ಭಾನುವಾರ, ಜೂನ್ 13, 2021
20 °C
ರೋಮ್ ಮಾಸ್ಟರ್ಸ್‌ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದಿದ್ದ ಪೋಲೆಂಡ್ ಆಟಗಾರ್ತಿ

ಟೆನಿಸ್‌ ರ‍್ಯಾಂಕಿಂಗ್‌: ಅಗ್ರ 10ರ ಪಟ್ಟಿಯಲ್ಲಿ ಇಗಾ

ರಾಯಿಟರ್ಸ್ Updated:

ಅಕ್ಷರ ಗಾತ್ರ : | |

Prajavani

ರೋಮ್: ಫ್ರೆಂಚ್ ಓಪನ್ ಚಾಂಪಿಯನ್‌ ಇಗಾ ಸ್ವಾಟೆಕ್ ಅವರು ಡಬ್ಲ್ಯುಟಿಎ ಟೆನಿಸ್ ರ‍್ಯಾಂಕಿಂಗ್‌ನಲ್ಲಿ ಅಗ್ರ 10 ಪಟ್ಟಿಯಲ್ಲಿ ಸ್ಥಾನ ಗಳಿಸಿದ್ದಾರೆ. ಕಳೆದ ವರ್ಷ ಫ್ರೆಂಚ್ ಓಪನ್ ಟ್ರೋಫಿ ಮುಡಿಗೇರಿಸಿಕೊಂಡ ಬಳಿಕ ಇಗಾ ಅವರು ಸಾಕಷ್ಟು ಏಳು ಬೀಳು ಕಂಡಿದ್ದರು.

ಈ ತಿಂಗಳ ಅಂತ್ಯದಲ್ಲಿ 20ರ ಹರೆಯಕ್ಕೆ ಕಾಲಿಡಲಿರುವ ಪೋಲೆಂಡ್ ಆಟಗಾರ್ತಿ, ವಿಶ್ವದ ಮಾಜಿ ಅಗ್ರಕ್ರಮಾಂಕದ ಕರೋಲಿನಾ ಪ್ಲಿಸ್ಕೊವಾ ಅವರನ್ನು 6–0, 6–0ಯಿಂದ ಮಣಿಸಿ ರೋಮ್ ಮಾಸ್ಟರ್ಸ್‌ನಲ್ಲಿ ಭಾನುವಾರ ಪ್ರಶಸ್ತಿ ಜಯಿಸಿದ್ದರು. ಇದು ಅವರ ಮೊದಲ ‘ಡಬ್ಲ್ಯುಟಿಎ 1000‘ ಟ್ರೋಫಿಯಾಗಿತ್ತು. ಇದರೊಂದಿಗೆ ರ‍್ಯಾಂಕಿಂಗ್‌ನಲ್ಲಿ ಆರು ಸ್ಥಾನಗಳ ಏರಿಕೆ ಕಂಡು ಒಂಬತ್ತನೇ ಸ್ಥಾನಕ್ಕೆ ತಲುಪಿದ್ದಾರೆ.

‘ರ‍್ಯಾಂಕಿಂಗ್‌ನಲ್ಲಿ ಏರಿಕೆಯಾಗಿದ್ದು ತುಂಬಾ ಸಂತಸದ ಸಂಗತಿ. ಹೆಚ್ಚು ಸ್ಥಿರತೆಯ ಆಟವಾಡುತ್ತಿದ್ದೇನೆ ಎಂಬುದು ಹೆಮ್ಮೆಯ ವಿಚಾರ. ಆರಂಭದಿಂದಲೂ ಇದೇ ಗುರಿಯಿಟ್ಟುಕೊಂಡು ಕಣಕ್ಕಿಳಿಯುತ್ತಿದ್ದೇನೆ. ಆಟದಲ್ಲಿ ದೊಡ್ಡಮಟ್ಟದ ಸುಧಾರಣೆಯೂ ಕಂಡುಬಂದಿದೆ‘ ಎಂದು ಇಗಾ ತಿಳಿಸಿದ್ದಾರೆ.

ಹೋದ ವರ್ಷದ ಅಕ್ಟೋಬರ್‌ನಲ್ಲಿ ರೋಲ್ಯಾಂಡ್‌ ಗ್ಯಾರೋಸ್‌ನಲ್ಲಿ (ಫ್ರೆಂಚ್ ಓಪನ್‌) ಪ್ರಶಸ್ತಿ ಗೆಲ್ಲುವ ಮೂಲಕ ಇಗಾ, ಗ್ರ್ಯಾಂಡ್‌ಸ್ಲಾಮ್‌ ಪ್ರಶಸ್ತಿ ವಿಜೇತ ಪೋಲೆಂಡ್‌ನ ಮೊದಲ ಆಟಗಾರ್ತಿ ಎನಿಸಿಕೊಂಡಿದ್ದರು.

ಆತ್ಮವಿಶ್ವಾಸ ವೃದ್ಧಿಸಿದೆ–ಜೊಕೊವಿಚ್‌: ರೋಮ್ ಮಾಸ್ಟರ್ಸ್ ಟೂರ್ನಿಯ ಫೈನಲ್‌ನಲ್ಲಿ ರಫೆಲ್ ನಡಾಲ್ ವಿರುದ್ಧ ಸೋತ ನೊವಾಕ್ ಜೊಕೊವಿಚ್ ನಿರಾಶರಾಗಿದ್ದರೂ, ಕಳೆದ ಒಂದು ವಾರದಿಂದ ತೋರಿದ ಸಾಮರ್ಥ್ಯ ಅವರ ಆತ್ಮವಿಶ್ವಾಸ ವೃದ್ಧಿಸಿದೆಯಂತೆ.

ಭಾನುವಾರ ನಡೆದ ಟೂರ್ನಿಯ ಫೈನಲ್ ಹಣಾಹಣಿಯಲ್ಲಿ ನಡಾಲ್‌ 7-5 1-6 6-3ರಿಂದ ಜೊಕೊವಿಚ್ ಅವರಿಗೆ ಸೋಲುಣಿಸಿದ್ದರು.

‘ಫ್ರೆಂಚ್ ಓಪನ್ ಟೂರ್ನಿಗೆ ಸೂಕ್ತ ರೀತಿಯಲ್ಲಿ ಸಜ್ಜುಗೊಳ್ಳಲು ನಡಾಲ್ ಎದುರು ನಾನು ಅತ್ಯಂತ ಇಷ್ಟಪಟ್ಟು ಆಡಿದೆ. ತಾನು ತೋರಿದ ಹೋರಾಟದ ಬಗ್ಗೆ ಖುಷಿಯಿದೆ‘ ಎಂದು ಜೊಕೊವಿಚ್ ಹೇಳಿದ್ದಾರೆ.

ಫ್ರೆಂಚ್ ಓಪನ್ ಟೂರ್ನಿಯು ಇದೇ ತಿಂಗಳ 24ರಿಂದ ಜೂನ್ 13ರವರೆಗೆ ನಿಗದಿಯಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು