ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಿರ್ಗಿಯೊಸ್‌ ಮಣಿಸಿ ಸೆಮಿಗೆ ಕಚನೊವ್‌

ಅಮೆರಿಕ ಓಪನ್ ಟೆನಿಸ್‌ ಟೂರ್ನಿ: ನಾಲ್ಕರ ಘಟ್ಟಕ್ಕೆ ಕಾಸ್ಪರ್ ರೂಡ್‌
Last Updated 7 ಸೆಪ್ಟೆಂಬರ್ 2022, 12:04 IST
ಅಕ್ಷರ ಗಾತ್ರ

ನ್ಯೂಯಾರ್ಕ್‌: ಜಿದ್ದಾಜಿದ್ದಿನ ಹಣಾಹಣಿಯಲ್ಲಿ ನಿಕ್‌ ಕಿರ್ಗಿಯೊಸ್‌ ಅವರಿಗೆ ಸೋಲುಣಿಸಿದರಷ್ಯಾದ ಕರೆನ್ ಕಚನೊವ್ ಅಮೆರಿಕ ಓಪನ್ ಟೆನಿಸ್‌ ಟೂರ್ನಿಯ ಸೆಮಿಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ.

ಅರ್ಥರ್ ಆ್ಯಶ್ ಕ್ರೀಡಾಂಗಣದಲ್ಲಿ ಮಂಗಳವಾರ ರಾತ್ರಿ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಎಂಟರಘಟ್ಟದ ಹಣಾಹಣಿಯಲ್ಲಿ 27ನೇ ಶ್ರೇಯಾಂಕದ ಕಚನೊವ್‌7-5, 4-6, 7-5, 6-7 (3/7), 6-4ರಿಂದ ಆಸ್ಟ್ರೇಲಿಯಾದ ಕಿರ್ಗಿಯೊಸ್‌ ಅವರನ್ನು ಪರಾಭವಗೊಳಿಸಿದರು. ಇದರೊಂದಿಗೆ ರಷ್ಯಾ ಆಟಗಾರ ಗ್ರ್ಯಾನ್‌ಸ್ಲಾಮ್ ಟೂರ್ನಿಯೊಂದರಲ್ಲಿ ಮೊದಲ ಬಾರಿ ನಾಲ್ಕರಘಟ್ಟ ತಲುಪಿದ ಶ್ರೇಯ ಗಳಿಸಿದರು.

ಈ ಸೋಲಿನೊಂದಿಗೆ ಕಿರ್ಗಿಯೊಸ್‌ ಅವರ ಮೊದಲ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿ ಜಯದ ಕನಸು ಛಿದ್ರಗೊಂಡಿತು. ವಿಂಬಲ್ಡನ್‌ ಟೂರ್ನಿಯಲ್ಲಿ ಕಿರ್ಗಿಯೊಸ್‌ ಅವರು ಸರ್ಬಿಯಾದ ನೊವಾಕ್‌ ಜೊಕೊವಿಚ್‌ ಎದುರು ಸೋತು ರನ್ನರ್‌ಅಪ್ ಆಗಿದ್ದರು.

ಕಚನೊವ್ ಈ ಪಂದ್ಯದಲ್ಲಿ 30 ಏಸ್‌ ಮತ್ತು 63 ವಿನ್ನರ್‌ಗಳನ್ನು ಸಿಡಿಸಿದರು. ಮೂರು ತಾಸು 39 ನಿಮಿಷಗಳ ಪಂದ್ಯದಲ್ಲಿ ಇಬ್ಬರೂ ಆಟಗಾರರು ಬೆವರು ಹರಿಸಿದರು. ಪಂ‌ದ್ಯ ಕೈಚೆಲ್ಲಿದ ನಿರಾಸೆಯಲ್ಲಿ ಕಿರ್ಗಿಯೊಸ್ ರ‍್ಯಾಕೆಟ್‌ಅನ್ನು ನೆಲಕ್ಕಪ್ಪಳಿಸಿ ಮುರಿದು ಹಾಕಿದರು.

16ರ ಘಟ್ಟದ ಪಂದ್ಯದಲ್ಲಿ ಕಿರ್ಗಿಯೊಸ್‌ ಅವರು ಅಗ್ರಕ್ರಮಾಂಕದ ಆಟಗಾರ, ರಷ್ಯಾದ ಡೇನಿಯಲ್ ಮೆಡ್ವೆಡೆವ್ ಸವಾಲು ಮೀರಿ ಪ್ರಶಸ್ತಿ ಜಯದ ಕನಸು ಕಂಡಿದ್ದರು.

ಇದಕ್ಕೂ ಮೊದಲು ನಡೆದ ಇನ್ನೊಂದು ಕ್ವಾರ್ಟರ್‌ಫೈನಲ್‌ನಲ್ಲಿ ನಾರ್ವೆಯ ಕಾಸ್ಪರ್‌ ರೂಡ್‌ 6-1, 6-4, 7-6 (7/4)ರಿಂದ ಇಟಲಿಯ ಮ್ಯಾಟಿಯೊ ಬೆರೆಟಿನಿ ಅವರನ್ನು ಸೋಲಿಸಿ ಎರಡನೇ ಬಾರಿ ಗ್ರ್ಯಾನ್‌ಸ್ಲಾಮ್‌ ಸೆಮಿಗೆ ತಲು‍ಪಿದರು. ಈ ವರ್ಷದ ಫ್ರೆಂಚ್‌ ಓಪನ್ ಟೂರ್ನಿಯ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ರಫೆಲ್‌ ನಡಾಲ್ ಎದುರು ಸೋತಿದ್ದರು.

ಗಾರ್ಸಿಯಾ, ಜಬೇರ್ ಮುನ್ನಡೆ: ಟೂರ್ನಿಯ ಮಹಿಳಾ ಸಿಂಗಲ್ಸ್‌ನಲ್ಲಿ ಟ್ಯೂನಿಷಿಯಾದ ಆನ್ಸ್ ಜಬೇರ್‌ ಸೆಮಿಫೈನಲ್ ತಲುಪುವ ಮೂಲಕ ಈ ಸಾಧನೆ ಮಾಡಿದ ಆಫ್ರಿಕಾದ ಮೊದಲ ಆಟಗಾರ್ತಿ ಎನಿಸಿಕೊಂಡರು.

ಎಂಟರಘಟ್ಟದ ಪಂದ್ಯದಲ್ಲಿ ಜಬೇರ್‌6-4, 7-6 (7/4)ರಿಂದ ಆಸ್ಟ್ರೇಲಿಯಾದ ಆಯ್ಲಾ ಟೊಮ್ಲಾಜಾನೊವಿಚ್‌ ಎದುರು ಗೆದ್ದರು. ಮತ್ತೊಂದು ಪಂದ್ಯದಲ್ಲಿ ಅಮೆರಿಕದ ಯುವ ಆಟಗಾರ್ತಿ ಕೊಕೊ ಗಫ್ ಸವಾಲು ಅಂತ್ಯವಾಯಿತು.

ಫ್ರಾನ್ಸ್‌ನ ಕರೋಲಿನ್‌ ಗಾರ್ಸಿಯಾ6-3, 6-4ರಿಂದ ಗಫ್‌ ಅವರನ್ನು ಪರಾಭವಗೊಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT