ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಂಗನಾಥ್‌ಗೆ ಗೆಲುವು ದಕ್ಕಿಸಿದ ಡಿಕೆಶಿ ತಂತ್ರಗಳು

Last Updated 16 ಮೇ 2018, 8:53 IST
ಅಕ್ಷರ ಗಾತ್ರ

ಕುಣಿಗಲ್: ತಾಲ್ಲೂಕಿನ ರಾಜಕಾರಣ ಮೇಲೆ ಬಿಗಿ ಹಿಡಿತಹೊಂದಿದ್ದ ಶಾಸಕ ಡಿ.ನಾಗರಾಜಯ್ಯ ಹಾಗೂ ಅವರ ಸಹೋದರು ಬಿಜೆಪಿ ಅಭ್ಯರ್ಥಿ ಡಿ.ಕೃಷ್ಣಕುಮಾರ್ ಅವರ ರಾಜಕಾರಣಕ್ಕೆ ಡಾ.ಎಚ್.ಡಿ.ರಂಗನಾಥ್ ಗೆಲ್ಲುವ ಮೂಲಕ ತಡೆ ಬಿದ್ದಿದೆ.

ದೀರ್ಘಕಾಲದಿಂದ ಈ ಸಹೋದರರೇ ತಾಲ್ಲೂಕಿನಲ್ಲಿ ಹೆಚ್ಚು ಪ್ರಭುತ್ವ ಸಾಧಿಸಿದ್ದರು. ನಾಗರಾಜಯ್ಯ 40 ವರ್ಷದಿಂಧ ರಾಜಕಾರಣ ಮಾಡುತ್ತಾ 4 ಬಾರಿ ಶಾಸಕರಾಗಿದ್ದರು. ಬಿಜೆಪಿಯಿಂದ ಸ್ಪರ್ಧಿಸಿ ಮೂರು
ಬಾರಿ ಸೋಲು ಅನುಭವಿಸಿದ್ದ ಕೃಷ್ಣಕುಮಾರ್ ಅವರಿಗೆ ಈ ಬಾರಿಯೂ ಗೆಲುವು ದಕ್ಕಿಲ್ಲ. ಕನಕಪುರದ ಡಿ.ಕೆ.ಶಿವಕುಮಾರ್ ಹಾಗೂ ಅವರ ಸಹೋದರ ಡಿ.ಕೆ.ಸುರೇಶ್ ತಾಲ್ಲೂಕು ರಾಜಕಾರಣವನ್ನು ಸಂಬಂಧಿ ರಂಗನಾಥ್ ಅವರ ಮೂಲಕ ತಮ್ಮ ಹಿಡಿತಕ್ಕೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ರಂಗನಾಥ್ ಮತ್ತು ಬಿ.ಬಿ.ರಾಮಸ್ವಾಮಿ ಗೌಡ ಅವರ ನಡುವೆ ಟಿಕೆಟ್‌ಗಾಗಿ ಪೈಪೋಟಿ ನಡೆದಿತ್ತು. ರಂಗನಾಥ್ ಅವರಿಗೆ ಟಿಕೆಟ್ ದೊರೆತ ನಂತರ ರಾಮಸ್ವಾಮಿ ಗೌಡ ಬಂಡಾಯ ಎದಿದ್ದರು. ಆದರೆ ಡಿಕೆಶಿ ಅವರನ್ನು ಮನೆಗೆ ಕರೆಸಿ ವಿಧಾನಪರಿಷತ್ ಸದಸ್ಯನನ್ನಾಗಿ ಮಾಡುವ ಭರವಸೆ ನೀಡಿ ಆ ಬಂಡಾಯವನ್ನು
ಶಮನ ಮಾಡಿದರು. ಗೌಡರು ಸಹ ರಂಗನಾಥ್ ಪಡ ಅಖಾಡಕ್ಕೆ ಇಳಿದರು. ಇದರಿಂದ ರಂಗನಾಥ್ ಅವರಿಗೆ ಎದುರಾಗಿದ್ದ ಮೊದಲ ತೊಡಕು ನಿವಾರಣೆ ಆಯಿತು.

ಅಲ್ಲದೆ ಶಾಸಕರು ಮತ್ತು ಅವರ ಪುತ್ರರ ವಿರುದ್ಧ ಅಸಮಾಧಾನಗೊಂಡಿದ್ದ ಪ್ರಮುಖ ಜೆಡಿಎಸ್ ಮುಖಂಡರನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳುವಲ್ಲಿ ಡಿಕೆ ಸಹೋದರರು ಮುಂದಾದರು. ಇದು ಹೆಚ್ಚಿನ ಬಲ ಸಹ ನೀಡಿತು. ಎಲ್ಲಕ್ಕಿಂತ ಮುಖ್ಯವಾಗಿ ಗೆಲ್ಲಲೇ ಬೇಕು ಎನ್ನುವ ಛಲದಲ್ಲಿ ಕ್ಷೇತ್ರದಲ್ಲಿ ರಂಗನಾಥ್ ಹೆಚ್ಚಿನ ‘ಕೊಡುಗೆ’ಗಳನ್ನೇ ನೀಡಿದರು. ಈ ಎಲ್ಲ ಬೆಳವಣಿಗೆಗಳು ರಂಗನಾಥ್
ಅವರ ಗೆಲುವಿನ ಪ್ರಮುಖ ಮೆಟ್ಟಿಲುಗಳಾದವು.

ಒಂದು ಕಡೆ ನಾಗರಾಜಯ್ಯ ಸಹೋದರರ ಪರಸ್ಪರ ಎದುರಾಳಿತನ, ಡಿ.ಕೆ.ಶಿವಕುಮಾರ್ ಅವರ ಚಾಣಕ್ಯ ನಡೆಗಳು ರಂಗನಾಥ್ ಅವರನ್ನು ಗೆಲುವಿನ ಹಾದಿಗೆ ಕರೆದುಕೊಂಡು ಹೋಗಿವೆ.

ವೈದ್ಯ ಶಾಸಕ

ಕುಣಿಗಲ್ ಕ್ಷೇತ್ರದಲ್ಲಿ ವೈದ್ಯರೊಬ್ಬರು ಶಾಸಕರಾಗಿ ಆಯ್ಕೆಯಾಗಿರುವುದು ಇದೇ ಮೊದಲು. ರಾಜಕಾರಣ ಮಾಡದೆ ವೈದ್ಯ ವೃತ್ತಿಯಲ್ಲಿದ್ದು ತಮ್ಮ ಸಂಬಂಧಿ ಡಿ.ಕೆ.ಸುರೇಶ್ ಅವರ ಸೂಚನೆ ಮೇರೆಗೆ ತಾಲ್ಲೂಕಿನ ಉಸ್ತುವಾರಿ ನೋಡಿಕೊಳ್ಳುತ್ತಿದ್ದರು. ರಂಗನಾಥ್ ತಾಲ್ಲೂಕಿನ ಆಲ್ಕೆರೆ ಹೊಸಹಳ್ಳಿಯ ಗ್ರಾಮದವರು. ಸದ್ಯ ಕಿಮ್ಸ್‌ನಲ್ಲಿ ಮೂಳೆ ತಜ್ಞರಾಗಿದ್ದಾರೆ. ಕೇವಲ 4 ವರ್ಷದಲ್ಲಿ ಸಂಘಟನಾ ಶಕ್ತಿ ರೂಢಿಸಿಕೊಂಡು ಶಾಸಕರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT