ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ವಾರ್ಟರ್‌ ಫೈನಲ್‌ಗೆ ಜೊಕೊವಿಚ್‌

ಮಾಂಟೆ ಕಾರ್ಲೊ ಮಾಸ್ಟರ್ಸ್‌ ಟೆನಿಸ್‌ ಟೂರ್ನಿ
Last Updated 18 ಏಪ್ರಿಲ್ 2019, 19:49 IST
ಅಕ್ಷರ ಗಾತ್ರ

ಮಾಂಟೆ ಕಾರ್ಲೊ, ಮೊನಾಕೊ (ಎಎಫ್‌ಪಿ): ಅಗ್ರ ಶ್ರೇಯಾಂಕದ ಆಟಗಾರ ನೊವಾಕ್‌ ಜೊಕೊವಿಚ್‌, ಮಾಂಟೆ ಕಾರ್ಲೊ ಮಾಸ್ಟರ್ಸ್‌ ಟೆನಿಸ್‌ ಟೂರ್ನಿಯಲ್ಲಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ.

ಗುರುವಾರ ನಡೆದ ಪುರುಷರ ಸಿಂಗಲ್ಸ್‌ ವಿಭಾಗದ ಪ್ರೀ ಕ್ವಾರ್ಟರ್‌ ಫೈನಲ್‌ ಹೋರಾಟದಲ್ಲಿ ಸರ್ಬಿಯಾದ ಜೊಕೊವಿಚ್‌ 6–3, 6–0 ನೇರ ಸೆಟ್‌ಗಳಿಂದ ಅಮೆರಿಕದ ಟೇಲರ್‌ ಫ್ರಿಟ್ಜ್‌ ಅವರನ್ನು ಪರಾಭವಗೊಳಿಸಿದರು.

ವಿಶ್ವ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನದಲ್ಲಿರುವ ನೊವಾಕ್‌, ಟೂರ್ನಿಯಲ್ಲಿ ಒಂಬತ್ತನೇ ಸಲ ಎಂಟರ ಘಟ್ಟ ಪ್ರವೇಶಿಸಿದ ಸಾಧನೆ ಮಾಡಿದರು.

ಮೂರನೇ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿರುವ ಜೊಕೊವಿಚ್‌, ಮೊದಲ ಸೆಟ್‌ನ ಶುರುವಿನಲ್ಲಿ ಎದುರಾಳಿಯಿಂದ ಪ್ರಬಲ ಪೈಪೋಟಿ ಎದುರಿಸಿದರು. ಹೀಗಾಗಿ 3–3 ಸಮಬಲ ಕಂಡುಬಂತು. ನಂತರ ಸರ್ಬಿಯಾದ ಆಟಗಾರ ಪ್ರಾಬಲ್ಯ ಮೆರೆದರು. ಆಕರ್ಷಕ ಕ್ರಾಸ್‌ಕೋರ್ಟ್‌ ಸ್ಮ್ಯಾಷ್‌ಗಳ ಮೂಲಕ ಗೇಮ್‌ ಜಯಿಸಿ ಎದುರಾಳಿಯನ್ನು ಕಂಗೆಡಿಸಿದರು.

ಎರಡನೇ ಸೆಟ್‌ನಲ್ಲಿ ಜೊಕೊವಿಚ್‌ ಆರಂಭದಿಂದಲೇ ಮೇಲುಗೈ ಸಾಧಿಸಿದರು. ತಾವು ಮಾಡಿದ ಸರ್ವ್‌ಗಳನ್ನು ಉಳಿಸಿಕೊಂಡ ಅವರು ಎದುರಾಳಿಯ ಎಲ್ಲಾ ಸರ್ವ್‌ಗಳನ್ನೂ ಮುರಿದು ಏಕಪಕ್ಷೀಯವಾಗಿ ಪಂದ್ಯ ಗೆದ್ದರು.

ಎಂಟರ ಘಟ್ಟದ ಹಣಾಹಣಿಯಲ್ಲಿ ಜೊಕೊವಿಚ್‌, ರಷ್ಯಾದ ಡೇನಿಯಲ್‌ ಮೆಡ್ವೆದೇವ್‌ ಎದುರು ಆಡಲಿದ್ದಾರೆ.

ಹದಿನಾರರ ಘಟ್ಟದ ಇನ್ನೊಂದು ಪೈಪೋಟಿಯಲ್ಲಿ ಮೆಡ್ವೆದೇವ್‌ 6–2, 1–6, 6–4ರಲ್ಲಿ ಗ್ರೀಸ್‌ನ ಸ್ಟೆಫಾನೊಸ್‌ ಸಿಸಿಪಸ್‌ ಅವರನ್ನು ಮಣಿಸಿದರು.

ನಡಾಲ್‌ ಜಯಭೇರಿ: ಸ್ಪೇನ್‌ ರಫೆಲ್‌ ನಡಾಲ್‌ ಕೂಡಾ ಕ್ವಾರ್ಟರ್‌ ಫೈನಲ್‌ಗೆ ಲಗ್ಗೆ ಇಟ್ಟರು.

ಪ್ರೀ ಕ್ವಾರ್ಟರ್‌ ಪೈ‍ಪೋಟಿಯಲ್ಲಿ ಎರಡನೇ ಶ್ರೇಯಾಂಕದ ಆಟಗಾರ ನಡಾಲ್‌ 6–4, 6–1ರಲ್ಲಿ ಬಲ್ಗೇರಿಯಾದ ಗ್ರಿಗರ್‌ ಡಿಮಿಟ್ರೊವ್‌ ಅವರನ್ನು ಮಣಿಸಿದರು.

ಇತರ ಪಂದ್ಯಗಳಲ್ಲಿ ಗುಯಿಡೊ ಪೆಲ್ಲಾ 6–4, 4–6, 6–4ರಲ್ಲಿ ಮಾರ್ಕೊ ಸೆಚ್ಚಿನಾಟೊ ಎದುರೂ, ಲೊರೆಂಜೊ ಸೊನೆಗೊ 6–2, 7–5ರಲ್ಲಿ ಕ್ಯಾಮರಾನ್‌ ನೂರಿ ಮೇಲೂ ಗೆದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT