ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಟಿಎಫ್‌ ಓಪನ್ ಟೆನಿಸ್ ಟೂರ್ನಿ: ಮಾರ್ಕ್ಸ್‌ಗೆ ಮಣಿದ ಶಶಿಕುಮಾರ್

ಅರ್ಜುನ್, ಮನೀಷ್, ಸಿದ್ಧಾರ್ಥ್ ಸೆಮಿಫೈನಲ್‌ಗೆ
Last Updated 18 ಮಾರ್ಚ್ 2022, 14:45 IST
ಅಕ್ಷರ ಗಾತ್ರ

ಬೆಂಗಳೂರು: ಅಗ್ರ ಶ್ರೇಯಾಂಕದ ಆಟಗಾರ ಭಾರತದ ಶಶಿಕುಮಾರ್ ಮುಕುಂದ್ ಅವರನ್ನು ಮಣಿಸಿದ ಪೋಲೆಂಡ್‌ನ ಮಾರ್ಕ್ಸ್‌ ಮಾಸ್ನಿಕೊವ್‌ಸ್ಕಿ ಅವರು ರಾಜ್ಯ ಲಾನ್ ಟೆನಿಸ್ ಸಂಸ್ಥೆಯ ಅಂಗಣದಲ್ಲಿ ಶುಕ್ರವಾರ ಮಿಂಚಿನ ಸಂಚಾರ ಮೂಡಿಸಿದರು.

ಕೆಎಸ್‌ಎಲ್‌ಟಿಎ ಆಯೋಜಿಸಿರುವ ಎಸ್‌ಕೆಎಂಇ ಐಟಿಎಫ್‌ ಓಪನ್ ಟೆನಿಸ್ ಟೂರ್ನಿಯಲ್ಲಿ 6-7 (5), 7-6 (5), 6-3ರಲ್ಲಿ ಜಯ ಸಾಧಿಸಿದ ಅವರು ಸೆಮಿಫೈನಲ್ ಪ್ರವೇಶಿಸಿದರು. ನಾಲ್ಕರ ಘಟ್ಟದಲ್ಲಿ ಅವರು ಭಾರತದ ಅರ್ಜುನ್ ಖಾಡೆ ವಿರುದ್ಧ ಸೆಣಸುವರು. ಅರ್ಜುನ್ 7-5, 5-7, 7-6 (2)ರಲ್ಲಿ ದಿಗ್ವಿಜಯ್ ಪ್ರತಾಪ್ ಸಿಂಗ್ ಅವರನ್ನು ಸೋಲಿಸಿದರು.

18 ವರ್ಷದ ಮಾರ್ಕ್ಸ್‌ ಈ ವರ್ಷ ಜೂನಿಯರ್ ವಿಭಾಗದಲ್ಲಿ ಜೀವನಶ್ರೇಷ್ಠ 12ನೇ ರ‍್ಯಾಂಕಿಂಗ್ ಗಳಿಸಿದ್ದರು. ಶುಕ್ರವಾರದ ಪಂದ್ಯದ ಆರಂಭದಲ್ಲಿ ಶಶಿಕುಮಾರ್ 4–1ರ ಮುನ್ನಡೆ ಗಳಿಸಿದ್ದರು. ನಂತರ ತಿರುಗೇಟು ನೀಡಿದ ಮಾರ್ಕ್ಸ್‌ 4–4ರ ಸಮಬಲ ಸಾಧಿಸಿದರು. ಅದರೂ ಟೈಬ್ರೇಕರ್‌ನಲ್ಲಿ ಸೆಟ್‌ ಗೆದ್ದು ಶಶಿಕುಮಾರ್ ಮುನ್ನಡೆದರು.

ಎರಡನೇ ಸೆಟ್‌ನಲ್ಲಿ ಉಭಯ ಆಟಗಾರರು ಅಮೋಘ ಸರ್ವ್‌ಗಳ ಮೂಲಕ ಮಿಂಚಿದರು. ಬಳಲಿದಂತೆ ಕಂಡುಬಂದ ಶಶಿಕುಮಾರ್ ಅವರು ಸ್ವಯಂ ತ‍ಪ್ಪುಗಳ ಮೂಲಕ ಪಾಯಿಂಟ್‌ಗಳನ್ನು ಬಿಟ್ಟುಕೊಟ್ಟರು. ಇದು ಪೋಲೆಂಡ್ ಅಟಗಾರನ ಓಟಕ್ಕೆ ನೆರವಾಯಿತು. ನಿರ್ಣಾಯಕ ಮೂರನೇ ಸೆಟ್‌ನಲ್ಲಿ ಮಾರ್ಕ್ಸ್‌ ಇನ್ನಷ್ಟು ರೋಚಕ ಆಟವಾಡಿ ಗೆಲುವಿನ ನಗೆ ಸೂಸಿದರು.

ಈಚೆಗೆ ನಡೆದ ಬೆಂಗಳೂರು ಓಪನ್‌ ಟೂರ್ನಿಯ ಡಬಲ್ಸ್‌ ವಿಭಾದ ಚಾಂಪಿಯನ್ ಆಗಿದ್ದ ಖಾಡೆ ಸತತ ಎರಡನೇ ಪ್ರಶಸ್ತಿಯ ಕನಸಿನೊಂದಿಗೆ ಟೂರ್ನಿಯಲ್ಲಿ ಕಣಕ್ಕೆ ಇಳಿದಿದ್ದಾರೆ. ಶುಕ್ರವಾರ ಆರಂಭದಲ್ಲಿ 1–3ರ ಹಿನ್ನಡೆಯಲ್ಲಿದ್ದ ಅವರು ನಂತರ ಚೇತರಿಕೆಯ ಆಟವಾಡಿದರು. 21 ವರ್ಷದ ದಿಗ್ವಿಜಯ್ ಅತ್ಯುತ್ತಮ ಆಟದ ಮೂಲಕ ಪ್ರೇಕ್ಷಕರನ್ನು ರಂಜಿಸಿದರು. ಆದರೆ ಖಾಡೆ ಪಂದ್ಯ ಗೆದ್ದುಕೊಂಡರು.

ನಾಲ್ಕನೇ ಶ್ರೇಯಾಂಕದ ಮನೀಷ್ ಸುರೇಶ್ ಕುಮಾರ್ ಎಂಟನೇ ಶ್ರೇಯಾಂಕದ ಬ್ರಿಟನ್ ಆಟಗಾರ ಜುಲಿಯನ್ ಕ್ಯಾಷ್ ಅವರ ಸವಾಲನ್ನು ಮೀರಿ ನಿಂತು 6-7 (5), 6-4, 6-3ರಲ್ಲಿ ಪಂದ್ಯ ಗೆದ್ದುಕೊಂಡರು. ಸೆಮಿಫೈನಲ್‌ನಲ್ಲಿ ಅವರು ಎರಡನೇ ಶ್ರೇಯಾಂಕದ ಸಿದ್ಧಾರ್ಥ್ ರಾವತ್ ವಿರುದ್ಧ ಸೆಣಸುವರು. ಏಳನೇ ಶ್ರೇಯಾಂಕದ ನಿಕ್ಕಿ ಪೂಣಚ್ಚ ಅವರನ್ನು 6-2, 6-4ರಲ್ಲಿ ಸಿದ್ಧಾರ್ಥ್ ಸೋಲಿಸಿದರು.

ಡಬಲ್ಸ್ ಸೆಮಿಫೈನಲ್ ಫಲಿತಾಂಶಗಳು: ಬ್ರಿಟನ್‌ನ ಜುಲಿಯನ್ ಕ್ಯಾಷ್ –ಭಾರತದ ಅರ್ಜುನ್ ಖಾಡೆಗೆ ಫ್ರಾನ್ಸ್‌ನ ಕಾನ್ಸ್‌ಟಂಟಿನ್ ಬಿಟೊ–ಎಸ್‌ಡಿ ಪ್ರಜ್ವಲ್ ದೇವ್‌ ವಿರುದ್ಧ 6-3, 6-2ರಲ್ಲಿ ಜಯ; ಭಾರತದ ಶಶಿಕುಮಾರ್ ಮುಕುಂದ್‌–ವಿಷ್ಣುವರ್ಧನ್‌ಗೆ ಭಾರತದ ಯೂಕಿ ಭಾಂಬ್ರಿ–ಸಾಕೇತ್‌ ಮೈನೇನಿ ವಿರುದ್ಧ 6-3, 2-6, 10-8ರಲ್ಲಿ ಗೆಲುವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT