ಬುಧವಾರ, ನವೆಂಬರ್ 20, 2019
°C
ವೀರೋಚಿತ ಹೋರಾಟ ಪ್ರದರ್ಶಿಸಿದ ಮೆಡ್ವೆಡೆವ್‌

ಅಮೆರಿಕ ಓಪನ್‌: ನಡಾಲ್‌ಗೆ ನಾಲ್ಕನೇ ಕಿರೀಟ

Published:
Updated:

ನ್ಯೂಯಾರ್ಕ್‌: ಡೇನಿಯಲ್‌ ಮೆಡ್ವೆಡೆವ್ ಅವರ ವೀರೋಚಿತ ಹೋರಾಟವನ್ನು ಭಾನುವಾರ  ಬದಿಗೊತ್ತಿದ ಅನುಭವಿ ರಫೆಲ್‌ ನಡಾಲ್‌ ನಾಲ್ಕನೇ ಬಾರಿ ಅಮೆರಿಕ ಓಪನ್‌ ಟೆನಿಸ್‌ ಪ್ರಶಸ್ತಿ ಗೆದ್ದುಕೊಂಡರು. ಅತಿ ಹೆಚ್ಚು ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿಗಳನ್ನು ಗೆದ್ದುಕೊಂಡ ರೋಜರ್‌ ಫೆಡರರ್‌ ಅವರ ದಾಖಲೆ ಸರಿಗಟ್ಟಲು ‘ರಫಾ’ಗೆ ಇನ್ನು ಒಂದು ಪ್ರಶಸ್ತಿಯಷ್ಟೇ ಅಗತ್ಯವಿದೆ.

‌ಸ್ಪೇನ್‌ ಅಜಾನುಬಾಹು ನಡಾಲ್‌, ಫ್ಲಷಿಂಗ್‌ ಮೆಡೊದಲ್ಲಿ ನಡೆದ ಪುರುಷರ ಸಿಂಗಲ್ಸ್‌ ಫೈನಲ್‌ನಲ್ಲಿ 7–5, 6–3, 5–7, 4–6, 6–4 ರಿಂದ ರಷ್ಯದ ಮೆಡ್ವೆಡೆವ್ ಅವರನ್ನು ಸೋಲಿಸಿದರು. ಕ್ಲೇ ಕೋರ್ಟ್‌ ಕಿಂಗ್‌ ಎನಿಸಿರುವ ನಡಾಲ್‌ಗೆ ಇದು 19ನೇ ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿ. 

33 ವರ್ಷದ ನಡಾಲ್‌ ಮೊದಲ ಎರಡು ಸೆಟ್‌ ಗೆದ್ದು, ಮೂರನೇ ಸೆಟ್‌ನಲ್ಲಿ ಬ್ರೇಕ್‌ ಗೇಮ್‌ ಪಡೆದಾಗ ಫೈನಲ್‌ ನೇರ ಸೆಟ್‌ಗಳಲ್ಲಿ ಮುಗಿಯುವುದೆಂಬ ಭಾವನೆ ಮೂಡಿತ್ತು. ಆದರೆ 23 ವರ್ಷ ವಯಸ್ಸಿನ ರಷ್ಯದ ಆಟಗಾರ ಪ್ರತಿಹೋರಾಟ ತೋರಿದ್ದರಿಂದ ಪಂದ್ಯ ರೋಚಕಗೊಂಡು ನಾಲ್ಕು ಗಂಟೆ 50 ನಿಮಿಷಗಳಿಗೆ ಬೆಳೆಯಿತು. 

‘ಪಂದ್ಯದ ಮೇಲೆ ಹೆಚ್ಚು ಕಮ್ಮಿ ನಾನು ನಿಯಂತ್ರಣ ಸಾಧಿಸಿದ್ದೆ’ ಎಂದು ಹೇಳಿದ ನಡಾಲ್‌ ‘ಅವರು (ಮೆಡ್ವೆಡೆವ್‌)  ಹೋರಾಟ ತೋರಿ ಪಂದ್ಯದ ಲಯ ಬದಲಿಸುವಲ್ಲಿ ಯಶಸ್ವಿಯಾಗಿದ್ದು ವಿಸ್ಮಯಕಾರಿಯಾಗಿತ್ತು’ ಎಂದರು. 

ಎರಡು ಸೆಟ್‌ ಸೋತ ನಂತರ ಚೇತರಿಸಿಕೊಂಡು ಪಂದ್ಯ ಗೆದ್ದಿರುವ ಸಂದರ್ಭ 1949ರ ನಂತರ ಘಟಿಸಿರಲಿಲ್ಲ. ನೀಳಕಾಯದ ಮೆಡ್ವೆಡೆವ್‌ ಹೆಚ್ಚುಕಮ್ಮಿ ಆ ಹಾದಿಯಲ್ಲಿ ಸಾಗಿದಂತೆ ಕಂಡಿತ್ತು. ವಾರದ ಆರಂಭದಲ್ಲಿ ಅವರ ವಿರುದ್ಧ ಕೂಗು ಹಾಕುತ್ತಿದ್ದ ಪ್ರೇಕ್ಷಕರು ಈ ಬಾರಿ ಹರ್ಷೋದ್ಗಾರ ಮಾಡುತ್ತಿದ್ದುದು ಕೇಳಿಬಂತು. 

ಸತತ ನಾಲ್ಕು ಟೂರ್ನಿಗಳ ಫೈನಲ್‌ ತಲುಪಿ, ನಂತರ ಮೊದಲ ಗ್ರ್ಯಾನ್‌ಸ್ಲಾಮ್‌ ಟೂರ್ನಿಯ ಫೈನಲ್‌ ತಲುಪಿದ್ದ  ಮೆಡ್ವೆಡೆವ್‌ ಪ್ರಬಲ ಆಟಗಾರನಾಗಿಯೇ ಕಾಣಿಸಿಕೊಂಡಿದ್ದರು. ಆದರೆ ಹಳೆಹುಲಿಯ ಎದುರು ಮೊದಲ ದೊಡ್ಡ ಪ್ರಶಸ್ತಿ ಗೆಲ್ಲಲು ಸಾಧ್ಯವಾಗಲಿಲ್ಲ. 

ಕಳೆದ ಜೂನ್‌ನಲ್ಲಿ 12ನೇ ಸಲ ಫ್ರೆಂಚ್‌ ಓಪನ್‌ ಪ್ರಶಸ್ತಿ ಗೆದ್ದುಕೊಂಡಿದ್ದ ನಡಾಲ್‌, ನಾಲ್ಕು ಅಮೆರಿಕ ಓಪನ್‌ ಪ್ರಶಸ್ತಿಗಳ ಜೊತೆ ಎರಡು ಬಾರಿ ವಿಂಬಲ್ಡನ್‌, ಒಮ್ಮೆ ಆಸ್ಟ್ರೇಲಿಯನ್‌ ಓಪನ್‌ ಗೆದ್ದುಕೊಂಡಿದ್ದಾರೆ.

ನಡಾಲ್‌ ಈ ಬಾರಿ ಫೈನಲ್‌ ತಲುಪುವ ಹಾದಿಯಲ್ಲಿ ಮೂರು ಸೆಟ್‌ಗಳನ್ನು ಮಾತ್ರ ಕಳೆದುಕೊಂಡಿದ್ದರು. ಈ ಟೂರ್ನಿ ವೃತ್ತಿಪರವಾದ ನಂತರ, ನಡಾಲ್‌ ಈ ಪ್ರಶಸ್ತಿ ಗೆದ್ದ ಎರಡನೇ ಅತಿ ಹಿರಿಯ ಆಟಗಾರ ಎನಿಸಿದರು. ಈ ಹಿಂದೆ– 1970ರಲ್ಲಿ ಆಸ್ಟ್ರೇಲಿಯಾದ ಕೆನ್‌ ರೋಸ್‌ವಾಲ್‌, 35ನೇ ವಯಸ್ಸಿನಲ್ಲಿ ಪ್ರಶಸ್ತಿ ಗೆದ್ದುಕೊಂಡಿದ್ದರು.

ಮಹಿಳೆಯರ ವಿಭಾಗದಲ್ಲಿ ಈ ವರ್ಷದ ನಾಲ್ಕು ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿಗಳನ್ನು ಬೇರೆ ಬೇರೆ ಆಟಗಾರ್ತಿಯರು ಗೆದ್ದುಕೊಂಡರೆ, ಪುರುಷರ ವಿಭಾಗದಲ್ಲಿ ‘ಬಿಗ್‌ ತ್ರಿ’ (ನಡಾಲ್‌, ಜೊಕೊವಿಚ್‌, ಫೆಡರರ್‌) ಪ್ರಾಬಲ್ಯ ಮುಂದುವರಿದಂತಾಯಿತು. ಕಳೆದ 12 ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿಗಳನ್ನು ಈ ಮೂವರು ಹಂಚಿಕೊಂಡಿದ್ದಾರೆ.

ಬಾವೋದ್ವೇಗಕ್ಕೆ ಒಳಗಾದ ಸ್ಪೇನ್‌ ತಾರೆ

ದೀರ್ಘ ಸೆಣಸಾಟದ ನಂತರ ಭಾವೊದ್ವೇಗಕ್ಕೆ ಒಳಗಾದ ನಡಾಲ್‌ ಮುಖವನ್ನು ಕೈಗಳಲ್ಲಿ ಮುಚ್ಚಿಕೊಂಡರು. ಆರ್ಥರ್‌ ಆ್ಯಷ್‌ ಕ್ರೀಡಾಂಗಣದ ಬೃಹತ್‌ ಪರದೆಯ ಮೇಲೆ ತಮ್ಮ ಸಾಧನೆಯ ವಿಡಿಯೊ ತೋರಿಸುತ್ತಿದ್ದಂತೆ ದಣಿವಿನ ಜೊತೆ ಅವರ ಮುಖದಲ್ಲಿ ಭಾವೊದ್ವೇಗ, ನಿರಾಳ ಭಾವ ಗೋಚರಿಸಿತು.

‘ಇದು 18 ವರ್ಷಗಳ ನನ್ನ ಬದುಕಿನ ಅತ್ಯಂತ ಭಾವನಾತ್ಮಕ ಇರುಳು’ ಎಂದು ನಡಾಲ್‌, ಪ್ರೇಕ್ಷಕರ ಹರ್ಷೋದ್ಗಾರಗಳಿಗೆ ಪ್ರತಿಕ್ರಿಯಿಸಿದರು. ಹಣಾಹಣಿಯ ಅಂತಿಮ ಸೆಟ್‌ನಲ್ಲಿ ಪ್ರೇಕ್ಷಕರು ಹಲವು ಬಾರಿ ನಡಾಲ್‌ ಹೆಸರು ಕೂಗಿದರು. ‘ಈ ಕ್ರೀಡಾಂಗಣಕ್ಕಿಂತ ಅತ್ಯಂತ ಪ್ರೇರಣಾದಾಯಕ ಕ್ರೀಡಾಂಗಣ ವಿಶ್ವದಲ್ಲಿ ಬೇರೆಲ್ಲೂ ಇಲ್ಲ’ ಎಂದರು.

ಗ್ರ್ಯಾಂಡ್‌ಸ್ಲಾಮ್‌ ಟೂರ್ನಿಗಳಲ್ಲಿ 200ಕ್ಕೂ ಹೆಚ್ಚಿನ ಪಂದ್ಯಗಳಲ್ಲಿ ಮೊದಲ ಎರಡು ಸೆಟ್‌ ಗೆದ್ದ ನಂತರ ಒಂದು ಸಂದರ್ಭದಲ್ಲಿ ಮಾತ್ರ ನಡಾಲ್‌ ಪಂದ್ಯ ಸೋತಿದ್ದಾರೆ. ಅದು 2015ರ ಅಮೆರಿಕ ಓಪನ್‌ ಟೂರ್ನಿಯ ಮೂರನೇ ಸುತ್ತಿನಲ್ಲಿ (ಫ್ಯಾಬಿಯೊ ಫೊಗ್ನಿನಿ ವಿರುದ್ಧ) ಆಗಿತ್ತು. ಭಾನುವಾರ ಅದು ಸ್ವಲ್ಪದರಲ್ಲೇ ತಪ್ಪಿತು.

ಪ್ರತಿಕ್ರಿಯಿಸಿ (+)