ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರೀಯ ಮಹಿಳಾ ಟೆನಿಸ್‌ ಚಾಂಪಿಯನ್‌ಷಿಪ್‌: ಕರ್ನಾಟಕದ ಮುಡಿಗೆ ಕಿರೀಟ

Last Updated 28 ಡಿಸೆಂಬರ್ 2018, 18:43 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕ ತಂಡದವರು ಛತ್ತೀಸಗಡದ ಭಿಲಾಯಿಯಲ್ಲಿ ನಡೆದ ರಾಷ್ಟ್ರೀಯ ಮಹಿಳಾ ಟೆನಿಸ್‌ ಚಾಂಪಿಯನ್‌ಷಿಪ್‌ನಲ್ಲಿ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.

ಶುಕ್ರವಾರ ನಡೆದ ಫೈನಲ್‌ನಲ್ಲಿ ಪ್ರತಿಭಾ ಪ್ರಸಾದ್‌ ನೇತೃತ್ವದ ಕರ್ನಾಟಕ 2–0ರಲ್ಲಿ ಮಧ್ಯಪ್ರದೇಶ ತಂಡವನ್ನು ಸೋಲಿಸಿತು.

ಮೊದಲ ಸಿಂಗಲ್ಸ್‌ನಲ್ಲಿ ಕಣಕ್ಕಿಳಿದಿದ್ದ ಸೋಹಾ ಸಾದಿಕ್‌ 6–0, 6–2 ನೇರ ಸೆಟ್‌ಗಳಿಂದ ರಾಶಿ ಅವರನ್ನು ಪರಾಭವಗೊಳಿಸಿ ರಾಜ್ಯ ತಂಡಕ್ಕೆ 1–0 ಮುನ್ನಡೆ ತಂದುಕೊಟ್ಟರು.

ಮೊದಲ ಸೆಟ್‌ನಲ್ಲಿ ಸೋಹಾ ಮೋಡಿ ಮಾಡಿದರು. ತಮ್ಮ ಸರ್ವ್‌ ಉಳಿಸಿಕೊಂಡ ಅವರು ಎದುರಾಳಿಯ ಎಲ್ಲಾ ಸರ್ವ್‌ಗಳನ್ನು ಮುರಿದು ನಿರಾಯಾಸವಾಗಿ ಗೆದ್ದರು. ಎರಡನೇ ಸೆಟ್‌ನ ಆರಂಭದಲ್ಲಿ ಎದುರಾಳಿಯಿಂದ ಅಲ್ಪ ಪ್ರತಿರೋಧ ಎದುರಿಸಿದ ಕರ್ನಾಟಕದ ಆಟಗಾರ್ತಿ ನಂತರ ಮೇಲುಗೈ ಸಾಧಿಸಿದರು.

ಎರಡನೇ ಸಿಂಗಲ್ಸ್‌ನಲ್ಲಿ ಪ್ರತಿಭಾ 7–5, 6–2ರಲ್ಲಿ ಸಾರಾ ಯಾದವ್‌ ಅವರನ್ನು ಸೋಲಿಸಿ ಕರ್ನಾಟಕದ ಪಾಳಯದಲ್ಲಿ ಖುಷಿ ಮೂಡಿಸಿದರು.

ಮೊದಲ ಸೆಟ್‌ನಲ್ಲಿ ಉಭಯ ಆಟಗಾರ್ತಿಯರು ಜಿದ್ದಾಜಿದ್ದಿನ ಪೈಪೋಟಿ ನಡೆಸಿದರು. ಹೀಗಾಗಿ 5–5ರ ಸಮಬಲ ಕಂಡುಬಂತು. ನಂತರ ಪ್ರತಿಭಾ, ಪರಿಣಾಮಕಾರಿ ಆಟ ಆಡಿದರು. ಸತತ ಎರಡು ಗೇಮ್‌ ಜಯಿಸಿ ಸಂಭ್ರಮಿಸಿದರು. ಎರಡನೇ ಸೆಟ್‌ನಲ್ಲೂ ಕರ್ನಾಟಕದ ಆಟಗಾರ್ತಿ ಪ್ರಾಬಲ್ಯ ಮೆರೆದರು. ಶರವೇಗದ ಸರ್ವ್‌ ಮತ್ತು ಅಮೋಘ ಕ್ರಾಸ್‌ಕೋರ್ಟ್‌ ಹೊಡೆತಗಳ ಮೂಲಕ ಎದುರಾಳಿಯನ್ನು ಕಂಗೆಡಿಸಿದರು.

ಇದಕ್ಕೂ ಮೊದಲು ನಡೆದಿದ್ದ ಸೆಮಿಫೈನಲ್‌ನಲ್ಲಿ ಕರ್ನಾಟಕ ತಂಡ 2–0 ರಲ್ಲಿ ತೆಲಂಗಾಣ ತಂಡವನ್ನು ಮಣಿಸಿತ್ತು.

₹ 1 ಲಕ್ಷ ಬಹುಮಾನ: ಕರ್ನಾಟಕ ರಾಜ್ಯ ಲಾನ್‌ ಟೆನಿಸ್‌ ಸಂಸ್ಥೆಯ (ಕೆಎಸ್‌ಎಲ್‌ಟಿಎ) ಜಂಟಿ ಕಾರ್ಯದರ್ಶಿ ಪಿ.ಆರ್‌.ರಾಮಸ್ವಾಮಿ ಅವರು ವಿಜೇತ ತಂಡವನ್ನು ಅಭಿನಂದಿಸಿದ್ದಾರೆ.

ತಂಡದಲ್ಲಿದ್ದ ನಾಲ್ಕು ಮಂದಿಗೂ ತಲಾ ₹1 ಲಕ್ಷ ಬಹುಮಾನ ಘೋಷಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT