ಪೇರ್‌ಗೆ ಆಘಾತ ನೀಡಿದ ಪ್ರಜ್ಞೇಶ್‌

ಬುಧವಾರ, ಮಾರ್ಚ್ 20, 2019
23 °C
ಇಂಡಿಯಾನ ವೆಲ್ಸ್‌ ಟೆನಿಸ್‌ ಟೂರ್ನಿ

ಪೇರ್‌ಗೆ ಆಘಾತ ನೀಡಿದ ಪ್ರಜ್ಞೇಶ್‌

Published:
Updated:
Prajavani

ಇಂಡಿಯಾನ ವೆಲ್ಸ್‌, ಅಮೆರಿಕ : ಭಾರತದ ಪ್ರಜ್ಞೇಶ್‌ ಗುಣೇಶ್ವರನ್‌, ಶುಕ್ರವಾರ ವೃತ್ತಿ ಬದುಕಿನ ಸ್ಮರಣೀಯ ಗೆಲುವು ದಾಖಲಿಸಿದರು.

ಇಂಡಿಯಾನ ವೆಲ್ಸ್‌ ಟೆನಿಸ್‌ ಟೂರ್ನಿಯ ಮೊದಲ ಸುತ್ತಿನಲ್ಲಿ ಭಾರತದ ಆಟಗಾರ, ಫ್ರಾನ್ಸ್‌ನ ಬೆನೊಯಿಟ್‌ ಪೇರ್‌ಗೆ ಆಘಾತ ನೀಡಿದರು.

ಪುರುಷರ ಸಿಂಗಲ್ಸ್‌ ವಿಭಾಗದ ಹಣಾಹಣಿಯಲ್ಲಿ ಪ್ರಜ್ಞೇಶ್‌ 7–6, 6–4 ನೇರ ಸೆಟ್‌ಗಳಿಂದ ಗೆದ್ದರು. ಈ ಹೋರಾಟ ಒಂದು ಗಂಟೆ 29 ನಿಮಿಷ ನಡೆಯಿತು. ಭಾರತದ ಆಟಗಾರ ಎಟಿಪಿ ಮಾಸ್ಟರ್ಸ್‌ ಟೂರ್ನಿಯೊಂದರಲ್ಲಿ ಎರಡನೇ ಸುತ್ತು ಪ್ರವೇಶಿಸಿದ್ದು ಇದೇ ಮೊದಲು.

ಅರ್ಹತಾ ಸುತ್ತಿನಲ್ಲಿ ಆಡಿ ಪ್ರಧಾನ ಹಂತಕ್ಕೆ ಲಗ್ಗೆ ಇಟ್ಟಿದ್ದ ಪ್ರಜ್ಞೇಶ್, ವಿಶ್ವ ಕ್ರಮಾಂಕ ಪಟ್ಟಿಯಲ್ಲಿ 69ನೇ ಸ್ಥಾನದಲ್ಲಿರುವ ಪೇರ್‌ ಎದುರು ಕೆಚ್ಚೆದೆಯಿಂದ ಹೋರಾಡಿದರು.

ಮೊದಲ ಸೆಟ್‌ನಲ್ಲಿ ಉಭಯ ಆಟಗಾರರೂ ಅಪೂರ್ವ ಸಾಮರ್ಥ್ಯ ತೋರಿದರು. ಇಬ್ಬರೂ ಸರ್ವ್‌ ಉಳಿಸಿಕೊಂಡಿದ್ದರಿಂದ 6–6 ಸಮಬಲ ಕಂಡುಬಂತು. ವಿಶ್ವ ರ‍್ಯಾಂಕಿಂಗ್‌ನಲ್ಲಿ 97ನೇ ಸ್ಥಾನದಲ್ಲಿರುವ ಭಾರತದ ಆಟಗಾರ ‘ಟೈ ಬ್ರೇಕರ್‌’ನಲ್ಲಿ ಮಿಂಚಿನ ಆಟ ಆಡಿ ಗೆಲುವಿನ ತೋರಣ ಕಟ್ಟಿದರು.

ಎರಡನೇ ಸೆಟ್‌ನ ಆರಂಭದಲ್ಲೂ ಉಭಯರ ನಡುವೆ ತುರುಸಿನ ಪೈಪೋಟಿ ಏರ್ಪಟ್ಟಿತ್ತು. ಎಂಟು ಗೇಮ್‌ಗಳ ವರೆಗೆ ಇಬ್ಬರೂ ಸರ್ವ್‌ ಉಳಿಸಿಕೊಂಡರು. ಒಂಬತ್ತನೇ ಗೇಮ್‌ನಲ್ಲಿ ಸರ್ವ್‌ ಕಾಪಾಡಿಕೊಂಡ ಪ್ರಜ್ಞೇಶ್‌, ಮರು ಗೇಮ್‌ನಲ್ಲಿ ಎದುರಾಳಿಯ ಸರ್ವ್‌ ಮುರಿದು ಸಂಭ್ರಮಿಸಿದರು.

ಎರಡನೇ ಸುತ್ತಿನಲ್ಲಿ ಪ್ರಜ್ಞೇಶ್‌, ಜಾರ್ಜಿಯಾದ ಆಟಗಾರ ನಿಕೊಲಸ್‌ ಬಸಿಲಶ್ವಿಲಿ ಎದುರು ಸೆಣಸಲಿದ್ದಾರೆ.

ಇತರ ಪಂದ್ಯಗಳಲ್ಲಿ ಫಿಲಿಪ್‌ ಕೊಹ್ಲ್‌ಶ್ರಿಬರ್‌ 6–4, 6–0ರಲ್ಲಿ ಪಿಯೆರ್‌ ಹ್ಯೂಸ್‌ ಹರ್ಬರ್ಟ್‌ ಎದುರೂ, ಅಲ್ಬರ್ಟ್‌ ರಾಮೋಸ್‌ 6–1, 6–2ರಲ್ಲಿ ದಮಿರ್‌ ಜುಮಹುರ್‌ ಮೇಲೂ, ಮಲೇಕ್‌ ಜಜಿರಿ 6–4, 6–2ರಲ್ಲಿ ಬ್ರಾಡ್ಲಿ ಕ್ಲಾಹ್ನ್‌ ವಿರುದ್ಧವೂ, ಸ್ಯಾಮ್‌ ಕ್ವೆರಿ 7–6, 2–6, 6–4ರಲ್ಲಿ ಮಟ್ಟಿಯೊ ಬೆರೆಟ್ಟಿನಿ ಮೇಲೂ, ಯೋಶಿಹಿಟೊ ನಿಶಿಯೊಕಾ 3–6, 6–3, 6–2ರಲ್ಲಿ ಡೆನಿಸ್‌ ಕುಡ್ಲಾ ವಿರುದ್ಧವೂ ಗೆದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !