ಗುರುವಾರ , ಸೆಪ್ಟೆಂಬರ್ 19, 2019
21 °C
ಅಮೆರಿಕ ಓಪನ್‌ ಟೆನಿಸ್‌ ಟೂರ್ನಿ: ದಿಟ್ಟ ಆಟವಾಡಿ ಸೋತ ಡಿಗೊ

ನಾಲ್ಕನೇ ಪ್ರಶಸ್ತಿಯತ್ತ ನಡಾಲ್‌ ದಾಪುಗಾಲು

Published:
Updated:
Prajavani

ನ್ಯೂಯಾರ್ಕ್‌: ಸ್ಪೇನ್‌ನ ದಿಗ್ಗಜ ಆಟಗಾರ ರಫೆಲ್‌ ನಡಾಲ್‌ ಅಮೆರಿಕ ಓಪನ್‌ ಟೆನಿಸ್‌ ಟೂರ್ನಿಯ ಸೆಮಿಫೈನಲ್‌ ತಲುಪಿದ್ದಾರೆ. ಬುಧವಾರ ರಾತ್ರಿ ನಡೆದ ಕ್ವಾರ್ಟರ್‌ಫೈನಲ್‌ ಹಣಾಹಣಿಯಲ್ಲಿ 6–4, 7–5, 6–2 ಸೆಟ್‌ಗಳಿಂದ ಅವರು ಡಿಗೊ ಸ್ವಾರ್ಟ್ಜಮನ್‌ ಅವರನ್ನು ಮಣಿಸಿದರು. ಆದರೆ ಅರ್ಜೆಂಟೀನಾ ಆಟಗಾರ ಡಿಗೊ ನೀಡಿದ ಹೋರಾಟ ಮೆಚ್ಚುಗೆ ಗಳಿಸಿತು.

ದಂತಕತೆ ರೋಜರ್‌ ಫೆಡರರ್‌ ಹಾಗೂ 2018ರ ಚಾಂಪಿಯನ್‌ ನೊವಾಕ್‌ ಜೊಕೊವಿಚ್‌ ಅವರು ಈಗಾಗಲೇ ಟೂರ್ನಿಯಿಂದ ನಿರ್ಗಮಿಸಿದ್ದಾರೆ. ಹೀಗಾಗಿ ನಡಾಲ್‌  ಅವರಿಗೆ ಇಲ್ಲಿ ನಾಲ್ಕನೇ ಬಾರಿ ಪ್ರಶಸ್ತಿ ಗೆಲ್ಲುವ ಅವಕಾಶ ಹೆಚ್ಚಿದೆ. ಈ ಹಿಂದೆ ಸ್ವಾರ್ಟ್ಜಮನ್‌ ವಿರುದ್ಧ ಆಡಿದ ಏಳೂ ಪಂದ್ಯಗಳಲ್ಲೂ ನಡಾಲ್‌ ಜಯ ಕಂಡಿದ್ದರು. ಆದರೆ 18 ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿ ವಿಜೇತ ನಡಾಲ್‌, ಇಲ್ಲಿ ಪ್ರತಿ ಪಾಯಿಂಟ್‌ ಗಳಿಸಲು ಬೆವರು ಹರಿಸಬೇಕಾಯಿತು.

ಮೊದಲ ಸೆಟ್‌ನ ಆರಂಭದಲ್ಲಿ ನಡಾಲ್‌ 4–0 ಮುನ್ನಡೆ ಪಡೆದಿದ್ದರು. ಆದರೆ ತಿರುಗೇಟು ನೀಡಿದ ಎದುರಾಳಿ ಆಟಗಾರ, ನಾಲ್ಕು ಪಾಯಿಂಟ್‌ ಗಳಿಸಿ ಸೆಟ್‌ ಸಮಬಲಗೊಳಿಸಿದರು. ಸರ್ವ್‌ ಮುರಿದ ನಡಾಲ್‌  ಬಳಿಕ ಒಂದು ಪಾಯಿಂಟ್‌ ಗಳಿಸಿ ಸೆಟ್‌ ಗೆದ್ದುಕೊಂಡರು. ಎರಡನೇ ಸೆಟ್‌ನಲ್ಲೂ ಸ್ಪೇನ್‌ ಆಟಗಾರ ಮೊದಲಿಗೆ 5–1ರ ಭಾರೀ ಮುನ್ನಡೆ ಸಾಧಿಸಿದ್ದರು. ಸುಲಭವಾಗಿ ಶರಣಾಗದ ಸ್ವಾರ್ಟ್ಜಮನ್‌ ಸತತ ನಾಲ್ಕು ಪಾಯಿಂಟ್‌ ದಾಖಲಿಸಿದರು. ಆದರೆ ನಡಾಲ್‌ ಮತ್ತೆರಡು ಪಾಯಿಂಟ್‌ ಗಳಿಸಿ ಸೆಟ್‌ ವಶಪಡಿಸಿಕೊಂಡರು. ಮೂರನೇ ಸೆಟ್‌ನಲ್ಲಿ 20ನೇ ಶ್ರೇಯಾಂಕದ ಸ್ವಾರ್ಟ್ಜಮನ್‌ ಅಷ್ಟೊಂದು ಪೈಪೋಟಿ ನೀಡಲಿಲ್ಲ.

ಪುರುಷರ ಸಿಂಗಲ್ಸ್ ಮತ್ತೊಂದು ಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ ಇಟಲಿಯ ಮಟ್ಟೆಯೊ ಬೆರೆಟ್ಟಿನಿ 3–6, 6–3, 6–2, 3–6, 7–6ರಿಂದ ಫ್ರಾನ್ಸ್‌ನ ಗೇಲ್‌ ಮೊನ್‌ಫಿಲ್ಸ್ ವಿರುದ್ಧ ಜಯ ಸಾಧಿಸಿದರು. 52 ವರ್ಷಗಳ ಬಳಿಕ ಅಮೆರಿಕ ಓಪನ್‌ ಸೆಮಿಫೈನಲ್‌ ತಲುಪಿದ ಇಟಲಿಯ ಮೊದಲ ಆಟಗಾರ ಎನಿಸಿಕೊಂಡರು. 1977ರಲ್ಲಿ ಕೊರ‍್ಯಾಡೊ ಬ್ಯಾರಜ್ಜುಟ್ಟಿ ನಾಲ್ಕರ ಘಟ್ಟ ಪ್ರವೇಶಿಸಿದ್ದರು. ಸೆಮಿಫೈನಲ್‌ನಲ್ಲಿ ಬೆರೆಟ್ಟಿನಿ–ನಡಾಲ್‌ ನಡುವೆ ಪೈಪೋಟಿ ನಡೆಯಲಿದೆ.

ಸೆಮಿಗೆ ಆ್ಯಂಡ್ರಿಸ್ಕ್ಯೂ: ಕೆನಡಾ ಆಟಗಾರ್ತಿ ಬಿಯಾಂಕಾ ಆ್ಯಂಡ್ರಿಸ್ಕ್ಯೂ, ಮಹಿಳಾ ಸಿಂಗಲ್ಸ್ ನಾಲ್ಕರ ಘಟ್ಟಕ್ಕೆ ಲಗ್ಗೆಯಿಟ್ಟರು. ಕ್ವಾರ್ಟರ್‌ಫೈನಲ್‌ ಹಣಾಹಣಿಯಲ್ಲಿ ಅವರು ಬೆಲ್ಜಿಯಂನ ಎಲಿಸ್‌ ಮೆರ್ಟೆನ್ಸ್ ಎದುರು 3–6, 6–2, 6–3ರಿಂದ ಗೆದ್ದರು.

ಮತ್ತೊಂದು ಪಂದ್ಯದಲ್ಲಿ ಸ್ವಿಸ್‌ ಆಟಗಾರ್ತಿ ಬೆಲಿಂಡಾ ಬೆನ್ಸಿಸ್‌ ಕ್ರೊವೇಷ್ಯಾದ ಡೊನ್ನಾ ವೆಕಿಕ್‌ ಅವರನ್ನು 7–6, 6–3ರಿಂದ ಸೋಲಿಸಿ ಸೆಮಿಫೈನಲ್‌ ತಲುಪಿದರು.

ಡಬಲ್ಸ್‌ನಲ್ಲಿ ಜಾಮಿ ಮಿಂಚು

ಬ್ರಿಟನ್‌ ಜಾಮಿ ಮರ್ರೆ ಪುರುಷರ ಡಬಲ್ಸ್‌ ವಿಭಾಗದಲ್ಲಿ ನೀಲ್‌ ಸ್ಕಪ್‌ಸ್ಕಿ ಜೊತೆಯಾಗಿ ಸೆಮಿಫೈನಲ್‌ಗೆ ಜಾಲಿಟ್ಟರು. ಎಂಟರ ಘಟ್ಟದ ಪಂದ್ಯದಲ್ಲಿ ಅವರು ಅಮೆರಿಕದ ಜಾಕ್‌ ಸಾಕ್‌ –ಜಾಕ್ಸನ್‌ ವಿಥ್ರೊ ಜೋಡಿಯನ್ನು 4–6, 6–1, 7–6ರಿಂದ ಸೋಲಿಸಿದರು. ಮಿಶ್ರ ಡಬಲ್ಸ್‌ನಲ್ಲಿ ಮರ್ರೆ ಹಾಗೂ ಅಮೆರಿಕದ ಬೆಥನಿ ಮಟ್ಟಕ್‌ ಜೋಡಿಯು ಸಮಂತಾ ಸ್ಟೋಸರ್‌– ರಾಜೀವ್‌ ರಾಮ್‌ ಅವರನ್ನು 6–3, 6–1ರಿಂದ ಸೋಲಿಸಿ ಫೈನಲ್‌ಗೆ ಕಾಲಿಟ್ಟರು.

Post Comments (+)