ಬುಧವಾರ, ಅಕ್ಟೋಬರ್ 23, 2019
21 °C
ಸಂವಾದದಲ್ಲಿ ಪಾಲ್ಗೊಂಡ ರೋಹನ್‌ ಬೋಪಣ್ಣ

‘ದೇಶದಲ್ಲಿ ಹೆಚ್ಚು ಟೂರ್ನಿಗಳು ನಡೆಯಬೇಕಿದೆ’

Published:
Updated:
Prajavani

ಬೆಂಗಳೂರು: ‘ದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಟೂರ್ನಿಗಳು ನಡೆಯಬೇಕಾಗಿದೆ. ಈಗ ಚಾಲೆಂಜರ್‌ ಕಪ್‌, ಇಂಡಿಯಾ ಓಪನ್‌ ಟೂರ್ನಿ ಮಾತ್ರ ದೊಡ್ಡ ಮಟ್ಟದಲ್ಲಿ ನಡೆಯುತ್ತಿದೆ. ಹೆಚ್ಚಿನ ಸಂಖ್ಯೆಯಲ್ಲಿ ಟೂರ್ನಿಗಳು ನಡೆದಾಗ ಮಾತ್ರ ಗುಣಮಟ್ಟದ ಆಟಗಾರರು ಹೊರಹೊಮ್ಮಲು ಸಾಧ್ಯ’ ಎಂದು ಭಾರತ ಡೇವಿಸ್‌ ಕಪ್‌ ತಂಡದ ಆಟಗಾರ ರೋಹನ್‌ ಬೋಪಣ್ಣ ಹೇಳಿದರು.

ಕೆಎಸ್‌ಎಲ್‌ಟಿಎ ಕ್ರೀಡಾಂಗಣದಲ್ಲಿ ಶುಕ್ರವಾರ ‘ಎಸಿಕ್ಸ್‌ ಅಥ್ಲೀಟ್‌ ಘೋಷಣೆ’ ಕಾರ್ಯಕ್ರಮದ ಸಂದರ್ಭದಲ್ಲಿ ಅವರು ಮಾಧ್ಯಮ ಸಂವಾದದಲ್ಲಿ ಮಾತನಾಡಿದರು.

ಫ್ರಾನ್ಸ್‌, ಅಮೆರಿಕ, ಸ್ಪೇನ್‌ ಮೊದಲಾದ ದೇಶಗಳಲ್ಲಿ ವರ್ಷಕ್ಕೆ ಏನಿಲ್ಲವೆಂದರೂ 20–25 ಟೂರ್ನಿಗಳು ನಡೆಯುತ್ತಿರುತ್ತವೆ. ಹೀಗಾಗಿ ಅಲ್ಲಿಂದ ಸಾಕಷ್ಟು ಆಟಗಾರರು ಹೊರಹೊಮ್ಮುತ್ತಾರೆ. ಕೋರ್ಟ್‌, ಕೋಚ್, ಅಕಾಡೆಮಿಗಳ ಜೊತೆ ಟೂರ್ನಿಗಳೂ ನಡೆಯಬೇಕು. ಅದಕ್ಕೊಂದು ಚೌಕಟ್ಟೂ ಇರಬೇಕು ಎಂದು ಅವರು ಅಭಿಪ್ರಾಯಪಟ್ಟರು.

‘ನಾವು ಹೊರದೇಶಗಳಲ್ಲಿ ಆಡುವ ಪಂದ್ಯಗಳನ್ನು ಇಲ್ಲಿಯ ಆಟಗಾರರಿಗೆ ನೋಡಲು ಆಗುವುದಿಲ್ಲ. ಇಲ್ಲಿಯೇ ಟೂರ್ನಿಗಳು ನಡೆದರೆ ಅದನ್ನು ನೋಡಿ ಪ್ರತಿಭಾನ್ವಿತ ಆಟಗಾರರು ಪ್ರೇರಣೆ ಪಡೆಯುವ ಅವಕಾಶವಿರುತ್ತದೆ. ಗ್ರ್ಯಾನ್‌ಸ್ಲಾಮ್‌ ಟೂರ್ನಿಗಳಲ್ಲಿ ನಮ್ಮ ದೇಶದ ಆಟಗಾರರು ಹೆಚ್ಚಿನ ಸಂಖ್ಯೆಯಲ್ಲಿ ಆಡುವುದನ್ನು ನೋಡಲು ನಾನು ಇಷ್ಟಪಡುತ್ತೇನೆ’ ಎಂದು ಬೋಪಣ್ಣ ಹೇಳಿದರು.

ಮಾಧ್ಯಮ ಸಂವಾದಕ್ಕೆ ಮೊದಲು ರೋಹನ್ ಬೋಪಣ್ಣ ಅವರನ್ನು ‘ಎಸಿಕ್ಸ್ ಅಥ್ಲೀಟ್’ ಎಂದು ಘೋಷಿಸಿತು. ಎಸಿಕ್ಸ್‌ ಅಥ್ಲೀಟ್‌ ಆಗಿರುವ ಕರ್ಮನ್‌ ಕೌರ್‌ ಥಂಡಿ ಅವರೂ ಉಪಸ್ಥಿತರಿದ್ದರು.

‘ರೋಹನ್ ಬೋಪಣ್ಣ ಟೆನಿಸ್ ಅಕಾಡೆಮಿಯ ಮೂಲಕ ಟೆನಿಸ್‍ಗೆ ಅಗತ್ಯವಿರುವ ಎಲ್ಲ ಸೌಕರ್ಯಗಳನ್ನು ನೀಡುವ ಜತೆಗೆ ತರಬೇತುದಾರರ ಮೂಲಕ ಯುವ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಉದ್ದೇಶವನ್ನೂ ಎಸಿಕ್ಸ್‌ ಹೊಂದಿದೆ. ಮುಂದಿನ ತಿಂಗಳು ಆರಂಭವಾಗಲಿರುವ ಈ ಯೋಜನೆಯಡಿ ರೋಹನ್‌ ಅವರ ಅಕಾಡೆಮಿಯಲ್ಲಿ ಪ್ರತಿ ಭಾನುವಾರ ಟೆನಿಸ್‌ ತರಗತಿಗಳು ನಡೆಯಲಿವೆ. ಅಕಾಡೆಮಿ ಕೋಚ್‍ಗಳು ವಿಶೇಷ ತರಗತಿಗಳನ್ನು ನಡೆಸಲಿದ್ದಾರೆ. ಎಸಿಕ್ಸ್‌ನ ಶೋರೂಂಗಳಲ್ಲಿ ತರಬೇತಿಗೆ ನೋಂದಾಯಿಸಿಕೊಳ್ಳುವ ಅವಕಾಶವಿದೆ’ ಎಂದು ಎಸಿಕ್ಸ್ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕ ರಜತ್ ಖುರಾನ ತಿಳಿಸಿದರು. 

ಕಾರ್ಯಕ್ರಮದಲ್ಲಿ ಎಸಿಕ್ಸ್ ಅಥ್ಲೀಟ್ ಟೆನಿಸ್ ಆಟಗಾರ್ತಿ ಕರ್ಮನ್ ಥಂಡಿ ಅವರೂ ಪಾಲ್ಗೊಂಡಿದ್ದರು.‌ ರೋಹನ್‌ ಬೋಪಣ್ಣ ಮತ್ತು ಕರ್ಮನ್‌ ಕೌರ್‌ ಅವರು ಪ್ರದರ್ಶನ ಪಂದ್ಯವಾಡಿದರು.

‘ಭಾರತ ತಂಡ ಬಲಿಷ್ಠವಾಗಿದೆ’
ಬೆಂಗಳೂರು:
‘ಪಾಕಿಸ್ತಾನ ವಿರುದ್ಧ ಇಸ್ಲಾಮಾಬಾದ್‌ನಲ್ಲಿ ನವೆಂಬರ್‌ ಕೊನೆಯಲ್ಲಿ ನಿಗದಿಯಾಗಿರುವ ಡೇವಿಸ್‌ ಕಪ್‌ ಪಂದ್ಯವಾಡಲು ಕಾತರದಿಂದ ಇದ್ದೇವೆ. ಆದರೆ ನವೆಂಬರ್‌ 4ರಂದು ಭದ್ರತಾ ವ್ಯವಸ್ಥೆಗಳ ಪರಾಮರ್ಶೆ ನಡೆದ ನಂತರವಷ್ಟೇ ಪಂದ್ಯದ ಭವಿಷ್ಯ ಗೊತ್ತಾಗಲಿದೆ’ ಎಂದು ಭಾರತ ತಂಡದ ಆಟಗಾರ ರೋಹನ್‌ ಬೋಪಣ್ಣ ಹೇಳಿದರು.

ಐಟಿಎಫ್‌ನ ಪರಿಶೀಲನೆ ನಂತರ ಪಂದ್ಯ ಇಸ್ಲಾಮಾಬಾದ್‌ನಲ್ಲಿ ನಡೆಯಲಿದೆಯೇ ಅಥವಾ ತಟಸ್ಥ ಸ್ಥಳವೊಂದಕ್ಕೆ ಸ್ಥಳಾಂತರವಾಗಲಿದೆಯೇ ಎಂಬ ನಿರ್ಧಾರವಾಗಲಿದೆ.

ಶುಕ್ರವಾರ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಬೋಪಣ್ಣ ಅವರು ‘ಭಾರತ ಡೇವಿಸ್‌ ಕಪ್‌ ತಂಡ ಪ್ರಬಲವಾಗಿದೆ. ಸುಮೀತ್‌ ನಗಾಲ್‌ ಇತ್ತೀಚಿನ ದಿನಗಳಲ್ಲಿ ಚೆನ್ನಾಗಿ ಆಡುತ್ತಿದ್ದಾರೆ. ಅಮೆರಿಕ ಓಪನ್‌ನಲ್ಲಿ ರೋಜರ್‌ ಫೆಡರರ್‌ ವಿರುದ್ಧವೂ ಆಡಿದ್ದಾರೆ. ರಾಮಕುಮಾರ್‌ ರಾಮನಾಥನ್‌, ಪ್ರಜ್ಞೇಶ್‌ ಗುಣೇಶ್ವರನ್‌ ಜೊತೆ, ನಾನು ಮತ್ತು ದಿವಿಜ್‌ ಶರಣ್‌ ಡಬಲ್ಸ್‌ನಲ್ಲಿ ಇದ್ದೇವೆ’ ಎಂದು ಹೇಳಿದರು.

‘ಆದರೆ ಅದಕ್ಕೆ ಮೊದಲು ಇದೇ ತಿಂಗಳ 30 ರಿಂದ ಆರಂಭವಾಗುವ ಟೋಕಿಯೊ ಎಟಿಪಿ–500, ಶಾಂಘೈ ಮಾಸ್ಟರ್ಸ್‌, ವಿಯೆನ್ನಾ ಎಟಿಪಿ  ಮತ್ತು  ಪ್ಯಾರಿಸ್‌ ಮಾಸ್ಟರ್ಸ್‌ ಟೂರ್ನಿಗಳಿಗೆ ನಾನು ಸಿದ್ಧತೆ ನಡೆಸಬೇಕಾಗಿದೆ’ ಎಂದು ಅವರು ಹೇಳಿದರು.

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಕ್ರಿಯಿಸಿ (+)