ಬುಧವಾರ, ನವೆಂಬರ್ 20, 2019
25 °C
ಇಂದಿನಿಂದ ಪುಣೆ ಚಾಲೆಂಜರ್‌ ಟೆನಿಸ್‌ ಟೂರ್ನಿ

ಪ್ರಜ್ಞೇಶ್‌, ಸುಮಿತ್‌ ಮೇಲೆ ನಿರೀಕ್ಷೆ

Published:
Updated:
Prajavani

ಪುಣೆ : ಪ್ರಮುಖ ಆಟಗಾರರಾದ ‍ಪ್ರಜ್ಞೇಶ್‌ ಗುಣೇಶ್ವರನ್‌ ಮತ್ತು ಸುಮಿತ್‌ ನಗಾಲ್‌ ಅವರು ಪುಣೆ ಚಾಲೆಂಜರ್‌ ಟೆನಿಸ್‌ ಟೂರ್ನಿಯಲ್ಲಿ ಭಾರತದ ಸವಾಲು ಎತ್ತಿ ಹಿಡಿಯಲಿದ್ದಾರೆ.

ಭಾರತದ 20ಕ್ಕೂ ಅಧಿಕ ಸಿಂಗಲ್ಸ್‌ ಆಟಗಾರರು  ಟೂರ್ನಿಯ ಮುಖ್ಯ ಸುತ್ತಿನಲ್ಲಿ ಕಣಕ್ಕಿಳಿಯುವ ಸಾಧ್ಯತೆ ಇದೆ.

ಪ್ರಜ್ಞೇಶ್‌ ಅವರ ತಂದೆ ಎಸ್‌.ಜಿ.ಪ್ರಭಾಕರನ್‌ ಶನಿವಾರ ನಿಧನರಾಗಿದ್ದರು. ತಂದೆಯ ಅಗಲಿಕೆಯ ನೋವಿನ ನಡುವೆಯೂ 29 ವರ್ಷದ ಆಟಗಾರ ಸಿಂಗಲ್ಸ್‌ನಲ್ಲಿ ಆಡಲು ತೀರ್ಮಾನಿಸಿದ್ದಾರೆ.

ವಿಶ್ವ ರ‍್ಯಾಂಕಿಂಗ್‌ನಲ್ಲಿ 94ನೇ ಸ್ಥಾನ ಹೊಂದಿರುವ ಪ್ರಜ್ಞೇಶ್‌, ಈ ಋತುವಿನಲ್ಲಿ ಒಂದೂ ಪ್ರಶಸ್ತಿ ಗೆದ್ದಿಲ್ಲ.

‘ಎಲ್ಲಾ ಪಂದ್ಯಗಳಲ್ಲೂ ಉತ್ತಮ ಸಾಮರ್ಥ್ಯ ತೋರಬೇಕೆಂಬುದು ತಂದೆಯ ಬಯಕೆ. ಹೀಗಾಗಿ ಅವರ ಅಗಲಿಕೆಯ ನಡುವೆಯೂ ಈ ಋತುವಿನ ಕೊನೆಯ ಟೂರ್ನಿ ಎನಿಸಿರುವ ಪುಣೆ ಚಾಲೆಂಜರ್‌ನಲ್ಲಿ ಆಡಲು ನಿರ್ಧರಿಸಿ ದ್ದೇನೆ. ಅಪ್ಪನ ಆಶೀರ್ವಾದ ನನ್ನ ಮೇಲೆ ಸದಾ ಇರುತ್ತದೆ’ ಎಂದು ಅಗ್ರಶ್ರೇಯಾಂಕದ ಆಟಗಾರ ಪ್ರಜ್ಞೇಶ್‌ ತಿಳಿಸಿದ್ದಾರೆ.

ವಿಶ್ವ ರ‍್ಯಾಂಕಿಂಗ್‌ನಲ್ಲಿ 129ನೇ ಸ್ಥಾನದಲ್ಲಿರುವ ನಗಾಲ್‌ಗೆ ಮೊದಲ ಸುತ್ತಿನಲ್ಲಿ ಬೈ ಸಿಕ್ಕಿದೆ. ಇನ್ನೊಬ್ಬ ಆಟಗಾರ ರಾಮಕುಮಾರ್‌ ರಾಮನಾಥನ್‌ ಅವರಿಗೂ ಆರಂಭಿಕ ಸುತ್ತಿನಲ್ಲಿ ಬೈ ಲಭಿಸಿದೆ.

ಶಶಿಕುಮಾರ್‌ ಮುಕುಂದ್‌ ಕೂಡ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿದ್ದಾರೆ. ಈ ವರ್ಷದ ಆಗಸ್ಟ್‌ನಲ್ಲಿ ನಡೆದಿದ್ದ ಬವೊಟೊವು ಟೂರ್ನಿಯಲ್ಲಿ ಶಶಿ, ಫೈನಲ್‌ ಪ್ರವೇಶಿಸಿದ್ದರು.

ಸಾಕೇತ್‌ ಮೈನೇನಿ ಕೂಡ ಸಿಂಗಲ್ಸ್‌ನಲ್ಲಿ ಭಾರತದ ಭರವಸೆಯಾಗಿದ್ದಾರೆ. ಅವರು ಮೊದಲ ಸುತ್ತಿನಲ್ಲಿ ಬೈ ಪಡೆದಿದ್ದಾರೆ. ಸ್ಥಳೀಯ ಆಟಗಾರ ಅರ್ಜುನ್‌ ಖಾಡೆ ಮತ್ತು 2018ರ ರಾಷ್ಟ್ರೀಯ ಚಾಂಪಿಯನ್‌ ಸಿದ್ದಾರ್ಥ್‌ ವಿಶ್ವಕರ್ಮ ಅವರ ಮೇಲೂ ನಿರೀಕ್ಷೆ ಇಡಲಾಗಿದೆ.

ಪ್ರತಿಕ್ರಿಯಿಸಿ (+)