ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಟಿಎಫ್‌ ಮಹಿಳಾ ಟೆನಿಸ್ ಟೂರ್ನಿ: ಕ್ವಾರ್ಟರ್‌ಫೈನಲ್‌ಗೆ ಅಂಕಿತಾ, ಋತುಜಾ

Last Updated 9 ಮಾರ್ಚ್ 2023, 19:45 IST
ಅಕ್ಷರ ಗಾತ್ರ

ಬೆಂಗಳೂರು: ಸುಲಭ ಜಯ ದಾಖಲಿಸಿದ ಭಾರತದ ಅಂಕಿತಾ ರೈನಾ ಮತ್ತು ತೀವ್ರ ಪೈಪೋಟಿಯಲ್ಲಿ ಗೆದ್ದ ಋತುಜಾ ಭೋಸ್ಲೆ ಅವರು ಐಟಿಎಫ್‌ ಮಹಿಳಾ ಟೆನಿಸ್‌ ಟೂರ್ನಿಯ ಸಿಂಗಲ್ಸ್ ವಿಭಾಗದಲ್ಲಿ ಎಂಟರಘಟ್ಟಕ್ಕೆ ಲಗ್ಗೆಯಿಟ್ಟರು.

ಕರ್ನಾಟಕ ರಾಜ್ಯ ಲಾನ್ ಟೆನಿಸ್ ಸಂಸ್ಥೆಯ (ಕೆಎಸ್‌ಎಲ್‌ಟಿಎ) ಅಂಗಣದಲ್ಲಿ ಗುರುವಾರ ನಡೆದ ಎರಡನೇ ಸುತ್ತಿನ ಪಂದ್ಯದಲ್ಲಿ, ನಾಲ್ಕನೇ ಶ್ರೇಯಾಂಕದ ಅಂಕಿತಾ 6–2, 6–1ರಿಂದ ಥಾಯ್ಲೆಂಡ್‌ನ ಲನ್‌ಲಾನಾ ತರರುದಿ ಅವರನ್ನು ಪರಾಭವಗೊಳಿಸಿದರು. ಒಂದು ತಾಸು 5 ನಿಮಿಷಗಳ ಹಣಾಹಣಿಯಲ್ಲಿ ಜಯದ ನಗು ಬೀರಿದರು.

ಚುರುಕಿನ ಪಾದಚಲನೆ ಮತ್ತು ಬಿರುಸಿನ ಮುಂಗೈ ಹೊಡೆತಗಳ ಮೂಲಕ ಗಮನಸೆಳೆದ ಅಂಕಿತಾ, ಮೊದಲ ಸೆಟ್‌ನ ಮೊದಲ ಮೂರು ಗೇಮ್‌ಗಳನ್ನು ತಮ್ಮದಾಗಿಸಿಕೊಂಡರು. ನಾಲ್ಕನೇ ಗೇಮ್ ಗೆದ್ದ ತರರುದಿ ಅವರು ತಿರುಗೇಟು ನೀಡುವ ಸೂಚನೆ ನೀಡಿದರು. ಈ ಸೆಟ್‌ನಲ್ಲಿ ಒಂದು ಏಸ್‌ ಕೂಡ ಸಿಡಿಸಿದರು. ಆದರೆ ಥಾಯ್ಲೆಂಡ್ ಆಟಗಾರ್ತಿಯ ಪುಟಿದೇಳುವ ಪ್ರಯತ್ನವನ್ನು ಅಂಕಿತಾ ವಿಫಲಗೊಳಿಸಿದರು. ಸೆಟ್‌ ಭಾರತದ ಆಟಗಾರ್ತಿಯ ಪಾಲಾಯಿತು.

ಇತ್ತೀಚೆಗೆ ಬಿಲ್ಲಿ ಜೀನ್‌ ಕಿಂಗ್‌ ಕಪ್ ಟೂರ್ನಿಗಾಗಿ ಭಾರತ ತಂಡದಲ್ಲಿ ಸ್ಥಾನ ಪಡೆದಿರುವ ಅಂಕಿತಾ, ಎರಡನೇ ಸೆಟ್‌ನಲ್ಲಿ ಪೂರ್ಣ ಪಾರಮ್ಯ ಮೆರೆದರು. ಪ್ರೇಕ್ಷಕರ ಗ್ಯಾಲರಿಯಲ್ಲಿ ಕುಳಿತಿದ್ದ ತಾಯಿ ಲಲಿತಾ ಅವರು ಹುರಿದುಂಬಿಸುತ್ತಿದ್ದುದು ಅಂಕಿತಾ ಉತ್ಸಾಹವನ್ನು ಇಮ್ಮಡಿಗೊಳಿಸಿತು. ಮೊದಲ ಗೇಮ್‌ ಗೆದ್ದ ಅಂಕಿತಾ ಅದೇ ಲಯವನ್ನು ಕೊನೆಯವರೆಗೆ ಕಾಯ್ದುಕೊಂಡರು. ಭಾರತದ ಆಟಗಾರ್ತಿ ಈ ಸೆಟ್‌ನಲ್ಲಿ ಐದರ ಪೈಕಿ ಮೂರು ಬ್ರೇಕ್ ಪಾಯಿಂಟ್ಸ್ ಗಳಿಸಿದರು. ತರರುದಿ ಒಂದು ಡಬಲ್‌ ಫಾಲ್ಟ್ ಎಸಗಿದರು.

ಎಂಟರಘಟ್ಟದ ಪಂದ್ಯದಲ್ಲಿ ಅಂಕಿತಾ ಬೋಸ್ನಿಯಾದ ದಿಯಾ ಹರ್ಡ್‌ಜೆಲಾಸ್ ಅವರನ್ನು ಎದುರಿಸಲಿದ್ದಾರೆ.

ಮತ್ತೊಂದು ಹಣಾಹಣಿಯಲ್ಲಿ ಋತುಜಾ 4–6, 6–3, 6–2ರಿಂದ ಲಾತ್ವಿಯಾದ ಡಯಾನಾ ಮಾರ್ಸಿಕೆವಿಂಚಾ ಅವರನ್ನು ಮಣಿಸಿದರು. ಮೊದಲ ಸೆಟ್‌ ಸೋತ ಬಳಿಕ ಮರು ಹೋರಾಟ ಸಂಘಟಿಸಿದ ಅವರು ಗೆಲುವು ಒಲಿಸಿಕೊಂಡರು.

ಶ್ರೇಯಾಂಕರಹಿತ ಆಟಗಾರ್ತಿ ಋತುಜಾ ಕ್ವಾರ್ಟರ್‌ಫೈನಲ್‌ನಲ್ಲಿ ಬ್ರಿಟನ್‌ನ ಈಡನ್ ಸಿಲ್ವಾ ಅವರನ್ನು ಎದುರಿಸುವರು.

ಜೀಲ್‌ಗೆ ಸೋಲು: ಸಿಂಗಲ್ಸ್ ವಿಭಾಗದ ಎರಡನೇ ಸುತ್ತಿನ ಇನ್ನೊಂದು ಪಂದ್ಯದಲ್ಲಿ ಭಾರತದ ಜೀಲ್ ದೇಸಾಯಿ ಗೆಲುವಿನ ಅಂಚಿನಲ್ಲಿ ಎಡವಿದರು. ಮೊದಲ ಸೆಟ್‌ ಗೆದ್ದಿದ್ದ ಅವರು 7–5, 3–6, 5–7ರಿಂದ ಇಂಡೊನೇಷ್ಯಾದ ಪ್ರಿಸ್ಕಾ ಮೇಡಲಿನ್‌ ನುಗ್ರುಹೊ ಎದುರು ಎಡವಿದರು.

ಇನ್ನುಳಿದ ಪಂದ್ಯಗಳಲ್ಲಿ, ಅಗ್ರಶ್ರೇಯಾಂಕದ ಜೆಕ್ ಗಣರಾಜ್ಯದ ಆಟಗಾರ್ತಿ ಬ್ರೆಂಡಾ ಫ್ರುವಿರ್ತೊವಾ 6–4, 3–6, 6–2ರಿಂದ ಥಾಯ್ಲೆಂಡ್‌ನ ಪೀಂಗ್‌ಟರ್ನ್‌ ಪ್ಲಿಪೆಚ್‌ ಎದುರು, ಈಡನ್ ಸಿಲ್ವಾ 6–2, 6–0ರಿಂದ ಜಪಾನ್‌ನ ಮೆಯಿ ಯಮಗುಚಿ ವಿರುದ್ಧ, ದಿಯಾ ಹರ್ಡ್‌ಜೆಲಾಸ್‌ 6–2, 6–2ರಿಂದ ರಷ್ಯಾದ ದರಿಯಾ ಕುದಶೊವಾ ವಿರುದ್ಧ, ಸ್ಲೊವೇನಿಯಾದ ದಲಿಲಾ ಜಕುಪೊವಿಚ್‌ 6–4, 4–6, 6–4ರಿಂದ ಥಾಯ್ಲೆಂಡ್‌ನ ಮನಚಾಯಾ ಸವಂಗ್‌ಕೆವ್‌ ಎದುರು ಗೆದ್ದು ಕ್ವಾರ್ಟರ್‌ಫೈನಲ್ ಪ್ರವೇಶಿಸಿದರು.

ಸೆಮಿಗೆ ವ್ಯಾಲೆಂಟಿನಿ– ಈಡನ್‌: ಗ್ರೀಸ್‌ನ ವ್ಯಾಲೆಂಟಿನಿ ಗ್ರಾಮಾಟಿಕೊಪೊಲು ಮತ್ತು ಬ್ರಿಟನ್‌ನ ಈಡನ್ ಸಿಲ್ವಾ ಡಬಲ್ಸ್ ವಿಭಾಗದ ಸೆಮಿಫೈನಲ್ ತಲುಪಿದರು. ಕ್ವಾರ್ಟರ್‌ಫೈನಲ್‌ನಲ್ಲಿ ಈ ಜೋಡಿಯು 6–1, 2–6, 10–7ರಿಂದ ರಷ್ಯಾದ ಅನಸ್ತಾಸಿಯಾ ಕೊವಲೆವಾ ಮತ್ತು ಬೆಲಾರಸ್‌ನ ಹನ್ನಾ ವಿನಾಹ್ರದವಾ ಅವರನ್ನು ಮಣಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT