ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕ ಓಪನ್‌ ಟೆನಿಸ್‌ ಟೂರ್ನಿ: ಎರಡನೇ ಸುತ್ತಿಗೆ ಲಗ್ಗೆಯಿಟ್ಟ ನಗಾಲ್‌

ಬ್ರಾಡ್ಲಿ ಕ್ಲಾನ್‌ ವಿರುದ್ಧ ಜಯ
Last Updated 2 ಸೆಪ್ಟೆಂಬರ್ 2020, 7:08 IST
ಅಕ್ಷರ ಗಾತ್ರ

ನ್ಯೂಯಾರ್ಕ್‌: ಭಾರತದ ಸುಮಿತ್ ನಗಾಲ್‌ ಅವರು ಅಮೆರಿಕ ಓಪನ್‌ ಟೆನಿಸ್‌ ಟೂರ್ನಿಯಲ್ಲಿ ಮತ್ತೊಮ್ಮೆ ಮಿಂಚಿದ್ದಾರೆ. ಏಳು ವರ್ಷಗಳ ಬಳಿಕ ಗ್ರ್ಯಾಂಡ್‌ಸ್ಲಾಮ್‌ ಒಂದರಲ್ಲಿ ಎರಡನೇ ಸುತ್ತಿಗೆ ಲಗ್ಗೆಯಿಟ್ಟ ಭಾರತದ ಆಟಗಾರ ಎನಿಸಿಕೊಂಡಿದ್ದಾರೆ. ಮಂಗಳವಾರ ರಾತ್ರಿ ನಡೆದ ಸಿಂಗಲ್ಸ್‌ ವಿಭಾಗದ ಮೊದಲ ಸುತ್ತಿನ ಪಂದ್ಯದಲ್ಲಿ ಅವರು 6–1, 6–3, 3–6, 6–1ರಿಂದ ಅಮೆರಿಕದ ಬ್ರಾಡ್ಲಿ ಕ್ಲಾನ್‌ ಅವರನ್ನು ಮಣಿಸಿದರು.

ಎರಡನೇ ಸುತ್ತಿನ ಹಣಾಹಣಿಯಲ್ಲಿ ಸುಮಿತ್ ಅವರು ವಿಶ್ವದ ಮೂರನೇ ಕ್ರಮಾಂಕದ ಆಟಗಾರ ಡೊಮಿನಿಕ್‌ ಥೀಮ್‌ ಅವರನ್ನು ಎದುರಿಸಲಿದ್ದಾರೆ.

ಸುಮಿತ್‌ ಅವರು ಹೋದ ವರ್ಷದ ಅಮೆರಿಕ ಓಪನ್‌ ಟೂರ್ನಿಯಲ್ಲಿ ದಿಗ್ಗಜ ರೋಜರ್‌ ಫೆಡರರ್ ಅವರ ಎದುರು ಆಡಿದ್ದರು. ಒಂದು ಸೆಟ್‌ ಕೂಡ ಗೆದ್ದುಕೊಂಡು ಗಮನಸೆಳೆದಿದ್ದರು.

ವಿಶ್ವ ಕ್ರಮಾಂಕದಲ್ಲಿ 126 ಸ್ಥಾನದಲ್ಲಿರುವ ಸುಮಿತ್‌ ಅವರಿಗೆ ಬ್ರಾಡ್ಲಿ ಎದುರು ಗೆಲ್ಲಲು ಎರಡು ತಾಸು 12 ನಿಮಿಷ ಸಮಯ ಹಿಡಿಯಿತು.

ಭಾರತದ ಸೋಮದೇವ್‌ ದೇವವರ್ಮನ್‌ ಕೂಡ 2013ರ ಅಮೆರಿಕ ಓಪನ್‌ ಟೂರ್ನಿಯಲ್ಲೇ ಎರಡನೇ ಸುತ್ತು ಪ್ರವೇಶಿಸಿದ್ದರು.

ಸೋಮದೇವ್‌ ಅವರು 2017ರಲ್ಲಿ ಟೆನಿಸ್‌ಗೆ ವಿದಾಯ ಹೇಳಿದ್ದರು. ಅದಕ್ಕಿಂತ ಮೊದಲು ಅವರು ಆಸ್ಟ್ರೇಲಿಯಾ ಓಪನ್‌, ಫ್ರೆಂಚ್‌ ಓಪನ್‌ ಹಾಗೂ ವಿಂಬಲ್ಡನ್‌ ಟೂರ್ನಿಗಳಲ್ಲೂ ಎರಡನೇ ಸುತ್ತಿನ ಪಂದ್ಯ ಆಡಿದ ಸಾಧನೆ ಮಾಡಿದ್ದರು.

ಸೋಮದೇವ್‌ ನಿವೃತ್ತಿ ಬಳಿಕ ಭಾರತದ ಟೆನಿಸ್‌ನಲ್ಲಿ ಯೂಕಿ ಭಾಂಬ್ರಿ, ರಾಮಕುಮಾರ್‌ ರಾಮನಾಥನ್‌ ಹಾಗೂ ಪ್ರಜ್ಞೇಶ್‌ ಗುಣೇಶ್ವರನ್‌ ಅವರಂತಹ ಯುವ ಆಟಗಾರರೂ ಕಾಣಿಸಿಕೊಂಡರೂ ಅವರಾರಿಗೂ ಟೂರ್ನಿಯೊಂದರ ಪ್ರಧಾನ ಸುತ್ತಿನ ಪಂದ್ಯದಲ್ಲಿ ಗೆಲ್ಲಲು ಸಾಧ್ಯವಾಗಿಲ್ಲ.

ಜೊಕೊವಿಚ್‌, ಮೆಡ್ವಡೆವ್, ಸೆರೆನಾ ಮುನ್ನಡೆ: ಮೊದಲ ಸುತ್ತಿನ ಪಂದ್ಯದಲ್ಲಿ ಡೇನಿಯಲ್ ಮೆಡ್ವೆಡೆವ್‌ ಅವರು 6–1, 6–2, 6–4ರಿಂದ ಫೆಡರಿಕೊ ಡೆಲ್ಬೊನಿಸ್‌ ಅವರನ್ನು ಮಣಿಸಿದರು. ಮಹಿಳಾ ಸಿಂಗಲ್ಸ್‌ ಹಣಾಹಣಿಯಲ್ಲಿ ಅಮೆರಿಕದ ಸೆರೆನಾ ವಿಲಿಯಮ್ಸ್ ಅವರು 7–5, 6–3ರಿಂದ ಕ್ರಿಸ್ಟಿ ಆನ್‌ ಅವರನ್ನು ಪರಾಭವಗೊಳಿಸಿದರು.

ವಿಶ್ವದ ಅಗ್ರ ಕ್ರಮಾಂಕದ ಆಟಗಾರ ನೊವಾಕ್‌ ಜೊಕೊವಿಚ್‌ ಅವರು ಸೋಮವಾರ ರಾತ್ರಿ ನಡೆದ ಪಂದ್ಯದಲ್ಲಿ 6–1, 6–4, 6–1ರಿಂದ ಡ್ಯಾಮಿರ್‌ ಡಿಜುಮರ್‌ ಎದುರು ಗೆದ್ದು ಎರಡನೇ ಸುತ್ತಿಗೆ ಲಗ್ಗೆಯಿಟ್ಟಿದ್ದಾರೆ.

ಕಿಮ್‌ ಕ್ಲಿಜ್‌ಸ್ಟರ್ಸ್‌, ವೀನಸ್‌ಗೆಸೋಲು: ಎಂಟು ವರ್ಷಗಳ ಬಳಿಕ ಗ್ರ್ಯಾನ್‌ಸ್ಲಾಮ್‌ ಪಂದ್ಯವೊಂದರಲ್ಲಿ ಆಡಿದ ಬೆಲ್ಜಿಯಂ ಆಟಗಾರ್ತಿ ಕಿಮ್‌ ಕ್ಲಿಜ್‌ಸ್ಟರ್ಸ್ ಅವರು ಮೊದಲ ಸುತ್ತಿನ ಪಂದ್ಯದಲ್ಲಿ 3–6, 7–5, 6–1ರಿಂದ ಏಕಟೆರಿನಾ ಅಲೆಕ್ಸಾಂಡ್ರೊವಾ ವಿರುದ್ಧ ಸೋತರು.

ಕ್ಲಿಜ್‌ಸ್ಟರ್ಸ್‌ ಅವರು 2005, 2009 ಹಾಗೂ 2010ರಲ್ಲಿ ಇಲ್ಲಿ ಚಾಂಪಿಯನ್‌ ಆಗಿದ್ದರು. 2012ರ ಅಮೆರಿಕ ಓಪನ್‌ ಟೂರ್ನಿಯ ಬಳಿಕ ನಿವೃತ್ತಿ ಘೋಷಿಸಿದ್ದರು. ಮತ್ತೆ ಆಟಕ್ಕೆ ಮರಳಿದ್ದರು. 37 ವರ್ಷದಕ್ಲಿಜ್‌ಸ್ಟರ್ಸ್, ಈಗ ಮೂರು ಮಕ್ಕಳ ತಾಯಿ.

ಮೊದಲ ಸುತ್ತಿನ ಮತ್ತೊಂದು ಪಂದ್ಯದಲ್ಲಿ ಅಮೆರಿಕದ ವೀನಸ್‌ ವಿಲಿಯಮ್ಸ್‌ ಅವರು 6–3, 5–7ರಿಂದ ಕರೋಲಿನಾ ಮುಚೊವಾ ಎದುರು ಸೋತರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT