ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರ‍್ಯಾಂಕಿಂಗ್‌: ನಡಾಲ್ ಹಿಂದಿಕ್ಕಿ ಎರಡನೇ ಸ್ಥಾನಕ್ಕೇರಿದ ಮೆಡ್ವೆಡೆವ್

Last Updated 15 ಮಾರ್ಚ್ 2021, 21:10 IST
ಅಕ್ಷರ ಗಾತ್ರ

ಪ್ಯಾರಿಸ್: ಸ್ಪೇನ್‌ನ ರಫೆಲ್ ನಡಾಲ್ ಅವರನ್ನು ಹಿಂದಿಕ್ಕಿದ ರಷ್ಯಾದ ಡ್ಯಾನಿಯಲ್ ಮೆಡ್ವೆಡೆವ್, ವಿಶ್ವ ಟೆನಿಸ್ ರ‍್ಯಾಂಕಿಂಗ್‌ನಲ್ಲಿ ಎರಡನೇ ಸ್ಥಾನಕ್ಕೇರಿದ್ದಾರೆ. ಸರ್ಬಿಯಾದ ನೊವಾಕ್ ಜೊಕೊವಿಚ್ ಮೊದಲ ಸ್ಥಾನದಲ್ಲೇ ಉಳಿದಿದ್ದಾರೆ. ಮಹಿಳೆಯರ ವಿಭಾಗದಲ್ಲಿ ಆಸ್ಟ್ರೇಲಿಯಾದ ಆ್ಯಶ್ಲಿ ಬಾರ್ಟಿ ಮೊದಲ ಸ್ಥಾನ ಅಬಾಧಿತವಾಗಿದ್ದು ಸ್ಪೇನ್‌ನ ಗಾರ್ಬೈನ್ ಮುಗುರುಜಾ ಬಡ್ತಿ ಹೊಂದಿದ್ದಾರೆ.

25 ವರ್ಷದ ಮೆಡ್ವೆಡೆವ್‌ ಈ ವರ್ಷದ ಆಸ್ಟ್ರೇಲಿಯನ್ ಓಪನ್ ಟೂರ್ನಿಯ ಫೈನಲ್‌ನಲ್ಲಿ ನೊವಾಕ್ ಜೊಕೊವಿಚ್‌ಗೆ ಮಣಿದಿದ್ದರು. ನಂತರವೂ ವಿವಿಧ ಟೂರ್ನಿಗಳಲ್ಲಿ ಅಮೋಘ ಆಟವಾಡಿದ್ದರು. ಭಾನುವಾರ ಮುಕ್ತಾಯಗೊಂಡ ಮಾರ್ಸೆಲಿ ಟೂರ್ನಿಯಲ್ಲಿ ಪೀರಿ ಹ್ಯೂಗ್ಸ್ ರಾಬರ್ಟ್‌ ವಿರುದ್ಧ6-4, 6-7 (4/7), 6-4ರಲ್ಲಿ ಗೆದ್ದು ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದರು.

ರ‍್ಯಾಂಕಿಂಗ್ ಪಟ್ಟಿಯ ಎರಡನೇ ಸ್ಥಾನದಲ್ಲಿ ಕಾಣಿಸಿಕೊಳ್ಳುವುದರೊಂದಿಗೆ ಮೆಡ್ವೆಡೆವ್‌ 16 ವರ್ಷಗಳಲ್ಲಿ ಈ ಸ್ಥಾನಕ್ಕೇರಿದ ಹೊಸ ಆಟಗಾರ ಎನಿಸಿಕೊಂಡರು. 2005ರಿಂದ ಇಲ್ಲಿಯ ವರೆಗೆ ರೋಜರ್ ಫೆಡರರ್‌, ರಫೆಲ್ ನಡಾಲ್‌, ನೊವಾಕ್ ಜೊಕೊವಿಚ್ ಮತ್ತು ಆ್ಯಂಡಿ ಮರ್ರೆ ಮಾತ್ರ ಈ ಸ್ಥಾನದಲ್ಲಿ ಇದ್ದರು. ಅಗ್ರ ಸ್ಥಾನದಲ್ಲಿ ಅತಿ ಹೆಚ್ಚು ಕಾಲ ಉಳಿದಿದ್ದ ಫೆಡರರ್ ಅವರ ದಾಖಲೆಯನ್ನು ನೊವಾಕ್ ಜೊಕೊವಿಚ್ ಕಳೆದ ವಾರವಷ್ಟೆ ಹಿಂದಿಕ್ಕಿದ್ದರು.

ಮೂರು ಸ್ಥಾನ ಏರಿಕೆ ಕಂಡ ಮುಗುರುಜಾ

ಮಹಿಳೆಯರ ವಿಭಾಗದಲ್ಲಿ ಗಾರ್ಬೈನ್ ಮುಗುರುಜಾ ಮೂರು ಸ್ಥಾನಗಳ ಏರಿಕೆಯೊಂದಿಗೆ 13ನೇ ಸ್ಥಾನಕ್ಕೆ ತಲುಪಿದ್ದಾರೆ. ಫ್ರೆಂಚ್ ಓಪನ್ ಮತ್ತು ವಿಂಬಲ್ಡನ್‌ ಟೂರ್ನಿಯ ಮಾಜಿ ಚಾಂಪಿಯನ್ ಮುಗುರುಜಾ ಶನಿವಾರ ಮುಕ್ತಾಯಗೊಂಡ ದುಬೈ ಓಪನ್ ಟೂರ್ನಿಯ ಪ್ರಶಸ್ತಿ ಗೆಲ್ಲುವುದರೊಂದಿಗೆ ಎರಡು ವರ್ಷಗಳ ಪ್ರಶಸ್ತಿ ಬರವನ್ನು ನೀಗಿಸಿಕೊಂಡಿದ್ದರು. ಫೈನಲ್‌ನಲ್ಲಿ ಅವರು ಶ್ರೇಯಾಂಕ ರಹಿತ ಆಟಗಾರ್ತಿ ಜೆಕ್ ಗಣರಾಜ್ಯದ ಬಾರ್ಬೊರಾ ಕ್ರೆಜಿಕೋವಾ ಎದುರು ಜಯ ಸಾಧಿಸಿದ್ದರು.

ಆಸ್ಟ್ರೇಲಿಯಾದ ಆ್ಯಶ್ಲಿ ಬಾರ್ಟಿ ಅಗ್ರ ಸ್ಥಾನವನ್ನು ಕಾಯ್ದುಕೊಂಡಿದ್ದಾರೆ. ಅಮೆರಿಕದ ಜೆನಿಫರ್ ಬಾರ್ಡಿ, ಬೆಲಾರಸ್‌ನ ವಿಕ್ಟೋರಿಯಾ ಅಜರೆಂಕಾ ಮತ್ತು ಪೋಲೆಂಡ್‌ನ ಇಗಾ ಸ್ವಿಯಾಟೆಕ್ ಒಂದೊಂದು ಸ್ಥಾನವನ್ನು ಕಳೆದುಕೊಂಡಿದ್ದಾರೆ. ಬೆಲ್ಜಿಯಂನ ಎಲಿಸ್ ಮರ್ಟೆನ್ಸ್‌ ಬ್ರಿಟನ್‌ನ ಜೊಹನ್ನಾ ಕೊಂತಾ ಅವರನ್ನು ಹಿಂದಿಕ್ಕಿ 17ನೇ ಸ್ಥಾನಕ್ಕೇರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT