ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

25ನೇ ಜನ್ಮದಿನಕ್ಕೆ ‘ಹದಿನಾರರ’ ಸಂಭ್ರಮ

ಆಸ್ಟ್ರೇಲಿಯಾ ಓಪನ್ ಟೆನಿಸ್ ಟೂರ್ನಿ: ಸಿಸಿಪಸ್‌, ರಫೆಲ್ ನಡಾಲ್‌, ಆ್ಯಶ್ಲಿ ಬಾರ್ಟಿ, ಸೋಫಿಯಾ ಕೆನಿನ್‌ಗೆ ಗೆಲುವು
Last Updated 12 ಫೆಬ್ರುವರಿ 2021, 4:51 IST
ಅಕ್ಷರ ಗಾತ್ರ

ಮೆಲ್ಬರ್ನ್‌: ಜನ್ಮದಿನದ ಖುಷಿಯಲ್ಲಿದ್ದ ಡ್ಯಾನಿಲ್ ಮೆಡ್ವೆಡೆವ್ ಅವರ ಸಂಭ್ರಮ ಇಮ್ಮಡಿಗೊಂಡಿತು. ಆಸ್ಟ್ರೇಲಿಯಾ ಓಪನ್ ಟೆನಿಸ್ ಟೂರ್ನಿಯ ಪುರುಷರ ಸಿಂಗಲ್ಸ್ ವಿಭಾಗದ ಎರಡನೇ ಸುತ್ತಿನ ಪಂದ್ಯದಲ್ಲಿ ಜಯ ಗಳಿಸಿದ ಅವರು ಸತತ 16 ಪಂದ್ಯಗಳನ್ನು ಗೆದ್ದ ಸಾಧನೆ ಮಾಡಿದರು. ರಷ್ಯಾದಮೆಡ್ವೆಡೆವ್ ಅವರ 25ನೇ ಜನ್ಮದಿನವಾಗಿತ್ತು ಗುರುವಾರ.

ಜಾನ್ ಕೇನ್ ಅರೆನಾದಲ್ಲಿ ನಡೆದ ಪಂದ್ಯದಲ್ಲಿ ನಾಲ್ಕನೇ ಶ್ರೇಯಾಂಕದ ಮೆಡ್ವೆಡೆವ್ ಸ್ಪೇನ್‌ನ ರಾಬರ್ಟೊ ಕಾರ್ಬಲಿಸ್ ಬಯೇನ ವಿರುದ್ಧ 6-2, 7-5, 6-1ರ ಜಯ ಗಳಿಸಿದರು. ನವೆಂಬರ್‌ನಿಂದ ಈ ವರೆಗೆ ಆವರು ಒಂದು ಪಂದ್ಯವನ್ನೂ ಸೋತಿಲ್ಲ. ಪ್ಯಾರಿಸ್ 1000 ಟೂರ್ನಿ, ಲಂಡನ್‌ನಲ್ಲಿ ನಡೆದ ಎಟಿಪಿ ಫೈನಲ್ಸ್‌ ಮತ್ತು ರಷ್ಯಾದಲ್ಲಿ ನಡೆದ ಎಟಿಪಿ ಕಪ್ ಟೂರ್ನಿಗಳಲ್ಲಿ ಪ್ರಶಸ್ತಿ ಗೆದ್ದು ಅವರು ವರ್ಷದ ಮೊದಲ ಗ್ರ್ಯಾನ್‌ಸ್ಲಾಂ ಟೂರ್ನಿಯಲ್ಲಿ ಆಡಲು ಇಲ್ಲಿಗೆ ಬಂದಿದ್ದಾರೆ.

ಗುರುವಾರದ ಪಂದ್ಯದಲ್ಲಿ ಬೇಸ್‌ಲೈನ್‌ನಲ್ಲಿ ನೆಲೆಯೂರಿ ಮೋಹಕ ಹೊಡೆತಗಳೊಂದಿಗೆ ಮಿಂಚಿದ ಮೆಡ್ವೆಡೆವ್ ಆಗಾಗ ನೆಟ್‌ ಬಳಿ ಬಂದು ಸುಂದರ ಡ್ರಾಪ್‌ಗಳ ಮೂಲಕ ಮೊದಲ ಸೆಟ್‌ನಲ್ಲೇ ಎದುರಾಳಿಯನ್ನು ಕಂಗೆಡಿಸಿದರು. ಎರಡನೇ ಸೆಟ್‌ನಲ್ಲಿಕಾರ್ಬಲಿಸ್ ಬಯೇನ ಪೈಪೋಟಿ ಒಡ್ಡಿದರೂ ಗೆಲುವು ಮೆಡ್ವೆಡೆವ್ ಪಾಲಾಯಿತು. ಮೂರನೇ ಸೆಟ್‌ ಸುಲಭವಾಗಿ ತಮ್ಮದಾಗಿಸಿಕೊಂಡ ಮೆಡ್ವೆಡೆವ್‌ ಪಂದ್ಯವನ್ನು ಗೆದ್ದುಕೊಂಡರು.

ರಫೆಲ್ ನಡಾಲ್‌, ಸಿಸಿಪಸ್‌ಗೆ ಸುಲಭ ಜಯ

ತಮ್ಮ ಫಿಟ್‌ನೆಸ್ ಬಗ್ಗೆ ಟೆನಿಸ್ ಜಗತ್ತಿನ ಸಂದೇಹವನ್ನು ಇಲ್ಲದೆ ಮಾಡುವಂತೆ ಆಡಿದ ಸ್ಪೇನ್‌ನ ರಫೆಲ್ ನಡಾಲ್ ಅಮೆರಿಕದ ಮೈಕೆಲ್ ಮಿಮೋಹ್ ಅವರನ್ನು 6-1, 6-4, 6-2ರಲ್ಲಿ ಮಣಿಸಿ ಮೂರನೇ ಸುತ್ತಿಗೆ ಲಗ್ಗೆ ಇರಿಸಿದರು. ದಾಖಲೆಯ 21ನೇ ಗ್ರ್ಯಾನ್‌ಸ್ಲಾಂ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ನಡಾಲ್ ಮುಂದೆ ಅರ್ಹತಾ ಸುತ್ತಿನಲ್ಲಿ ಗೆದ್ದು ಬಂದಿದ್ದಮಿಮೋಹ್ ಕಂಗೆಟ್ಟರು.

ಐದು ಸೆಟ್‌ಗಳ ವರೆಗೆ ಸಾಗಿದ ಜಿದ್ದಾಜಿದ್ದಿಯ ಪಂದ್ಯದಲ್ಲಿ ವಿಶ್ವ ಕ್ರಮಾಂಕದಲ್ಲಿ ಆರನೇ ಸ್ಥಾನದಲ್ಲಿರುವ ಗ್ರೀಸ್‌ನ ಸ್ಟೆಫನೋಸ್ ಸಿಸಿಪಸ್ ವೈಲ್ಡ್ ಕಾರ್ಡ್ ಪ್ರವೇಶ ಪಡೆದಿರುವ ಆಸ್ಟ್ರೇಲಿಯಾದ ತನಾಸಿ ಕೊಕಿಂಕಿಸ್ ವಿರುದ್ಧ 6-7 (5/7), 6-1, 6-1, 6-7 (5/7), 6-4ರಲ್ಲಿ ಗೆಲುವು ದಾಖಲಿಸಿ ಮೂರನೇ ಸುತ್ತು ಪ್ರವೇಶಿಸಿದರು.

ಮೊದಲ ಸುತ್ತಿನ ಪಂದ್ಯದಲ್ಲಿ ಕೇವಲ ನಾಲ್ಕು ಗೇಮ್‌ಗಳನ್ನು ಎದುರಾಳಿಗೆ ಬಿಟ್ಟುಕೊಟ್ಟಿದ್ದ ಸಿಸಿಪಸ್‌ಗೆ 267ನೇ ರ‍್ಯಾಂಕ್‌ನಕೊಕಿಂಕಿಸ್ ರಾಡ್ ಲಾವೆರ್ ಅರೆನಾದಲ್ಲಿ ನಡೆದ ಪಂದ್ಯದ ಪ್ರತಿ ಹಂತದಲ್ಲೂ ಭಾರಿ ಪೈಪೋಟಿ ನೀಡಿದರು.

ಮಹಿಳೆಯರ ಸಿಂಗಲ್ಸ್‌ನಲ್ಲಿ ಆಸ್ಟ್ರೇಲಿಯಾ ಆಟಗಾರ್ತಿ ಆ್ಯಶ್ಲಿ ಬಾರ್ಟಿ ತಮ್ಮದೇ ದೇಶದ ದಾರಿಯಾ ಗಾರ್ವಿಲೊವಾ ಎದುರು6-1, 7-6(7)ರಲ್ಲಿ ಗೆಲುವು ಸಾಧಿಸಿದರು. ಎಸ್ಟೋನಿಯಾದ ಕಯಾ ಕೆನೋಪಿ, ಅಮೆರಿಕದ ಸೋಫಿಯಾ ಕೆನಿನ್ ಅವರನ್ನು 6-3, 6-2ರಲ್ಲಿ ಮಣಿಸಿದರು.ಉಕ್ರೇನ್‌ನ ಎಲಿನಾ ಸ್ವಿಟೋಲಿನಾ ಅಮೆರಿಕದ ಕೊರಿ ಗಾಫ್‌ ವಿರುದ್ಧ6-4, 6-3ರ ಜಯ ದಾಖಲಿಸಿದರು. ಜೆಕ್‌ ಗಣರಾಜ್ಯದ ಕರೊಲಿನಾ ಪ್ಲಿಸ್ಕೋವ ಅಮೆರಿಕದ ಡ್ಯಾನಿಯೆಲಿ ಕೊಲಿನ್ಸ್ ವಿರುದ್ಧ 7-5, 6-2ರಲ್ಲಿ ಜಯ ಗಳಿಸಿದರು.

ಅಂಗಣದಲ್ಲೇ ಜಗಳ ಕಾದ ಆಟಗಾರರು

ಜಾನ್ ಕೇನ್ ಅರೆನಾದಲ್ಲಿ ನಡೆದ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಕಾದಾಡಿದ ಇಟಲಿಯ ಫಾಬಿಯೊ ಫಾಗ್ನಿನಿ ಮತ್ತು ಸಾಲ್ವತೊರ್ ಕರುಸೊ ಪಂದ್ಯದ ನಂತರ ಅಂಗಣದಲ್ಲೇ ಕಾದಾಡಿದರು. ಅಧಿಕಾರಿಗಳು ಮಧ್ಯಪ್ರವೇಶಿಸಿ ಜಗಳ ಬಿಡಿಸಬೇಕಾಗಿ ಬಂತು. ಆದರೆ ನಂತರ ಪ್ರತಿಕ್ರಿಯಿಸಿದ ಫಾಗ್ನಿನಿ ’ನಾವಿಬ್ಬರೂ ಒಳ್ಳೆಯ ಗೆಳೆಯರಾಗಿದ್ದು ಅಂಗಣದಲ್ಲಿ ಏನು ನಡೆಯಿತೋ ಅದನ್ನು ಅಲ್ಲೇ ಮರೆತಿದ್ದೇವೆ’ ಎಂದು ಹೇಳಿದ್ದಾರೆ.

ನಾಲ್ಕು ತಾಸುಗಳಿಗೂ ಹೆಚ್ಚು ಕಾಲ ಇಬ್ಬರೂ ಪಟ್ಟು ಬಿಡದೆ ಹೋರಾಡಿದ ಪಂದ್ಯದಲ್ಲಿ 16ನೇ ಶ್ರೇಯಾಂಕಿತ ಫಾಗ್ನಿನಿ4-6, 6-2, 2-6, 6-3, 7-6 (14/12)ರಲ್ಲಿ ಗೆಲುವು ಸಾಧಿಸಿದ್ದರು. ಆದರೆ ಕೈಕುಲುಕುವ ಸಂದರ್ಭದಲ್ಲಿ ಇಬ್ಬರೂ ಜಗಳ ಮಾಡಿದರು.

ನಡಾಲ್ ಮತ್ತು ಮೈಕೆಲ್ ಮಿಮೋಹ್ ನಡುವಿನ ಪಂದ್ಯದ ಸಂದರ್ಭದಲ್ಲಿ ಪ್ರೇಕ್ಷಕರ ಸ್ಟ್ಯಾಂಡ್‌ನಲ್ಲಿ ಗಲಾಟೆ ಮಾಡಿದ ಅಭಿಮಾನಿಯೊಬ್ಬನನ್ನು ಭದ್ರತಾ ಸಿಬ್ಬಂದಿ ಹೊರಗಟ್ಟಿದ ಘಟನೆಯೂ ನಡೆಯಿತು.

ದಿವಿಜ್‌, ಅಂಕಿತಾಗೆ ನಿರಾಸೆ

ಮೆಲ್ಬರ್ನ್‌ (ಪಿಟಿಐ): ಭಾರತದ ದಿವಿಜ್ ಶರಣ್ ಮತ್ತು ಅಂಕಿತಾ ರೈನಾ ಕ್ರಮವಾಗಿ ಪುರುಷ ಮತ್ತು ಮಹಿಳೆಯರ ಡಬಲ್ಸ್‌ ಪಂದ್ಯಗಳಲ್ಲಿ ನೇರ ಸೆಟ್‌ಗಳ ಸೋಲುಂಡು ಹೊರಬಿದ್ದರು. ಗ್ರ್ಯಾನ್‌ಸ್ಲಾಂ ಟೂರ್ನಿಯೊಂದಕ್ಕೆ ಅರ್ಹತೆ ಪಡೆದ ಭಾರತದ ಮೂರನೇ ಮಹಿಳೆ ಎಂಬ ಖ್ಯಾತಿ ಗಳಿಸಿರುವ ಅಂಕಿತಾ ಹಾಗೂ ರೊಮೇನಿಯಾದ ಮಿಹೇಲ ಬುಜರೆಂಕು ಜೋಡಿ 3-6, 0-6ರಲ್ಲಿ ಆಸ್ಟ್ರೇಲಿಯಾದ ಒಲಿವಿಯಾ ಗಡೆಕಿ ಮತ್ತು ಬೆಲಿಂದಾ ವೂಲಾಕ್ ಎದುರು ಸೋತರು. ದಿವಿಜ್ ಮತ್ತು ಸ್ಲೊವೇಕಿಯಾದ ಇಗರ್ ಜೆಲೆನೆ 1-6, 4-6ರಲ್ಲಿ ಜರ್ಮನಿಯ ಯಾನಿಕ್ ಹ್ಯಾಂಫ್‌ಮನ್ ಹಾಗೂ ಕೆವಿನ್ ಕ್ವೇಜ್ ವಿರುದ್ಧ ಸೋತರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT