ಗುರುವಾರ , ಮೇ 26, 2022
24 °C
ವಿಕ್ಟೋರಿಯಾ ಅಜರೆಂಕಾ ವಿರುದ್ಧ ಗೆದ್ದ ಬಾರ್ಬೊರಾ ಕ್ರೆಜಿಕೋವಾ

ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿ: ಎಂಟರ ಘಟ್ಟಕ್ಕೆ ನಡಾಲ್, ಬಾರ್ಟಿ

ಎಪಿ/ಎಎಫ್‌ಪಿ Updated:

ಅಕ್ಷರ ಗಾತ್ರ : | |

Prajavani

ಮೆಲ್ಬರ್ನ್‌: ದಾಖಲೆ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿರುವ ಸ್ಪೇನ್‌ನ ರಫೆಲ್ ನಡಾಲ್ ಅವರು ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯ  ಕ್ವಾರ್ಟರ್‌ ಫೈನಲ್ ಪ್ರವೇಶಿಸಿದ್ದಾರೆ. ಮಹಿಳಾ ವಿಭಾಗದಲ್ಲಿ ಸ್ಥಳೀಯ ಆಟಗಾರ್ತಿ ಆ್ಯಶ್ಲಿ ಬಾರ್ಟಿ ಎಂಟರ ಘಟ್ಟ ಪ್ರವೇಶಿಸಿದ್ದಾರೆ.

ರಾಡ್ ಲೇವರ್ ಅರೆನಾದಲ್ಲಿ ನಡೆದ ಹಣಾಹಣಿಯಲ್ಲಿ ಫ್ರಾನ್ಸ್‌ನ ಅಡ್ರಿಯನ್ ಮನಾರಿನೊ ಮೊದಲ ಸೆಟ್‌ನಲ್ಲಿ ನಡಾಲ್ ಅವರಿಗೆ ಪ್ರಬಲ ಪೈಪೋಟಿ ನೀಡಿದರು. ಟೈಬ್ರೇಕರ್‌ನಲ್ಲಿ ಸೆಟ್‌ ಗೆದ್ದ ನಡಾಲ್ ಸುಲಭವಾಗಿ ಮುನ್ನಡೆದರು. 7-6 (14), 6-2, 6-2ರಲ್ಲಿ ಜಯ ಗಳಿಸಿ ಟೂರ್ನಿಯಲ್ಲಿ 14ನೇ ಬಾರಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ ಸಾಧನೆ ಮಾಡಿದರು.ಎಡಗೈ ಆಟಗಾರ ಮನಾರಿನೊ ಅವರ ಸವಾಲನ್ನು ತಾಳ್ಮೆಯಿಂದ ದಿಟ್ಟವಾಗಿ ಎದುರಿಸಿದ ನಡಾಲ್ ಮೊದಲ ಸೆಟ್‌ನ ಟೈಬ್ರೇಕರ್‌ನಲ್ಲಿ ಜಯ ಗಳಿಸಲು 28 ನಿಮಿಷ ಹಾಗೂ 40 ಸೆಕೆಂಡುಗಳನ್ನು ತೆಗೆದುಕೊಂಡಿದ್ದರು.

ಈ ಗೆಲುವಿನೊಂದಿಗೆ, 21ನೇ ಗ್ರ್ಯಾನ್‌ಸ್ಲಾಂ ಪ್ರಶಸ್ತಿ ಗೆಲ್ಲುವ ಅವರ ಹಾದಿ ಇನ್ನಷ್ಟು ಸುಲಭವಾಗಿದೆ. ಮುಂದಿನ ಪಂದ್ಯದಲ್ಲಿ ಅವರು ಕೆನಡಾದ ಡೆನಿಸ್ ಶಪವಲೊವ್‌ ಎದುರು ಸೆಣಸುವರು. ಶಪ ವಲೊವ್ ಅವರು ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ಜರ್ಮನಿಯ ಅಲೆಕ್ಸಾಂಡರ್ ಜ್ವೆರೆವ್ ಅವರನ್ನು 6-3, 7-6 (5), 6-3ರಲ್ಲಿ
ಮಣಿಸಿದರು.

ಬಾರ್ಟಿ, ಕ್ರೆಜಿಕೋವಾಗೆ ಗೆಲುವು: ಬೆಲಾರಸ್‌ನ ವಿಕ್ಟೋರಿಯಾ ಅಜರೆಂಕಾ ಅವರನ್ನು 6-2, 6-2ರಲ್ಲಿ ಮಣಿಸಿದ ಜೆಕ್ ಗಣರಾಜ್ಯದ ಬಾರ್ಬರಾ ಕ್ರೆಜಿಕೋವಾ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು. ಪೌಲಾ ಬಡೋಸಾ ಎದುರು 6-3, 6-1ರಲ್ಲಿ ಗೆದ್ದ ಅಮೆರಿಕದ ಮ್ಯಾಡಿಸನ್ ಕೀ ಅವರನ್ನು ಅಜರೆಂಕಾ ಮುಂದಿನ ಪಂದ್ಯದಲ್ಲಿ ಎದುರಿಸುವರು.

ಅಮಾಂಡ ಅನಿಸಿಮೋವ ವಿರುದ್ಧ ಆ್ಯಶ್ಲಿ ಬಾರ್ಟಿ 6-4, 6-3ರಲ್ಲಿ ಜಯ ಗಳಿಸಿದರು. ಅಮೆರಿಕದ ಜೆಸ್ಸಿಕಾ ಪೆಗುಲಾ ಅವರನ್ನು ಬಾರ್ಟಿ ಮುಂದಿನ ಹಂತದಲ್ಲಿ ಎದುರಿಸುವರು.

ದಾಖಲೆಯಲ್ಲಿ ನಡಾಲ್‌ಗೆ 2ನೇ ಸ್ಥಾನ

ರಫೆಲ್ ನಡಾಲ್‌, ಆಸ್ಟ್ರೇಲಿಯನ್‌ ಓಪನ್‌ನಲ್ಲಿ ಅತಿ ಹೆಚ್ಚು ಬಾರಿ ಕ್ವಾರ್ಟರ್ ಫೈನಲ್‌ ಪ್ರವೇಶಿಸಿದವರ ಪಟ್ಟಿಯಲ್ಲಿ ಎರಡನೇ ಸ್ಥಾನ ಹಂಚಿಕೊಂಡರು. ಆಸ್ಟ್ರೇಲಿಯಾದ ಜಾನ್ ನ್ಯೂಕಾಂಬ್ ಕೂಡ 14 ಬಾರಿ ಈ ಸಾಧನೆ ಮಾಡಿದ್ದಾರೆ. 15 ಬಾರಿ ಎಂಟರ ಘಟ್ಟ ತಲುಪಿರುವ ರೋಜರ್ ಫೆಡರರ್‌ ಮೊದಲ ಸ್ಥಾನದಲ್ಲಿದ್ದಾರೆ. ಒಟ್ಟಾರೆ ಗ್ರ್ಯಾನ್‌ಸ್ಲಾಂ ಟೂರ್ನಿಗಳಲ್ಲಿ ಅತಿ ಹೆಚ್ಚು ಕ್ವಾರ್ಟರ್ ಫೈನಲ್ ಪ್ರವೇಶಿಸಿದವರ ಸಾಲಿನಲ್ಲಿ ನಡಾಲ್ ಮೂರನೇ ಸ್ಥಾನದಲ್ಲಿದ್ದಾರೆ. ರೋಜರ್ ಫೆಡರರ್‌ ಒಟ್ಟು 58 ಬಾರಿ ಈ ಸಾಧನೆ ಮಾಡಿದ್ದರೆ, ನೊವಾಕ್ ಜೊಕೊವಿಚ್‌ 51 ಬಾರಿ ಮಾಡಿದ್ದಾರೆ. ನಡಾಲ್‌ಗೆ ಇದು 45ನೇ ಕ್ವಾರ್ಟರ್ ಫೈನಲ್‌. ಅತಿ ಹೆಚ್ಚು, 20 ಗ್ರ್ಯಾನ್‌ಸ್ಲಾಂ ಪ್ರಶಸ್ತಿಗಳನ್ನು ಗೆದ್ದಿರುವ ದಾಖಲೆಯನ್ನು ಫೆಡರರ್ ಮತ್ತು ಜೊಕೊವಿಚ್‌ ಜೊತೆ ನಡಾಲ್‌ ಹಂಚಿಕೊಂಡಿದ್ದಾರೆ.

ಸಾನಿಯಾ–ರಾಜೀವ್ ಕ್ವಾರ್ಟರ್ ಫೈನಲ್‌ಗೆ

ಭಾರತದ ಸಾನಿಯಾ ಮಿರ್ಜಾ ಮತ್ತು ಅಮೆರಿಕದ ರಾಜೀವ್ ರಾಮ್ ಜೋಡಿ ಮಿಶ್ರ ಡಬಲ್ಸ್ ವಿಭಾಗದ ಕ್ವಾರ್ಟರ್ ಫೈನಲ್‌ ಪ್ರವೇಶಿಸಿದರು. ಅಲೆನ್ ಪೆರೆಜ್ ಮತ್ತು ಮ್ಯಾಟ್ವಿ ಮಿಡೆಲ್‌ಕೂಪ್ ಎದುರಿನ ಪಂದ್ಯದಲ್ಲಿ ಈ ಜೋಡಿ 7-6 (8/6),6-4ರಲ್ಲಿ ಜಯ ಗಳಿಸಿತು.

ಶ್ರೇಯಾಂಕರಹಿತ ಭಾರತ–ಅಮೆರಿಕ ಜೋಡಿಗೆ ಎರಡನೇ ಸುತ್ತಿನ ಈ ಪಂದ್ಯ ಗೆಲ್ಲಲು ಒಂದು ತಾಸು 27 ನಿಮಿಷ ಸಾಕಾಯಿತು. ಮೊದಲ ಸುತ್ತಿನ ಪಂದ್ಯದಲ್ಲಿ ಸರ್ಬಿಯಾದ ಅಲೆಕ್ಸಾಂಡ್ರ ಕ್ರೂನಿಕ್ ಮತ್ತು ನಿಕೋಲ ಕಾಸಿಕ್‌ ಎದುರು ಈ ಜೋಡಿ ಗೆಲುವು ಸಾಧಿಸಿತ್ತು.

ಆರು ಬಾರಿಯ ಗ್ರ್ಯಾನ್‌ಸ್ಲಾಂ ಪ್ರಶಸ್ತಿ ವಿಜೇತೆ ಸಾನಿಯಾ ಮಿರ್ಜಾ ಈ ಋತುವಿನ ನಂತರ ಟೆನಿಸ್‌ಗೆ ವಿದಾಯ ಹೇಳುವುದಾಗಿ ಮಹಿಳೆಯರ ಡಬಲ್ಸ್‌ ಪಂದ್ಯದಲ್ಲಿ ಸೋತ ನಂತರ ಘೋಷಿಸಿದ್ದರು. ಸದ್ಯ ಯಾವುದೇ ವಿಭಾಗದಲ್ಲಿ ಕಣದಲ್ಲಿ ಉಳಿದಿರುವ ಭಾರತದ ಏಕೈಕ ಟೆನಿಸ್ ಪಟು ಆಗಿದ್ದಾರೆ ಅವರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು