ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ಟ್ರೇಲಿಯಾದಲ್ಲಿ ಪ್ರೊ ಟೆನಿಸ್ ಸೀರಿಸ್‌ಗೆ ವೇದಿಕೆ ಸಜ್ಜು

Last Updated 24 ಜೂನ್ 2020, 11:18 IST
ಅಕ್ಷರ ಗಾತ್ರ

ಮೆಲ್ಬರ್ನ್: ಆಸ್ಟ್ರೇಲಿಯಾದ ಟೆನಿಸ್ ಆಟಗಾರರಿಗೆ ಮೂರು ತಿಂಗಳ ನಂತರ ಕಣಕ್ಕೆ ಇಳಿಯುವ ಅವಕಾಶ ಲಭಿಸಿದೆ. ಯುಟಿಆರ್ ಪ್ರೊ ಸೀರಿಸ್‌ ಪಂದ್ಯಗಳು ಈ ವಾರಾಂತ್ಯದಲ್ಲಿ ಸಿಡ್ನಿಯಲ್ಲಿ ಆರಂಭಗೊಳ್ಳಲಿದ್ದು ಮುಂದಿನ ವಾರ ಇತರ ನಗರಗಳಿಗೂ ವಿಸ್ತರಣೆಯಾಗಲಿವೆ.

ಇನ್ನೂ ಅಭ್ಯಾಸ ಆರಂಭಿಸದಿರುವ ದೇಶದ ಅಗ್ರ ಕ್ರಮಾಂಕದ ಆಟಗಾರ್ತಿ ಆ್ಯಶ್ ಬಾರ್ಟಿ ಈ ಸೀರಿಸ್‌ನಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದ್ದು ಅಮೆರಿಕ ಓಪನ್‌ ಟೂರ್ನಿಯ ಮಾಜಿ ಚಾಂಪಿಯನ್ ಸ್ಯಾಮ್ ಸ್ಟಾಸರ್ ಕೂಡ ಆಸಕ್ತಿ ವಹಿಸಿದ್ದಾರೆ. ಸ್ಥಳೀಯ ಟೆನಿಸ್ ಪಟುಗಳಿಗೆ ಭಾರಿ ಮೊತ್ತದ ಬಹುಮಾನ ಗೆಲ್ಲುವ ಅವಕಾಶವೂ ಈ ಸೀರಿಸ್‌ನಲ್ಲಿದೆ.

ಕೊರೊನಾ ವೈರಾಣು ಹಾವಳಿ ಆರಂಭವಾದಾಗಿನಿಂದ ಪ್ರಮುಖ ಟೆನಿಸ್ ಟೂರ್ನಿಗಳನ್ನು ರದ್ದುಗೊಳಿಸಲಾಗಿತ್ತು. ಆದರೆ ಇತ್ತೀಚೆಗೆ ಪ್ರದರ್ಶನ ಪಂದ್ಯಗಳಿಗೆ ಅವಕಾಶ ನೀಡಲಾಗಿದೆ. ಸರ್ಬಿಯಾ ಮತ್ತು ಕ್ರಿವೇಷ್ಯಾದಲ್ಲಿ ನೊವಾಕ್ ಜೊಕೊವಿಚ್ ನೇತೃತ್ವದಲ್ಲಿ ಆ್ಯಡ್ರಿಯಾ ಟೂರ್‌ ಕಳೆದ ವಾರ ನಡೆದಿತ್ತು. ಆದರೆ ಮೂವರಿಗೆ ಕೋವಿಡ್–19 ಸೋಂಕು ದೃಢಪಟ್ಟ ಕಾರಣ ಸ್ಪರ್ಧೆಗಳನ್ನು ಅರ್ಧಕ್ಕೇ ಸ್ಥಗಿತಗೊಳಿಸಲಾಗಿತ್ತು. ಲಕ್ಷಣಗಳಿಲ್ಲದೇ ಸೋಂಕು ತಗುಲಿರುವ ಜೊಕೊವಿಚ್ 14 ದಿನ ಐಸೊಲೇಷನ್‌ನಲ್ಲಿ ಇರುವುದಾಗಿ ತಿಳಿಸಿದ್ದಾರೆ.

ಆಗಸ್ಟ್ 31ರಿಂದ ಪ್ರೇಕ್ಷಕರಿಗೆ ಅವಕಾಶ ನೀಡದೇ ಅಮೆರಿಕ ಓಪನ್ ಟೂರ್ನಿ ಆಯೋಜಿಸಲು ನಿರ್ಧರಿಸಲಾಗಿದ್ದು ಮೇ ತಿಂಗಳಲ್ಲಿ ಮುಂದೂಡಲಾದ ಫ್ರೆಂಚ್ ಓಪನ್ ಟೂರ್ನಿ ಸೆಪ್ಟೆಂಬರ್ 27ರಂದು ಆರಂಭವಾಗುವಸಾಧ್ಯತೆ ಇದೆ.

ಆಸ್ಟ್ರೇಲಿಯಾ ರಾಷ್ಟ್ರೀಯ ಟೆನಿಸ್ ಅಕಾಡೆಮಿಯಲ್ಲಿ ಆಟಗಾರರು ಈಗಾಗಲೇ ಅಭ್ಯಾಸ ಆರಂಭಿಸಿದ್ದಾರೆ. ಸಮುದಾಯ ಆಧಾರಿತ ಟೆನಿಸ್ ಕೆಲವು ವಾರಗಳ ಹಿಂದೆಯೇ ಆರಂಭಗೊಂಡಿದೆ. ಸರ್ಕಾರದ ಮಾರ್ಗಸೂಚಿ ಪ್ರಕಾರ ಅಂತರ ಕಾಯ್ದುಕೊಂಡು ಆಡಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT