ಟೆನಿಸ್‌: ಪೆಲ್ಲಾ ಎದುರು ಮಣಿದ ಮರಿನ್‌

ಬುಧವಾರ, ಏಪ್ರಿಲ್ 24, 2019
23 °C

ಟೆನಿಸ್‌: ಪೆಲ್ಲಾ ಎದುರು ಮಣಿದ ಮರಿನ್‌

Published:
Updated:
Prajavani

ಮಾಂಟೆ ಕಾರ್ಲೊ, ಮೊನಾಕೊ : ಮಾಂಟೆ ಕಾರ್ಲೊ ಮಾಸ್ಟರ್ಸ್‌ ಟೆನಿಸ್‌ ಟೂರ್ನಿಯಲ್ಲಿ ಮಂಗಳವಾರ ಅಚ್ಚರಿಯ ಫಲಿತಾಂಶ ಹೊರಬಿದ್ದಿದೆ.

ಕ್ರೊವೇಷ್ಯಾದ ಮರಿನ್‌ ಸಿಲಿಕ್‌, ಎರಡನೇ ಸುತ್ತಿನಲ್ಲಿ ಸೋತು ಟೂರ್ನಿಯಿಂದ ಹೊರಬಿದ್ದಿದ್ದಾರೆ.

ಪುರುಷರ ಸಿಂಗಲ್ಸ್‌ ವಿಭಾಗದ ಹಣಾಹಣಿಯಲ್ಲಿ ಅರ್ಜೆಂಟೀನಾದ ಗುಯಿಡೊ ಪೆಲ್ಲಾ 6–3, 5–7, 6–1ರಲ್ಲಿ ಸಿಲಿಕ್‌ಗೆ ಆಘಾತ ನೀಡಿದರು. ಈ ಹೋರಾಟ ಸುಮಾರು ಎರಡು ಗಂಟೆ ನಡೆಯಿತು.

ಸೆಂಟರ್‌ ಕೋರ್ಟ್‌ನಲ್ಲಿ ನಡೆದ ಹಣಾಹಣಿಯ ಮೊದಲ ಸೆಟ್‌ನಲ್ಲಿ ಎಡಗೈ ಆಟಗಾರ ಪೆಲ್ಲಾ ಮಿಂಚಿದರು. ಎರಡು ಬಾರಿ ಎದುರಾಳಿಯ ಸರ್ವ್‌ ಮುರಿದು ಗೆಲುವಿನ ತೋರಣ ಕಟ್ಟಿದರು.

ಟೂರ್ನಿಯಲ್ಲಿ ಏಳನೇ ಶ್ರೇಯಾಂಕ ಹೊಂದಿರುವ ಸಿಲಿಕ್‌, ಎರಡನೇ ಸೆಟ್‌ನಲ್ಲಿ ತಿರುಗೇಟು ನೀಡಿದರು. ಹೀಗಾಗಿ 1–1 ಸಮಬಲ ಕಂಡುಬಂತು.

ನಿರ್ಣಾಯಕ ಎನಿಸಿದ್ದ ಮೂರನೇ ಸೆಟ್‌ನಲ್ಲಿ ಪೆಲ್ಲಾ ಪಾರಮ್ಯ ಮೆರೆದರು. 2014ರ ಅಮೆರಿಕ ಓಪನ್‌ ಟೂರ್ನಿಯಲ್ಲಿ ಚಾಂಪಿಯನ್‌ ಆಗಿದ್ದ ಮರಿನ್‌ ಕೇವಲ ಒಂದು ಗೇಮ್‌ ಗೆಲ್ಲಲಷ್ಟೇ ಶಕ್ತರಾದರು.

ಮೊದಲ ಸುತ್ತಿನ ಹಣಾಹಣಿಯಲ್ಲಿ ಟೇಲರ್‌ ಫ್ರಿಟ್ಜ್‌ 6–4, 2–0ರಲ್ಲಿ ಫ್ರಾನ್ಸ್‌ನ ಜೋ ವಿಲ್ಫ್ರೆಡ್‌ ಸೊಂಗಾ ಅವರನ್ನು ಸೋಲಿಸಿದರು.

ಮೊದಲ ಸುತ್ತಿನಲ್ಲಿ ನಿರಾಸೆ ಕಂಡ ಸೊಂಗಾ, ಎರಡನೇ ಸೆಟ್‌ನಲ್ಲಿ 0–2ರಿಂದ ಹಿನ್ನಡೆ ಕಂಡಿದ್ದರು. ಈ ವೇಳೆ ಗಾಯದ ಕಾರಣ ಅಂಗಳ ತೊರೆದರು.

ಇತರ ಪಂದ್ಯಗಳಲ್ಲಿ ಕ್ಯಾಮರಾನ್‌ ನೂರಿ 6–4, 6–3ರಲ್ಲಿ ಆ್ಯಡ್ರಿಯನ್‌ ಮನ್ನಾರಿನೊ ಎದುರೂ, ಪಿಯೆರ್‌ ಹ್ಯೂಸ್‌ ಹರ್ಬರ್ಟ್‌ 6–4, 6–4ರಲ್ಲಿ ಫರ್ನಾಂಡೊ ವರ್ಡಾಸ್ಕೊ ಮೇಲೂ, ಗಿಲ್ಲೆಸ್‌ ಸಿಮನ್‌ 7–5, 6–1ರಲ್ಲಿ ಅಲೆಕ್ಸಿ ಪೊಪೊರಿನ್‌ ವಿರುದ್ಧವೂ, ಫೆಲಿಕ್ಸ್‌ ಆಗರ್‌ ಅಲಿಯಾಸಿಮೆ 7–5, 7–6ರಲ್ಲಿ ವುವಾನ್‌ ಇಗ್ನಾಸಿಯೊ ಲೊಂಡೆರೊ ಮೇಲೂ ಗೆದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !