ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎರಡನೇ ಸುತ್ತಿಗೆ ಚಾಂಪಿಯನ್‌ ನಡಾಲ್‌

ಫ್ರೆಂಚ್‌ ಓಪನ್‌ ಟೆನಿಸ್‌: ವೀನಸ್‌, ವೊಜ್ನಿಯಾಕಿ ಪರಾಭವ
Last Updated 27 ಮೇ 2019, 19:02 IST
ಅಕ್ಷರ ಗಾತ್ರ

ಪ್ಯಾರಿಸ್‌: ಫ್ರೆಂಚ್‌ ಓಪನ್‌ ಟೂರ್ನಿಯಲ್ಲಿ 12ನೇ ಪ್ರಶಸ್ತಿಯತ್ತ ಚಿತ್ತವಿರಿಸಿರುವ ರಫೆಲ್‌ ನಡಾಲ್‌ ಸೋಮವಾರ ಟೂರ್ನಿಯ ಎರಡನೇ ಸುತ್ತಿಗೆ ಲಗ್ಗೆಯಿಟ್ಟಿದ್ದಾರೆ. ಅರ್ಹತಾ ಸುತ್ತಿನಿಂದ ಗೆದ್ದು ಬಂದಜರ್ಮನಿಯ ಆಟಗಾರ ಯಾನ್ನಿಕ್‌ ಹಾಂಫ್‌ಮನ್‌ ವಿರುದ್ಧ ಅವರು 6–2, 6–1, 6–3 ಸೆಟ್‌ಗಳಿಂದ ಜಯದ ನಗೆ ಬೀರಿದರು.

ಮೊದಲ ಸೆಟ್‌ನ ಆರಂಭದಲ್ಲೇ 3–0 ಗೇಮ್‌ ಮುನ್ನಡೆ ಗಳಿಸಿದ ಸ್ವಿಟ್ಜರ್‌ಲೆಂಡ್‌ ತಾರೆ 40 ನಿಮಿಷಗಳಲ್ಲಿ ಸೆಟ್ ಕೈವಶ ಮಾಡಿಕೊಂಡರು. ಆ ಬಳಿಕ ಎರಡೂ ಸೆಟ್‌ಗಳನ್ನು ಸುಲಭವಾಗಿ ಗೆದ್ದರು. ತನ್ನ ನೆಚ್ಚಿನ ಮೈದಾನದಲ್ಲಿ ಎದುರಾಳಿ ಆಟಗಾರನಿಗೆ ಅವರು ಭುಜ ಅರಳಿಸಲು ಅವಕಾಶ ನೀಡಲಿಲ್ಲ.

ಎರಡನೇ ಸುತ್ತಿನ ಪಂದ್ಯದಲ್ಲಿ ನಡಾಲ್‌ ಅವರು ಇನ್ನೊಬ್ಬ ಅರ್ಹತಾ ಸುತ್ತಿನ ಆಟಗಾರ ಯಾನ್ನಿಕ್‌ ಮೇಡನ್‌ ಅವರಿಗೆ ಮುಖಾಮುಖಿಯಾಗಲಿದ್ದಾರೆ.

‘ಇಲ್ಲಿ ಆಡುವುದು ನನಗೆ ಯಾವಾಗಲೂ ಸಂತಸದ ಸಂಗತಿ, ನವೀಕೃತ ಚಾಟ್ರಿಯರ್‌ ಕ್ರೀಡಾಂಗಣ ಸುಂದರವಾಗಿದೆ’ ಎಂದು ಪಂದ್ಯದ ನಂತರ ಎರಡನೇ ಶ್ರೇಯಾಂಕದ ನಡಾಲ್‌ ಪ್ರತಿಕ್ರಿಯಿಸಿದರು.

ಏಳು ಬಾರಿಯ ಗ್ರ್ಯಾನ್‌ಸ್ಲಾಮ್‌ ವಿಜೇತೆ ಅಮೆರಿಕದ ವೀನಸ್‌ ವಿಲಿಯಮ್ಸ್‌ ಫ್ರೆಂಚ್‌ ಓಪನ್ ಟೂರ್ನಿಯಲ್ಲಿ ನಿರಾಸೆ ಅನುಭವಿಸಿದರು. ವಿಶ್ವ ಕ್ರಮಾಂಕದಲ್ಲಿ ಒಂಬತ್ತನೇ ಸ್ಥಾನದಲ್ಲಿರುವ ಎಲಿನಾ ಸ್ವಿಟೋಲಿನಾ ಎದುರು ರವಿವಾರ ರಾತ್ರಿ ನಡೆದ ಪ್ರಥಮ ಸುತ್ತಿನ ಪಂದ್ಯದಲ್ಲಿ ವೀನಸ್‌ ಅವರು 3–6, 3–6 ಸೆಟ್‌ಗಳಿಂದ ಮಣಿದರು.

ರೋಲ್ಯಾಂಡ್‌ ಗ್ಯಾರೋಸ್ ಟೂರ್ನಿಯಲ್ಲಿ ಉಕ್ರೇನ್‌ನ ಸ್ವಿಟೋಲಿನಾ ಎರಡು ಬಾರಿ ಕ್ವಾರ್ಟರ್‌ ಫೈನಲ್‌ ತಲುಪಿದ ಸಾಧನೆ ಮಾಡಿದ್ದಾರೆ. 1997ರಲ್ಲಿ ಮೊದಲ ಬಾರಿ ವೀನಸ್‌ ಅವರು ಈ ಟೂರ್ನಿಯಲ್ಲಿ ಆಡಿದವರು. ಎರಡನೇ ಸುತ್ತಿನ ಪಂದ್ಯದಲ್ಲಿ ಸ್ವಿಟೋಲಿನಾ ಅವರು ತಮ್ಮದೇ ದೇಶದ ಕಟೆರಿನಾ ಕೊಜ್ಲೊವಾ ಅವರ ಸವಾಲಿಗೆ ಸಜ್ಜಾಗಲಿದ್ದಾರೆ.

ಎರಡನೇ ಸುತ್ತಿಗೆ ಬೆರ್ಟೆನ್ಸ್‌: ಫ್ರಾನ್ಸ್‌ನ ಪೌಲಿನ್‌ ಪರ್ಮೆಂಟಿಯರ್ ಅವರನ್ನು 6–3, 6–4 ಸೆಟ್‌ಗಳಿಂದ ಮಣಿಸಿದ ಡಚ್‌ ಆಟಗಾರ್ತಿ ಕಿಕಿ ಬೆರ್ಟೆನ್ಸ್‌ ಅವರು ಟೂರ್ನಿಯ ಎರಡನೇ ಸುತ್ತಿನ ಪ್ರವೇಶ ಪಡೆದರು. ಈ ತಿಂಗಳ ಆರಂಭದಲ್ಲಿ ಮ್ಯಾಡ್ರಿಡ್‌ ಓಪನ್‌ ಜಯಿಸಿರುವ ಕಿಕಿ ಅವರು ಫ್ರೆಂಚ್‌ ಓಪನ್‌ನ ಎರಡನೇ ಸುತ್ತಿನಲ್ಲಿ ವಿಕ್ಟೊರಿಯಾ ಕುಜ್ಮೊವಾ ಅವರನ್ನು ಎದುರಿಸಲಿರುವರು.

ವಿಶ್ವದ ಕ್ರಮಾಂಕದಲ್ಲಿ ಈ ಮೊದಲು ಪ್ರಥಮ ಸ್ಥಾನದಲ್ಲಿದ್ದ ಕರೋಲಿನ್‌ ವೊಜ್ನಿಯಾಕಿ ಅವರು ಮೊದಲ ಸುತ್ತಿನಲ್ಲೇ ಆಘಾತ ಅನುಭವಿಸಿದರು. ರಷ್ಯಾದ ವೆರೊನಿಕಾ ಕುದರ್ಮೆತೊವಾ ವಿರುದ್ಧ ಅವರು ಸೋಮವಾರ 6–0, 3–6, 3–6 ಸೆಟ್‌ಗಳಿಂದ ಸೋತರು. ವೊಜ್ನಿಯಾಕಿ ಪಂದ್ಯದಲ್ಲಿ 10 ಅನಗತ್ಯ ತಪ್ಪುಗಳನ್ನು ಎಸಗಿದರು.

ರಷ್ಯಾದ 12ನೇ ಶ್ರೇಯಾಂಕಿತ ಆಟಗಾರ ಡ್ಯಾನಿಲ್‌ ಮಿಡ್ವಡೆವ್‌ ಅವರು ಫ್ರೆಂಚ್‌ ಆಟಗಾರ ಪಿಯರೆ ಹಗೀಸ್‌ ಹರ್ಬರ್ಟ್ ಎದುರು ಆಘಾತಕಾರಿ ಸೋಲು ಅನುಭವಿಸಿದರು.ಪುರುಷರ ಸಿಂಗಲ್ಸ್‌ ಪ್ರಥಮ ಸುತ್ತಿನ ಇತರ ಪಂದ್ಯಗಳಲ್ಲಿ ಅಲೆಕ್ಸ್‌ ಡಿ ಮಿನಾವರ್‌ ಅವರು ಬ್ರಾಡ್ಲಿ ಕ್ಲಾನ್‌ ವಿರುದ್ಧ, ಪ್ಯಾಬ್ಲೊ ಕ್ಯಾರೆನೊ ಬಸ್ಟಾ ಅವರು ಜೋವಾ ಸೌಸಾ ಎದುರು ಹಾಗೂ ಜುವಾನ್‌ ಇಗ್ನೆಶಿಯೊ ಅವರು ನಿಕೋಲಾಜ್‌ ಬಾಸಿಲ್‌ಶ್ವಿಲಿ ವಿರುದ್ಧ ಜಯದ ನಗೆ ಬೀರಿದರು.

ಮಹಿಳಾ ಸಿಂಗಲ್ಸ್‌ನ ಪ್ರಥಮ ಸುತ್ತಿನ ಪಂದ್ಯಗಳಲ್ಲಿ ಆಸ್ಟ್ರೇಲಿಯಾ ಆ್ಯಶ್ಲೆ ಬಾರ್ಟಿ ಅವರು ಜೆಸ್ಸಿಕಾ ಪೆಗುಲಾ ಎದುರು, ಜೊಹಾನ್ನಾ ಕೊಂಟಾ ಅವರು ಅಂಟೋನಿಯಾ ಲಾಟ್ನರ್‌ ವಿರುದ್ಧ, ಡಿಯಾನೆ ಪ್ಯಾರಿ ಅವರು ವೆರಾ ಲಾಪ್ಕೊ ಎದುರು ಗೆದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT