ಅಮೆರಿಕ ಓಪನ್‌ ಟೆನಿಸ್‌ ಫೈನಲ್‌: ಸಾಂಪ್ರಾಸ್‌ ದಾಖಲೆ ಸರಿಗಟ್ಟಿದ ಜೊಕೊವಿಚ್‌

7
ಡೆಲ್‌ ಪೊಟ್ರೊ ಎದುರು ಗೆದ್ದ ಸರ್ಬಿಯಾದ ಆಟಗಾರ

ಅಮೆರಿಕ ಓಪನ್‌ ಟೆನಿಸ್‌ ಫೈನಲ್‌: ಸಾಂಪ್ರಾಸ್‌ ದಾಖಲೆ ಸರಿಗಟ್ಟಿದ ಜೊಕೊವಿಚ್‌

Published:
Updated:

ನ್ಯೂಯಾರ್ಕ್‌: ಸರ್ಬಿಯಾದ ನೊವಾಕ್‌ ಜೊಕೊವಿಚ್‌ ಅವರು ಅಮೆರಿಕ ಓಪನ್‌ ಟೆನಿಸ್‌ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದಿದ್ದಾರೆ.

ಇದರೊಂದಿಗೆ ಅತಿ ಹೆಚ್ಚು ಗ್ರ್ಯಾನ್‌ಸ್ಲಾಮ್ ಟ್ರೋಫಿ ಮುಡಿಗೇರಿಸಿಕೊಂಡವರ ಪೈಕಿ ಅಮೆರಿಕದ ಪೀಟ್‌ ಸಾಂಪ್ರಾಸ್‌ ದಾಖಲೆಯನ್ನು ಸರಿಗಟ್ಟಿದ್ದಾರೆ. ನೊವಾಕ್‌ ಗೆದ್ದ 14ನೇ ಗ್ರ್ಯಾನ್‌ಸ್ಲಾಮ್‌ ಟ್ರೋಫಿ ಇದಾಗಿದೆ.

ಅಮೆರಿಕ ಓ‍‍ಪನ್‌ನಲ್ಲಿ ಆರನೇ ಬಾರಿ ಫೈನಲ್‌ ಪ್ರವೇಶಿಸಿದ್ದ ಜೊಕೊವಿಚ್‌ ಪ್ರಶಸ್ತಿಗೆ ಮುತ್ತಿಕ್ಕಿದ್ದು ಮೂರನೇ ಬಾರಿ. 2011 ಮತ್ತು 2015ರಲ್ಲೂ ಚಾಂಪಿಯನ್‌ ಆಗಿದ್ದರು.

ಗಾಯದ ಕಾರಣ ಹೋದ ವರ್ಷ ಟೂರ್ನಿಗೆ ಅಲಭ್ಯರಾಗಿದ್ದ ನೊವಾಕ್‌, ಆರ್ಥರ್‌ ಆ್ಯಷ್‌ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪುರುಷರ ಸಿಂಗಲ್ಸ್ ಫೈನಲ್‌ನಲ್ಲಿ 3–0 ಯಿಂದ ಅರ್ಜೆಂಟೀನಾದ ವುವಾನ್‌ ಮಾರ್ಟಿನ್‌ ಡೆಲ್‌ ‍ಪೊಟ್ರೊ ಅವರನ್ನು ಸೋಲಿಸಿದರು.

ವುವಾನ್‌ ಎದುರು ನೊವಾಕ್‌ ಗೆದ್ದ 15ನೇ ಪಂದ್ಯ ಇದಾಗಿದೆ.

ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿರುವ ಪೊಟ್ರೊ, ಗ್ರ್ಯಾನ್‌ಸ್ಲಾಮ್‌ನಲ್ಲಿ ಎರಡನೇ ಬಾರಿ ಫೈನಲ್‌ ಪ್ರವೇಶಿಸಿದ್ದರು. 2009ರ ಅಮೆರಿಕ ಓಪನ್‌ ಟೂರ್ನಿಯಲ್ಲಿ ಮೊದಲ ಬಾರಿಗೆ ಪ್ರಶಸ್ತಿ ಜಯಿಸಿದ್ದರು.

ಜೊಕೊವಿಚ್‌ ಗೆದ್ದಿದ್ದು ಹೀಗೆ...

ಮೊದಲ ಸೆಟ್‌ : 6–3

*ಆರಂಭದಲ್ಲಿ ಒತ್ತಡಕ್ಕೆ ಒಳಗಾದಂತೆ ಕಂಡ ನೊವಾಕ್‌, ನಂತರ ಮಿಂಚಿದರು. ತಾವು ಸರ್ವ್‌ ಮಾಡಿದ ಎರಡೂ ಗೇಮ್‌ಗಳನ್ನು ಜಯಿಸಿ 2–1ರ ಮುನ್ನಡೆ ಗಳಿಸಿದರು.

*ಎಂಟನೇ ಗೇಮ್‌ನಲ್ಲಿ ಜಿದ್ದಾಜಿದ್ದಿನ ಪೈಪೋಟಿ ಕಂಡುಬಂತು. ಇಬ್ಬರೂ 22 ಶಾಟ್ಸ್‌ಗಳ ರ‍್ಯಾಲಿ ಆಡಿದರು. ಈ ಹಂತದಲ್ಲಿ ಬ್ರೇಕ್‌ ಪಾಯಿಂಟ್‌ ಕಲೆಹಾಕಿದ ಜೊಕೊವಿಚ್‌, ಗೇಮ್‌ ಜಯಿಸಿ ಮುನ್ನಡೆಯನ್ನು 5–3ಕ್ಕೆ ಹೆಚ್ಚಿಸಿಕೊಂಡರು.

*ಒಂಬತ್ತನೇ ಗೇಮ್‌ನಲ್ಲೂ ಜೊಕೊವಿಚ್‌ ಆಟ ರಂಗೇರಿತು. ಮತ್ತೊಮ್ಮೆ ಇಬ್ಬರೂ ದೀರ್ಘ ರ‍್ಯಾಲಿಗಳನ್ನು ಆಡಿದರು. ರೋಚಕ ಘಟ್ಟದಲ್ಲಿ ಡೆಲ್‌ಪೊಟ್ರೊ ಎಡವಟ್ಟು ಮಾಡಿದರು. ಡ್ರಾಪ್ ಮಾಡುವ ಭರದಲ್ಲಿ ಅವರು ಚೆಂಡನ್ನು ನೆಟ್‌ಗೆ ಬಾರಿಸಿ ಗೇಮ್‌ ಕೈಚೆಲ್ಲಿದರು.

ಎರಡನೇ ಸೆಟ್‌: 7–6

*ಮೊದಲ ಗೇಮ್‌ನಲ್ಲಿ 0–30ರಿಂದ ಹಿನ್ನಡೆ ಕಂಡಿದ್ದ ಪೊಟ್ರೊ, ನಂತರ ಎರಡು ಬ್ರೇಕ್‌ ಪಾಯಿಂಟ್ಸ್‌ ಉಳಿಸಿಕೊಂಡು ಗೇಮ್‌ ಕೈವಶ ಮಾಡಿಕೊಂಡರು.

*ನಾಲ್ಕನೇ ಗೇಮ್‌ನಲ್ಲಿ ಪೊಟ್ರೊ ಹಲವು ತಪ್ಪುಗಳನ್ನು ಮಾಡಿದರು. ಹೀಗಾಗಿ ನೊವಾಕ್‌ 3–1ರಿಂದ ಮುನ್ನಡೆ ಪಡೆದರು.

*ನಂತರದ ಮೂರು ಗೇಮ್‌ಗಳಲ್ಲಿ ಪೊಟ್ರೊ ಪ್ರಾಬಲ್ಯ ಮೆರೆದರು. ಅಮೋಘ ಏಸ್‌ಗಳನ್ನು ಸಿಡಿಸಿ 4–3ಯಿಂದ ಮುನ್ನಡೆ ಗಳಿಸಿದರು.

*ಎಂಟನೇ ಗೇಮ್‌ನಲ್ಲಿ ಜೊಕೊವಿಚ್‌ ತಿರುಗೇಟು ನೀಡಿದರು. 20 ನಿಮಿಷಗಳ ಮ್ಯಾರಥಾನ್‌ ಹೋರಾಟದಲ್ಲಿ ಮೇಲುಗೈ ಸಾಧಿಸಿ 4–4ರಲ್ಲಿ ಸಮಬಲ ಮಾಡಿಕೊಂಡರು. ನಂತರದ ನಾಲ್ಕು ಗೇಮ್‌ಗಳಲ್ಲೂ ಜಿದ್ದಾಜಿದ್ದಿನ ಹೋರಾಟ ಕಂಡುಬಂತು.

*‘ಟೈ ಬ್ರೇಕರ್‌’ನಲ್ಲಿ ಅರ್ಜೆಂಟೀನಾದ ಪೊಟ್ರೊ ಹಲವು ತಪ್ಪುಗಳನ್ನು ಮಾಡಿ ಜೊಕೊವಿಚ್‌ಗೆ ಶರಣಾದರು.

*ಮೊದಲ ಎರಡು ಸೆಟ್‌ಗಳ ಪೈಪೋಟಿ 2 ಗಂಟೆ 47 ನಿಮಿಷ ನಡೆಯಿತು.

ಮೂರನೇ ಸೆಟ್‌: 6–3

*ನಿರ್ಣಾಯಕ ಸೆಟ್‌ನಲ್ಲಿ ಜೊಕೊವಿಚ್‌ ದೀರ್ಘ ರ‍್ಯಾಲಿಗಳನ್ನು ಆಡುವುದಕ್ಕೆ ಹೆಚ್ಚು ಒತ್ತು ನೀಡಿದರು. ನಾಲ್ಕನೇ ಗೇಮ್‌ನಲ್ಲಿ 22 ಶಾಟ್‌ಗಳ ರ‍್ಯಾಲಿಯನ್ನು ಗೆದ್ದು 3–1ರ ಮುನ್ನಡೆ ಗಳಿಸಿದರು.

*ಐದನೇ ಗೇಮ್‌ನಲ್ಲಿ ಬ್ಯಾಕ್‌ಹ್ಯಾಂಡ್‌ ವ್ಯಾಲಿ ವಿನ್ನರ್‌ಗಳನ್ನು ಸಿಡಿಸಿದ ಪೊಟ್ರೊ, ಎದುರಾಳಿಯನ್ನು ಕಂಗೆಡಿಸಿ ಹಿನ್ನಡೆಯನ್ನು 2–3ಕ್ಕೆ ತಗ್ಗಿಸಿಕೊಂಡರು.

*ನಂತರ ನೊವಾಕ್‌ ಪ್ರಾಬಲ್ಯ ಮೆರೆದರು. ಕ್ರಾಸ್‌ಕೋರ್ಟ್‌ ಸ್ಮ್ಯಾಷ್‌ಗಳನ್ನು ಸಿಡಿಸಿದ ಅವರು ಬ್ರೇಕ್ ಪಾಯಿಂಟ್ಸ್‌ಗಳನ್ನು ಕಾಪಾಡಿಕೊಂಡು ಸತತ ಎರಡು ಗೇಮ್‌ ಗೆದ್ದರು. ಹೀಗಾಗಿ ಮುನ್ನಡೆ 5–3ಕ್ಕೆ ಹೆಚ್ಚಿತು.

*ಒಂಬತ್ತನೇ ಗೇಮ್‌ನಲ್ಲೂ ಪರಿಣಾಮಕಾರಿ ಸಾಮರ್ಥ್ಯ ತೋರಿದ ಜೊಕೊವಿಚ್‌ ಸಂಭ್ರಮದ ಹೊಳೆಯಲ್ಲಿ ಮಿಂದೆದ್ದರು.

ಇದನ್ನೂ ಓದಿ

ರಫೆಲ್‌ ನಡಾಲ್‌ಗೆ ‘ಸೋಲಿನ’ ನೋವು

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 1

  Sad
 • 1

  Frustrated
 • 0

  Angry

Comments:

0 comments

Write the first review for this !