ ತಕ್ಕ ಆಟವಾಡುವಲ್ಲಿ ವಿಫಲವಾಗಿದ್ದು, ಅಂಕಿತಾ ಮತ್ತು ಪ್ರಾರ್ಥನಾ ಅವರಿಗೆ ಲಾಭ ತಂದುಕೊಟ್ಟಿತು. ತಮ್ಮ ಅನುಭವವನ್ನು ಪಣಕ್ಕಿಟ್ಟು ಆಡಿದ ಅಂಕಿತಾ ದೀರ್ಘ ರ‍್ಯಾಲಿಗಳಲ್ಲಿ ಮಿಂಚಿದರು. ಸೆಟ್‌ ಕೈವಶ ಮಾಡಿಕೊಂಡ ಅಂಕಿತಾ– ಪ್ರಾರ್ಥನಾ ಜೋಡಿ ಸಮಬಲ ಸಾಧಿಸಿತು.

ನಿರ್ಣಾಯಕ ಸೆಟ್‌ನಲ್ಲಿ ಜಾಣತನ ಮತ್ತು ಚುರುಕುತನ ಮಿಶ್ರಿತ ಆಟವಾಡಿ ಗೆದ್ದ ಎರಡನೇ ಶ್ರೇಯಾಂಕದ ಅಂಕಿತಾ– ಪ್ರಾರ್ಥನಾ ಪಂದ್ಯವನ್ನೂ ತಮ್ಮದಾಗಿಸಿಕೊಂಡರು

ಕ್ವಾರ್ಟರ್‌ಫೈನಲ್‌ಗೆ ಋತುಜಾ– ಜಾಕ್ವೆಲಿನ್‌: ಸ್ವೀಡನ್‌ನ ಜಾಕ್ವೆಲಿನ್ ಕ್ಯಾಬಾಜ್‌ ಅವಾಡ್‌ ಜೊತೆಗೂಡಿ ಕಣಕ್ಕಿಳಿದಿದ್ದ ಭಾರತದ ಋತುಜಾ ಭೋಸ್ಲೆ ಡಬಲ್ಸ್ ವಿಭಾಗದ ಎಂಟರಘಟ್ಟ ತಲುಪಿದರು. ಇವರಿಬ್ಬರು 6–4, 6–2ರಿಂದ ಕೊರಿಯಾದ ಜೀ ಹಿ ಚೊಯ್‌– ಯಾ ಸುವನ್‌ ಲೀ ಅವರನ್ನು ಪರಾಭವಗೊಳಿಸಿದರು.

ಡಬಲ್ಸ್ ವಿಭಾಗದ ಮೊದಲ ಸುತ್ತಿನ ಇನ್ನುಳಿದ ಪಂದ್ಯಗಳಲ್ಲಿ ಪೋರ್ಚುಗಲ್‌ನ ಫ್ರಾನ್ಸಿಸ್ಕಾ– ಜೋರ್ಗ್‌– ಮೆಟಿಲ್ಡೆ ಜೋರ್ಗ್‌ 7–6, 2–6, 10–8ರಿಂದ ಥಾಯ್ಲೆಂಡ್‌ನ ಪಿಂಗ್‌ತಾರ್ನ್‌ ಪ್ಲಿಪೆಚ್‌– ಲಾನ್ಲಾಲಾ ತರುರುದಿ ಎದುರು, ಜಪಾನ್‌ನ ಸಕಿ ಇಮಾಮುರಾ–ತೈಪೆಯ ಚಿಯಾ ಯಿ ಸವೊ 6–1, 7(4)–6ರಿಂದ ಜಪಾನ್‌ನ ಸಕುರಾ ಹೊಸೊಗಿ– ಇಕುಮಿ ಯಮಜಕಿ ಎದುರು, ರಷ್ಯಾದ ಅನಸ್ತಾಸಿಯಾ ಕೊವಲೆವಾ– ಬೆಲಾರಸ್‌ನ ಹನ್ನಾ ವಿನಾಹ್ರದವಾ 6–4, 6–2ರಿಂದ ಭಾರತದ ಪ್ರಗತಿ ನಾರಾಯಣ್ ಪ್ರಸಾದ್‌– ಪ್ರತಿಭಾ ನಾರಾಯಣ್ ಪ್ರಸಾದ್‌ ಎದುರು ಜಯ ಸಾಧಿಸಿ ಕ್ವಾರ್ಟರ್‌ಫೈನಲ್ ಪ್ರವೇಶಿಸಿದರು.

ವೈದೇಹಿ ಚೌಧರಿ– ಶ್ರೀವಲ್ಲಿ ರಶ್ಮಿಕಾ ಕೂಡ ಮೊದಲ ಸುತ್ತಿನಲ್ಲೇ ನಿರಾಸೆ ಅನುಭವಿಸಿದರು. ಹೋರಾಟ ತೋರಿದ ಭಾರತದ ಆಟಗಾರ್ತಿಯರು 6-7 (5), 7-5, 5-10ರಿಂದ ಸ್ಲೋವೇನಿಯಾದ ದಲಿಲಿಯಾ ಜಕುಪೊವಿಚ್‌ ಮತ್ತು ಫ್ರಾನ್ಸ್‌ನ ಅಮಂಡೈನ್ ಹೆಸೆ ಎದುರು ಸೋಲನುಭವಿಸಿದರು.

ಶರ್ಮದಾ ಅವರಿಗೆ ಸಿಂಗಲ್ಸ್‌ ವಿಭಾಗದಲ್ಲೂ ನಿರಾಸೆ ಕಾಡಿತು. ಅವರು 2–6, 4–6ರಿಂದ ಬ್ರಿಟನ್‌ನ ಈಡನ್ ಸಿಲ್ವಾ ಎದುರು ಸೋತರು. ಇನ್ನೊಂದು ಪಂದ್ಯದಲ್ಲಿ ಜಪಾನ್‌ನ ಇಕುಮಿ ಯಮಜಕಿ 5-7, 3-6ರಿಂದ ತಮ್ಮದೇ ದೇಶದ, ಮೂರನೇ ಶ್ರೇಯಾಂಕದ ಸಕುರಾ ಹೊಸೊಗಿ ಅವರಿಗೆ ಆಘಾತ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT