ರಫೆಲ್‌ ನಡಾಲ್‌ಗೆ ಪ್ರಶಸ್ತಿ

7
ಟೊರಾಂಟೊ ಮಾಸ್ಟರ್ಸ್‌ ಟೆನಿಸ್‌ ಟೂರ್ನಿ; ಸ್ಟೆಫಾನೊಸ್‌ಗೆ ನಿರಾಸೆ

ರಫೆಲ್‌ ನಡಾಲ್‌ಗೆ ಪ್ರಶಸ್ತಿ

Published:
Updated:
Deccan Herald

ಟೊರಾಂಟೊ: ಸ್ಪೇನ್‌ನ ರಫೆಲ್‌ ನಡಾಲ್‌ ಅವರು ಇಲ್ಲಿ ಮುಕ್ತಾಯಗೊಂಡ ಟೊರಾಂಟೊ ಮಾಸ್ಟರ್ಸ್‌ ಟೆನಿಸ್‌ ಟೂರ್ನಿಯಲ್ಲಿ ಪ್ರಶಸ್ತಿ ಜಯಿಸಿದ್ದಾರೆ. 

ಭಾನುವಾರ ತಡರಾತ್ರಿ ನಡೆದ ಪುರುಷರ ಸಿಂಗಲ್ಸ್‌ ವಿಭಾಗದ ಫೈನಲ್‌ ಪಂದ್ಯದಲ್ಲಿ ನಡಾಲ್‌, 6-2, 7-6ರಿಂದ ಗ್ರೀಸ್‌ನ ಸ್ಟೆಫಾನೊಸ್‌ ಸಿಟ್ಸಿಪಾಸ್‌ ಅವರನ್ನು ಮಣಿಸಿದರು. 

ಅಂತಿಮ ಹಣಾಹಣಿಯ ಆರಂಭದಿಂದಲೂ ನಡಾಲ್‌ ಮೇಲುಗೈ ಸಾಧಿಸಿದರು. ಮೊದಲ ಸೆಟ್‌ನಲ್ಲಿ ಅವರ ಆಟದ ಮುಂದೆ ಸ್ಟೆಫಾನೊಸ್‌ ಅವರ ಆಟವು ಮಂಕಾಯಿತು. ಇದರಿಂದಾಗಿ ಸ್ಪೇನ್‌ ಆಟಗಾರ ಸುಲಭವಾಗಿ ಸೆಟ್‌ ತಮ್ಮದಾಗಿಸಿಕೊಂಡರು.

ಆದರೆ, ಎರಡನೇ ಸೆಟ್‌ನಲ್ಲಿ ಸಿಟ್ಸಿಪಾಸ್‌ ತಿರುಗೇಟು ನೀಡಿದರು. ಆಕ್ರಮಣಕಾರಿ ಆಟವಾಡಿದ ಅವರು ಒಂದು ಹಂತದಲ್ಲಿ ವಿಶ್ವ ಕ್ರಮಾಂಕದಲ್ಲಿ ಅಗ್ರಸ್ಥಾನದಲ್ಲಿರುವ ಆಟಗಾರನನ್ನು ಕಂಗೆಡಿಸಿದರು. ಆದರೆ, ಕೂಡಲೇ ಎಚ್ಚೆತ್ತುಕೊಂಡ ರಫೆಲ್‌, ಸಮಬಲ ಸಾಧಿಸಿದರು. ಕೊನೆಯಲ್ಲಿ ಎದುರಾಳಿಯನ್ನು ಕಟ್ಟಿಹಾಕಿ ಪಂದ್ಯವನ್ನು ಜಯಿಸಿದರು. 

ತೀವ್ರ ಪೈಪೋಟಿಯಿಮದ ಕೂಡಿದ್ದ ಎರಡನೇ ಸೆಟ್‌ನಲ್ಲಿ ಉಭಯ ಆಟಗಾರರ ನಡುವಿನ ದೀರ್ಘ ರ‍್ಯಾಲಿ, ಟೈ ಬ್ರೇಕರ್‌ಗಳು ಪ್ರೇಕ್ಷಕರ ಗಮನಸೆಳೆದವು. 

ಪಂದ್ಯದ ನಂತರ ಮಾತನಾಡಿದ ನಡಾಲ್‌, ‘ಟೂರ್ನಿಯಲ್ಲಿ ಆಡಿದ ಮೊದಲ ಪಂದ್ಯದಿಂದ ಇಲ್ಲಿಯವರೆಗೆ ಅನೇಕ ಸವಾಲುಗಳು ಎದುರಾದವು. ಪಂದ್ಯದಿಂದ ಪಂದ್ಯಕ್ಕೆ ನನ್ನ ಆಟವನ್ನು ಉತ್ತಮಪಡಿಸಿಕೊಂಡೆ. ಇದೇ ತಿಂಗಳ ಕೊನೆಯಲ್ಲಿ ಆರಂಭವಾಗಲಿರುವ ಅಮೆರಿಕ ಓಪನ್‌ ಟೆನಿಸ್‌ ಟೂರ್ನಿಯಲ್ಲಿ ಅಂಗಳಕ್ಕಿಳಿಯಲು ಇಲ್ಲಿ ತೋರಿದ ಸಾಮರ್ಥ್ಯ ನೆರವಾಗಲಿದೆ’ ಎಂದು ಹೇಳಿದರು.

ಇದೇ ವೇಳೇ ಮಾತನಾಡಿದ ಗ್ರೀಸ್‌ನ ಆಟಗಾರ, ‘ಟೂರ್ನಿಯಲ್ಲಿ ತೋರಿದ ಸಾಮರ್ಥ್ಯ ತೃಪ್ತಿ ತಂದಿದೆ. ಆದರೆ, ಫೈನಲ್‌ನಲ್ಲಿ ನಡಾಲ್‌ ಅವರಂತಹ ಶ್ರೇಷ್ಠ ಆಟಗಾರನನ್ನು ಸಮರ್ಥವಾಗಿ ಎದುರಿಸುವಲ್ಲಿ ಎಡವಿದೆ. ಅವರನ್ನು ಎದುರಿಸುವುದು ಸುಲಭವಲ್ಲ. ಕೇವಲ ಆಕ್ರಮಣಕಾರಿ ಆಟದಿಂದ ಅವರನ್ನು ಕಟ್ಟಿಹಾಕಲು ಸಾಧ್ಯವಿಲ್ಲ’ ಎಂದರು. 

‘ಸಿನ್ಸಿನ್ನಾಟಿ ಮಾಸ್ಟರ್ಸ್‌ ಟೂರ್ನಿಯಲ್ಲಿ ಆಡುವುದಿಲ್ಲ’: ‘ಇದೇ ತಿಂಗಳ ಕೊನೆಯಲ್ಲಿ ಆರಂಭವಾಗಲಿರುವ ಅಮೆರಿಕ ಓಪನ್‌ ಟೂರ್ನಿಗೆ ಸಿದ್ಧಗೊಳ್ಳಬೇಕಿದೆ. ಹಾಗಾಗಿ, ಮುಂದಿನ ವಾರದಿಂದ ಆರಂಭವಾಗಲಿರುವ ಸಿನ್ಸಿನ್ನಾಟಿ ಮಾಸ್ಟರ್ಸ್‌ ಟೂರ್ನಿಯಲ್ಲಿ ಆಡುವುದಿಲ್ಲ’ ಎಂದು ರಫೆಲ್‌ ನಡಾಲ್ ಹೇಳಿದರು. 

‘ನನ್ನ ಫಿಟ್‌ನೆಸ್‌ ಬಗ್ಗೆ ಹೆಚ್ಚು ಒತ್ತು ನೀಡಬೇಕಿದೆ. ಅದಕ್ಕಾಗಿ ಕೆಲವು ದಿನಗಳ ವಿಶ್ರಾಂತಿ ಅಗತ್ಯ’ ಎಂದು ಅವರು ತಿಳಿಸಿದರು. 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !