ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐದು ತಾಸಿನ ಪಂದ್ಯದಲ್ಲಿ ಗೆದ್ದ ನಿಶಿಕೋರಿ

ಆಸ್ಟ್ರೇಲಿಯಾ ಓಪನ್‌: ಸೆರೆನಾಗೆ ಮಣಿದ ಸಿಮೋನ ಹಲೆಪ್‌; ಜೊಕೊವಿಚ್ ಕ್ವಾರ್ಟರ್‌ ಫೈನಲ್‌ಗೆ
Last Updated 21 ಜನವರಿ 2019, 17:41 IST
ಅಕ್ಷರ ಗಾತ್ರ

ಮೆಲ್ಬರ್ನ್‌: ಐದು ತಾಸು ಮತ್ತು ಐದು ನಿಮಿಷಗಳ ಮ್ಯಾರಥಾನ್ ಪಂದ್ಯದಲ್ಲಿ ಎದುರಾಳಿಯನ್ನು ಕಂಗೆಡಿಸಿದ ಜಪಾನ್‌ನ ಕೀ ನಿಶಿಕೋರಿ ಆಸ್ಟ್ರೇಲಿಯಾ ಓಪನ್ ಟೆನಿಸ್ ಟೂರ್ನಿಯ ಕ್ವಾರ್ಟರ್‌ ಫೈನಲ್ ಪ್ರವೇಶಿಸಿದರು.

ಸ್ಪೇನ್‌ನ ಪ್ಯಾಬ್ಲೊ ಕರೆನೊ ಬೂಸ್ಟಾ ಎದುರಿನ ರೋಚಕ ಹಣಾಹಣಿಯಲ್ಲಿ ನಿಶಿಕೋರಿ 6–7 (8/10), 4–6, 7–6(7/4),6–4,7–6 (10/8)ರಿಂದ ಗೆದ್ದರು. ಮಾರ್ಗರೆಟ್ ಕೋರ್ಟ್ ಅರೆನಾದಲ್ಲಿ ನಡೆದ ಮೊದಲ ಸೆಟ್‌ನಲ್ಲೇ ಉಭಯ ಆಟಗಾರರು ಪ್ರೇಕ್ಷಕರಿಗೆ ಭರಪೂರ ರಂಜನೆ ನೀಡಿದರು. ಈ ಸೆಟ್‌ 76 ನಿಮಿಷ ನಡೆಯಿತು. ಹೋರಾಡಿ ಮೊದಲ ಸೆಟ್‌ ಸೋತ ನಿಶಿಕೋರಿ ಎರಡನೇ ಸೆಟ್‌ನಲ್ಲೂ ನಿರಾಸೆ ಅನುಭವಿಸಿದರು. ನಂತರ ಪ್ರಬಲ ತಿರುಗೇಟು ನೀಡಿ ಮೂರು ಸೆಟ್‌ಗಳನ್ನು ತಮ್ಮದಾಗಿಸಿಕೊಂಡರು. ಆ ಮೂಲಕ ಪಂದ್ಯ ಗೆದ್ದರು.

ಜೊಕೊವಿಚ್‌ ಬೆವರಿಳಿಸಿದ ಮೆಡ್ವೆದೆವ್‌: ರಾಡ್‌ ಲೇವರ್ ಅರೆನಾದಲ್ಲಿ ನಡೆದ 16ರ ಘಟ್ಟದ ಮತ್ತೊಂದು ರೋಚಕ ಹಣಾಹಣಿಯಲ್ಲಿ ಸರ್ಬಿಯಾದ ನೊವಾಕ್ ಜೊಕೊವಿಚ್‌ಗೆ ರಷ್ಯಾದ ಡೇನಿಯಲ್‌ ಮೆಡ್ವೆದೆವ್‌ ಭಾರಿ ಪೈಪೋಟಿ ನೀಡಿದರು. 6–4, 6–7(5/7), 6–2, 6–3ರಲ್ಲಿ ಗೆದ್ದ ಜೊಕೊವಿಚ್‌ ಮಂಗಳವಾರ ನಡೆಯಲಿರುವ ಎಂಟರ ಘಟ್ಟದ ಹಣಾಹಣಿಯಲ್ಲಿ ನಿಶಿಕೋರಿ ವಿರುದ್ಧ ಸೆಣಸಲಿದ್ದಾರೆ.

ವಿಶ್ವ ಕ್ರಮಾಂಕದಲ್ಲಿ ಮೊದಲ ಸ್ಥಾನದಲ್ಲಿರುವ ಜೊಕೊವಿಚ್‌ ಮೊದಲ ಸೆಟ್‌ನಲ್ಲಿ ಗೆಲುವು ಸಾಧಿಸಿದರು. ಆದರೆ ವಿಶ್ವ ರ‍್ಯಾಂಕಿಂಗ್‌ನಲ್ಲಿ 15ನೇ ಸ್ಥಾನ ಹೊಂದಿರುವ ಮೆಡ್ವೆದೆವ್‌ ತಿರುಗೇಟು ನೀಡಿದರು. ರೋಚಕ ಅಂತ್ಯ ಕಂಡ ಸೆಟ್‌ನಲ್ಲಿ ಜೊಕೊವಿಚ್ ಸೋಲೊಪ್ಪಿಕೊಂಡರು. ಆದರೆ ಉಳಿದೆರಡು ಸೆಟ್‌ಗಳಲ್ಲಿ ಚಾಕಚಕ್ಯತೆ ಮೆರೆದರು. ಕೊನೆಯ ಸೆಟ್‌ನ ಕೊನೆ ಕೊನೆಗೆ ಸುಸ್ತದ ಇಬ್ಬರೂ ಆಟಗಾರರು ಪಾಯಿಂಟ್‌ ಕಳೆದುಕೊಂಡಾಗ ರ‍್ಯಾಕೆಟ್‌ ನೆಲಕ್ಕೆ ಎಸೆದು ಬೇಸರ ವ್ಯಕ್ತಪಡಿಸಿದರು.

ಫ್ರಾನ್ಸ್‌ನ ಲೂಕಾಸ್ ಪೌಲಿ 6–7, 6–4, 7–5, 7–6ರಲ್ಲಿ ಕ್ರೊವೇಷ್ಯಾದ ಬೋರ್ನಾ ಕೋರಿಕ್‌ ಎದುರು ಮತ್ತು ಕೆನಡಾದ ಮಿಲಾಸ್ ರಾನಿಕ್‌ ಜರ್ಮನಿಯ ಅಲೆಕ್ಸಾಂಡರ್ ಜ್ವೆರೆವ್‌ ಅವರನ್ನು 6–1, 6–1, 7–6(7/5)ರಲ್ಲಿ ಸೋಲಿಸಿದರು.

ಸೆರೆನಾಗೆ ಸವಾಲೆಸೆದ ಹಲೆಪ್‌

ಅಗ್ರ ಶ್ರೇಯಾಂಕದ ರೊಮೇನಿಯಾ ಆಟಗಾರ್ತಿ ಸಿಮೋನ ಹಲೆಪ್‌ ಅಮೆರಿಕದ ಸೆರೆನಾ ವಿಲಿಯಮ್ಸ್‌ಗೆ ಸವಾಲೆಸೆದರು. ಮೂರು ಸೆಟ್‌ಗಳ ರೋಮಾಂಚಕ ಹಣಾಹಣಿಯಲ್ಲಿ ಹಲೆಪ್ ಅವರನ್ನು ಮಣಿಸಿದ ಸೆರೆನಾ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು.

ತಾಯಿಯಾದ ನಂತರ ವಿಶ್ವ ಕ್ರಮಾಂಕದ ಅಗ್ರ ಸ್ಥಾನದಲ್ಲಿರುವ ಆಟಗಾರ್ತಿಯೊಬ್ಬರನ್ನು ಇದೇ ಮೊದಲ ಬಾರಿ ಎದುರಿಸಿದ ಸೆರೆನಾ 6–1, 4–6, 6–4ರಿಂದ ಗೆದ್ದರು. ಎಂಟರ ಘಟ್ಟದಲ್ಲಿ ಚೆಕ್ ಗಣರಾಜ್ಯದ ಕರೊಲಿನಾ ಪ್ಲಿಸ್ಕೋವ ಅವರನ್ನು ಎದುರಿಸಲಿದ್ದಾರೆ.

16ರ ಸುತ್ತಿನ ಇತರ ಪಂದ್ಯಗಳಲ್ಲಿ ಕರೊಲಿನಾ ಪ್ಲಿಸ್ಕೋವ 6–3, 6–1ರಲ್ಲಿ ಸ್ಪೇನ್‌ನ ಗಾರ್ಬೈನ್ ಮುಗುರುಜಾ ಎದುರು ಗೆದ್ದರು. ಜಪಾನ್‌ನ ನವೊಮಿ ಒಸಾಕ 4–6, 6–3, 6–4ರಲ್ಲಿ ಲಾಟ್ವಿಯಾದ ಅನಸ್ತೇಸಿಜಾ ಸೆವಸ್ತೋವ ಅವರನ್ನು ಸೋಲಿಸಿದರು. ಉಕ್ರೇನ್‌ನ ಎಲಿನಾ ಸ್ವಿಟೋಲಿನಾ 6–2, 1–6, 6–1ರಲ್ಲಿ ಸ್ಲೊವಾಕಿಯಾದ ವಿಕ್ಟೋರಿಯಾ ಕುಜ್ಮೋವ ಎದುರು ಗೆದ್ದರು.

ಕ್ರಿಕೆಟ್‌ ದೊಡ್ಡ ‍‍‍ಪಾಠ ಕಲಿಸಿದೆ: ಬಾರ್ಟಿ

ಟೆನಿಸ್‌ನಿಂದ ಕೆಲ ಕಾಲ ದೂರ ಇದ್ದು ವೃತ್ತಿ‍ಪರ ಕ್ರಿಕೆಟ್ ಆಡಿದ್ದರಿಂದ ದೊಡ್ಡ ಪಾಠ ಕಲಿತಿದ್ದೇನೆ ಎಂದು ಆಸ್ಟ್ರೇಲಿಯಾದ ಆಶ್ಲೆ ಬಾರ್ಟಿ ಅಭಿಪ್ರಾಯಪಟ್ಟಿದ್ದಾರೆ. ಆಸ್ಟ್ರೇಲಿಯಾ ಓಪನ್‌ನ ಕ್ವಾರ್ಟರ್‌ ಫೈನಲ್ ತಲುಪಿರುವ ಅವರು ಮಂಗಳವಾರ ನಡೆಯಲಿರುವ ಪಂದ್ಯದಲ್ಲಿ ಚೆಕ್ ಗಣರಾಜ್ಯದ ಪೆಟ್ರಾ ಕ್ವಿಟೋವ ಅವರನ್ನು ಎದುರಿಸಲಿದ್ದಾರೆ.

ಟೂರ್ನಿಯಲ್ಲಿ ಆತಿಥೇಯರಿಗೆ ಭರವಸೆ ಮೂಡಿಸಿರುವ ಏಕೈಕ ಆಟಗಾರ್ತಿ ಬಾರ್ಟಿ. 22 ವರ್ಷದ ಅವರು ಭಾನುವಾರ ನಡೆದ ಪಂದ್ಯದಲ್ಲಿ ಮರಿಯಾ ಶರಪೋವ ಎದುರು ಗೆದ್ದಿದ್ದರು.

ಕ್ವೀನ್ಸ್‌ಲ್ಯಾಂಡ್‌ನ ಈ ಆಟಗಾರ್ತಿ 2014ರಲ್ಲಿ ಟೆನಿಸ್‌ನಿಂದ ನಿವೃತ್ತಿ ಘೋಷಿಸಿ ಅಚ್ಚರಿ ಮೂಡಿಸಿದ್ದರು. ನಂತರ ಕ್ರಿಕೆಟ್ ಅಂಗಣಕ್ಕೆ ಕಾಲಿಟ್ಟಿದ್ದರು. ನಿರಂತರ ಪ್ರಯಾಣ ಮತ್ತು ಸ್ಥಳೀಯ ಪ್ರೇಕ್ಷಕರ ಒತ್ತಡ ಈ ನಿರ್ಧಾರ ಕೈಗೊಳ್ಳಲು ಕಾರಣ ಎಂದು ಅವರು ಹೇಳಿದ್ದರು.

ಮಹಿಳೆಯರ ಬಿಗ್ ಬ್ಯಾಷ್‌ನಲ್ಲಿ ಬ್ರಿಸ್ಬೇನ್‌ ಹೀಟ್ ತಂಡದ ಪರ ಆಡಿದ್ದ ಅವರು ಮೆಲ್ಬರ್ನ್‌ ಸ್ಟಾರ್ಸ್ ಎದುರಿನ ಮೊದಲ ಪಂದ್ಯದಲ್ಲಿ 27 ಎಸೆತಗಳಲ್ಲಿ 39 ರನ್‌ ಗಳಿಸಿದ್ದರು.

‘ಕ್ರಿಕೆಟ್‌ನಲ್ಲಿ ಏಕಾಂಗಿತನ ಕಾಡುತ್ತಿರುತ್ತದೆ. ಅಂಗಣದಲ್ಲಿ ಸೋಲಿನ ಸುಳಿಯಲ್ಲಿ ಸಿಲುಕಿದ್ದಾಗ ಸಂತೈಸಲು ಅಥವಾ ಪ್ರೇರಣೆ ನೀಡಲು ಯಾರೂ ಇರುವುದಿಲ್ಲ. ಕ್ರಿಕೆಟ್‌ನಲ್ಲಿ ಹಾಗಲ್ಲ. ನಿರಾಸೆ ಕಾಡುವಾಗ ಸಮಾಧಾನಪಡಿಸಲು 10 ಮಂದಿ ಇರುತ್ತಾರೆ’ ಎಂದು ಅವರು ಹೇಳಿದರು.

‘ಟೆನಿಸ್‌ನಿಂದ ದೂರ ಇದ್ದ 18 ತಿಂಗಳು ನನ್ನ ಪಾಲಿಗೆ ಮಹತ್ವದ್ದಾಗಿದ್ದವು. ಕ್ರಿಕೆಟ್ ಲೋಕದಿಂದ ವಾಪಸ್‌ ಬಂದಾಗ ಹೊಸ ವ್ಯಕ್ತಿತ್ವ ನನ್ನಲ್ಲಿ ರೂಪಗೊಂಡಿತ್ತು’ ಎಂದು ಅವರು ನುಡಿದರು.

ಕರೆಯುವ ಮೊದಲೇ ಬಂದ ಸೆರನಾ

ಹಲೆಪ್ ಎದುರಿನ ಪಂದ್ಯ ಆರಂಭಕ್ಕೂ ಮೊದಲು ಸೆರೆನಾ ವಿಲಿಯಮ್ಸ್ ಪ್ರಮಾದ ಮಾಡಿದರು. ಹಲೆಪ್ ಮೊದಲು ಅಂಗಣಕ್ಕೆ ಬರಲಿದ್ದಾರೆ ಎಂದು ಘೋಷಿಸಲಾಯಿತು. ದೊಡ್ಡ ಗಾತ್ರದ ಹೆಡ್‌ಫೋನ್‌ ಸಿಕ್ಕಿಸಿಕೊಂಡಿದ್ದ ಸೆರೆನಾ ತಮ್ಮನ್ನೇ ಕರೆದಿದ್ದಾರೆ ಎಂದುಕೊಂಡು ಅಂಗಣ ಪ್ರವೇಶಿಸಿದರು. ತಕ್ಷಣ ತಪ್ಪು ಅರಿವಾಗಿ ವಾಪಸಾದರು. ಹಲೆಪ್ ಬಂದ ನಂತರ ಮತ್ತೆ ಬಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT