ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂದುವರಿದ ನಡಾಲ್‌ ಪ್ರಾಬಲ್ಯ

ಫ್ರೆಂಚ್‌ ಓಪನ್‌ ಟೆನಿಸ್‌: ಹೋರಾಟದ ಪಂದ್ಯದಲ್ಲಿ ಸಿಸಿಪಸ್‌ಗೆ ಜಯದ ಮಾಲೆ
Last Updated 29 ಮೇ 2019, 19:46 IST
ಅಕ್ಷರ ಗಾತ್ರ

ಪ್ಯಾರಿಸ್‌: ಸ್ಪೇನ್‌ನ ರಫೆಲ್‌ ನಡಾಲ್‌ ಫ್ರೆಂಚ್‌ ಓಪನ್‌ನಲ್ಲಿ ತಮ್ಮ ಕನಸಿನ ಓಟವನ್ನು ಮುಂದುವರಿಸಿದ್ದಾರೆ. ಬುಧವಾರ ಟೂರ್ನಿಯ ಎರಡನೇ ಸುತ್ತಿನ ಪಂದ್ಯದಲ್ಲಿ ಜರ್ಮನಿಯ ಯಾನ್ನಿಕ್‌ ಮೇಡನ್‌ ಅವರನ್ನು 6–1, 6–2, 6–4 ಸೆಟ್‌ಗಳಿಂದ ಮಣಿಸಿದ ಅವರು ಮೂರನೇ ಸುತ್ತಿಗೆ ಪ್ರವೇಶಿಸಿದರು.

ಮೊದಲ ಎರಡು ಸುತ್ತುಗಳಲ್ಲಿ ಪೂರ್ಣ ಪಾರಮ್ಯ ಮೆರೆದ ದೈತ್ಯ ಆಟಗಾರ ನಡಾಲ್‌ , ಮೂರನೇ ಸುತ್ತಿನಲ್ಲಿ ಎದುರಾಳಿಯಿಂದ ಅಲ್ಪ ಪ್ರತಿರೋಧ ಎದುರಿಸಿದರು. ಗ್ರ್ಯಾನ್‌ಸ್ಲಾಮ್‌ ಟ್ರೋಫಿಯೊಂದನ್ನು 12ನೇ ಬಾರಿ ಗೆದ್ದ ಮೊದಲ ಆಟಗಾರ ಎನಿಸಿಕೊಳ್ಳುವ ಹಾದಿಯಲ್ಲಿರುವ ನಡಾಲ್‌ಗೆ ವಿಶ್ವ ಕ್ರಮಾಂಕದಲ್ಲಿ 114ನೇ ಸ್ಥಾನದಲ್ಲಿರುವ ಯಾನ್ನಿಕ್ ಸಾಟಿಯಾಗಲೇ ಇಲ್ಲ.

ನಡಾಲ್‌ ಮೂರನೇ ಸುತ್ತಿನ ಪಂದ್ಯದಲ್ಲಿ ಬೆಲ್ಜಿಯಂ ಆಟಗಾರ ಡೇವಿಡ್‌ ಗಫಿನ್‌ ಅವರನ್ನು ಎದುರಿಸಲಿದ್ದಾರೆ.

ಒಂದು ಸೆಟ್‌ ಸೋಲಿನ ಹಿನ್ನಡೆಯಿಂದ ಚೇತರಿಸಿಕೊಂಡ ಆರನೇ ಶ್ರೇಯಾಂಕದ ಸ್ಟೆಫನೋಸ್‌ ಸಿಸಿಪಸ್‌ ಟೂರ್ನಿಯಲ್ಲಿ ಮೂರನೇ ಸುತ್ತಿಗೆ ಲಗ್ಗೆಯಿಟ್ಟರು. ಬೊಲಿವಿಯಾದ ಹ್ಯುಗೊ ಡೆಲಿಯನ್‌ ವಿರುದ್ಧ ಅವರು 4–6, 6–0, 6–3, 7–5 ಸೆಟ್‌ಗಳಿಂದ ಜಯಭೇರಿ ಮೊಳಗಿಸಿದರು. ಮೊದಲ ಸೆಟ್‌ನಲ್ಲಿ ಭರ್ಜರಿಯಾಗಿ ತನ್ನ ವಶಕ್ಕೆ ಪಡೆದಿದ್ದ ಡೆಲಿಯನ್‌ ಅವರಿ ಅದೇ ಮಟ್ಟದ ಪ್ರದರ್ಶನ ಕಾಯ್ದುಕೊಳ್ಳುವಲ್ಲಿ ವಿಫಲರಾದರು.

ಎರಡನೇ ಶ್ರೇಯಾಂಕದ ಕರೋಲಿನಾ ಪ್ಲಿಸ್ಕೋವಾ ಅವರು ಸ್ಲೋವೆಕಿಯಾದ ಕ್ರಿಸ್ಟಿನಾ ಕ್ಯುಸೊವಾ ಅವರನ್ನು ನೇರ ಸೆಟ್‌ಗಳಿಂದ ಮಣಿಸಿ ಮೂರನೇ ಸುತ್ತು ಪ್ರವೇಶಿಸಿದರು.

ಇನ್ನೊಂದು ಪಂದ್ಯದಲ್ಲಿ ಸುಲಭ ಜಯ ಸಾಧಿಸಿದ ಸ್ಪೇನ್‌ನ ಗಾರ್ಬೈನ್‌ ಮುಗುರುಜಾ ಮೂರನೇ ಸುತ್ತಿಗೆ ಲಗ್ಗೆಯಿಟ್ಟರು. ಎರಡನೇ ಸುತ್ತಿನ ಪಂದ್ಯದಲ್ಲಿಅವರು ಸ್ವೀಡನ್‌ನ ಜೊಹಾನ್ನಾ ಲಾರ್ಸನ್‌ ವಿರುದ್ಧ 6–4, 6–1 ಸೆಟ್‌ಗಳಿಂದ ಗೆದ್ದರು. ಮುಂಗೈ ಹೊಡೆತಗಳ ಮೂಲಕ ಪ್ರೇಕ್ಷಕರನ್ನು ರಂಜಿಸಿದ ಮುಗುರುಜಾ ಅಧಿಕಾರಯುತ ಜಯ ಸಾಧಿಸಿದರು. ಅವರು ತಮ್ಮ ಮುಂದಿನ ಹಣಾಹಣಿಯಲ್ಲಿ ಒಂಬತ್ತನೇ ಶ್ರೇಯಾಂಕದ ಉಕ್ರೇನ್‌ನ ಎಲಿನಾ ಸ್ವಿಟೋಲಿನಾ ಎದುರು ಸ್ಪರ್ಧಿಸಲಿದ್ದಾರೆ.

ಇನ್ನೊಂದೆಡೆ ತಮ್ಮದೇ ದೇಶದ ಕಟೆರಿನಾ ಕೊಜ್ಲೊವಾ ವಿರುದ್ಧ ಎರಡನೇ ಸುತ್ತಿನಲ್ಲಿ ಆಡಬೇಕಿದ್ದ ಸ್ವಿಟೋಲಿನಾ, ಎದುರಾಳಿ ಆಟಗಾರ್ತಿ ಗಾಯದ ಕಾರಣ ಹಿಂದೆ ಸರಿದ ಹಿನ್ನೆಲೆಯಲ್ಲಿ ಮುಂದಿನ ಸುತ್ತಿಗೆ ಪ್ರವೇಶ ಪಡೆದರು.

ಪುರುಷರ ಸಿಂಗಲ್ಸ್‌ ಎರಡನೇ ಸುತ್ತಿನ ಪಂದ್ಯಗಳಲ್ಲಿ ಕೊರೆಂಟಿನ್‌ ಮೌಟೆಟ್‌ ಹಾಗೂ ಡೇವಿಡ್‌ ಗಫಿನ್‌ ಜಯಗಳಿಸಿ ಮುನ್ನಡೆದರು. ಮಹಿಳಾ ಸಿಂಗಲ್ಸ್‌ನಲ್ಲಿ ಸ್ಲೋವಾನೆ ಸ್ಟೆಫನ್ಸ್‌, ಎಲಿಸ್‌ ಮೆರ್ಟೆನ್ಸ್‌, ವೆರೊನಿಕಾ ಕುದರ್ಮತೊವಾ ಹಾಗೂ ಪೊಲೊನಾ ಹೆರ್ಕೊಗ್‌ ತಮ್ಮ ಪಂದ್ಯಗಳಲ್ಲಿ ಮೂರನೇ ಸುತ್ತಿಗೆ ಅವಕಾಶ ಪಡೆದರು.

ಎರಡನೇ ಸುತ್ತಿಗೆ ಭಾರತ–ಬ್ರೆಜಿಲ್‌ ಜೋಡಿ

ಭಾರತದ ದಿವಿಜ್‌ ಶರಣ್‌ ಹಾಗೂ ಬ್ರೆಜಿಲ್‌ನ ಡೆಮೊಲಿನರ್‌ ಜೋಡಿ ಬುಧವಾರ ಎರಡನೇ ಸುತ್ತಿಗೆ ಲಗ್ಗೆಯಿಟ್ಟಿತು. ಪುರುಷರ ಡಬಲ್ಸ್ ಪಂದ್ಯದಲ್ಲಿ ಹಂಗೇರಿಯ ಹಾಗೂ ಸ್ವೀಡನ್‌ ಜೋಡಿ ಮಾರ್ಟನ್‌ ಫಸೊವಿಕ್ಸ್‌ ಹಾಗೂ ರಾಬರ್ಟ್‌ ಲಿಂಡ್‌ಸೆಟ್‌ ವಿರುದ್ಧ ಜಯದ ನಗೆ ಬೀರಿತು.

ಒಂದು ತಾಸು 48 ನಿಮಿಷಗಳವರೆಗೆ ನಡೆದ ಹಣಾಹಣಿಯಲ್ಲಿ 6–3, 4–6, 6–2 ಸೆಟ್‌ಗಳ ಅಂತರದಿಂದ ಭಾರತ–ಬ್ರೆಜಿಲ್ ಜೋಡಿ ಜಯದ ತೋರಣ ಕಟ್ಟಿತು. ಮುಂದಿನ ಪಂದ್ಯದಲ್ಲಿ ಈ ಜೋಡಿಯು ಹೆನ್ರಿ ಕೊಂಟಿನೇನ್‌ ಹಾಗೂ ಜಾನ್‌ ಪಿಯರ್ಸ್‌ ಜೋಡಿಯನ್ನು ಎದುರಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT