ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಾನಂದ, ಎಂ.ಬಿ.ಪಾಟೀಲ 5ನೇ ಬಾರಿ ಗೆಲುವು

ಮುದ್ದೇಬಿಹಾಳದಲ್ಲಿ ಸಿ.ಎಸ್‌.ನಾಡಗೌಡಗೆ ಮುಖಭಂಗ; ಎ.ಎಸ್‌.ಪಾಟೀಲ ನಡಹಳ್ಳಿ ಹ್ಯಾಟ್ರಿಕ್ ಜಯಭೇರಿ
Last Updated 16 ಮೇ 2018, 9:13 IST
ಅಕ್ಷರ ಗಾತ್ರ

ವಿಜಯಪುರ: ವಿಜಯಪುರ ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳಿಂದ ಇಬ್ಬರು ಇದೇ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದರೆ; ಉಳಿದ ಆರು ಮಂದಿ ಹಳೆಯ ಹುಲಿಗಳೇ.

ದೇವರಹಿಪ್ಪರಗಿ ವಿಧಾನಸಭಾ ಕ್ಷೇತ್ರದಲ್ಲಿ ಗೆಲುವು ದಾಖಲಿಸಿದ ಸೋಮನಗೌಡ ಬಿ ಪಾಟೀಲ ಸಾಸನೂರ ಇದೇ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸುತ್ತಿದ್ದಾರೆ. ಇವರ ತಂದೆ ಬಿ.ಎಸ್‌.ಪಾಟೀಲ ಸಾಸನೂರ ಈ ಹಿಂದಿನ ಹೂವಿನ ಹಿಪ್ಪರಗಿ ಕ್ಷೇತ್ರ ಪ್ರತಿನಿಧಿಸಿ ಸಚಿವರೂ ಆಗಿದ್ದರು.

ನಾಗಠಾಣ ಮೀಸಲು ವಿಧಾನಸಭಾ ಕ್ಷೇತ್ರದಿಂದ ಗೆಲುವು ದಾಖಲಿಸಿದ ದೇವಾನಂದ ಫೂಲಸಿಂಗ್‌ ಚವ್ಹಾಣ ಸಹ ಇದೇ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸುತ್ತಿದ್ದಾರೆ. ಇವರಿಬ್ಬರೂ ಈ ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ಕ್ರಮವಾಗಿ ಬಿಜೆಪಿ, ಜೆಡಿಎಸ್‌ನಿಂದ ಸ್ಪರ್ಧಿಸಿ ಪರಾಭವಗೊಂಡಿದ್ದರು. ಇದೀಗ ಅನುಕಂಪದ ಅಲೆಯಲ್ಲಿ ಗೆಲುವಿನ ದಡ ಸೇರಿದ್ದಾರೆ.

ಬಸವನಬಾಗೇವಾಡಿ, ಬಬಲೇಶ್ವರ ದಿಂದ ಆಯ್ಕೆಯಾಗಿರುವ ಶಿವಾನಂದ ಪಾಟೀಲ, ಎಂ.ಬಿ.ಪಾಟೀಲ ಐದನೇ ಬಾರಿಗೆ ವಿಧಾನಸಭೆ ಪ್ರವೇಶಿಸಲು ಅಣಿಯಾಗಿದ್ದಾರೆ. ತಿಕೋಟಾ ವಿಧಾನಸಭಾ ಕ್ಷೇತ್ರದಿಂದ ಎರಡು ಬಾರಿ ಶಾಸಕರಾಗಿದ್ದ ಶಿವಾನಂದ, ಬಾಗೇವಾಡಿಯಿಂದ ಮೂರು ಬಾರಿ ಗೆಲುವು ದಾಖಲಿಸಿದ್ದಾರೆ.

ಹಿಂದಿನ ತಿಕೋಟಾ ವಿಧಾನಸಭಾ ಕ್ಷೇತ್ರವನ್ನು ತಮ್ಮ ತಂದೆ ಬಿ.ಎಂ.ಪಾಟೀಲರ ನಂತರ ಪ್ರತಿನಿಧಿಸಿದ್ದ ಎಂ.ಬಿ.ಪಾಟೀಲ, 2004ರಲ್ಲಿ ಮತ್ತೊಮ್ಮೆ ಶಾಸಕರಾಗಿ ಆಯ್ಕೆಯಾಗಿದ್ದರು. ಇದೀಗ ಬಬಲೇಶ್ವರದಿಂದ ದಾಖಲೆಯ ಮತ ಗಳಿಸುವ ಮೂಲಕ ಹ್ಯಾಟ್ರಿಕ್‌ ವಿಜಯಭೇರಿ ಬಾರಿಸಿ, ಐದನೇ ಬಾರಿಗೆ ವಿಧಾನಸಭೆ ಪ್ರವೇಶಕ್ಕೆ ಸಜ್ಜಾಗಿದ್ದಾರೆ.

ನಾಡಗೌಡ ಭದ್ರಕೋಟೆ ನುಚ್ಚುನೂರು: ರಾಜ್ಯ ಸರ್ಕಾರದ ನವದೆಹಲಿ ಪ್ರತಿನಿಧಿಯಾಗಿದ್ದ ಸಿ.ಎಸ್‌.ನಾಡಗೌಡರ ಎರಡು ದಶಕದ ಆಳ್ವಿಕೆಗೆ ಮುದ್ದೇಬಿಹಾಳ ಮತದಾರರು ಈ ಬಾರಿ ಮಂಗಳ ಹಾಡಿದ್ದಾರೆ. ‘ಕೈ’ ಭದ್ರಕೋಟೆ ಮೊದಲ ಬಾರಿಗೆ ನುಚ್ಚುನೂರಾಗಿದ್ದು, ಕಮಲ ಪ್ರಪ್ರಥಮವಾಗಿ ಅರಳಿದೆ.

ಸಾಮಾನ್ಯ ಜನರ ‘ಕೈ’ಗೆ ಸಿಗುತ್ತಿರಲಿಲ್ಲ. ಕ್ಷೇತ್ರದಲ್ಲಿ ವಾಸ್ತವ್ಯ ಹೂಡಲೇ ಇಲ್ಲ. ಈಚೆಗಿನ ದಿನಗಳಲ್ಲಿ ಕುಟುಂಬ ರಾಜಕಾರಣಕ್ಕೆ ಹೆಚ್ಚಿನ ಆದ್ಯತೆ ನೀಡಿದರು. ಬೆಂಬಲಿಗರ ಆಟಾಟೋಪ ಸಹಿಸದ ಮತದಾರ ಪ್ರಭು ಹೊಸಮುಖಕ್ಕೆ ಮನ್ನಣೆ ನೀಡಿದ್ದಾರೆ ಎಂಬ ವಿಶ್ಲೇಷಣೆ ರಾಜಕೀಯ ವಲಯದಲ್ಲಿ ಕೇಳಿ ಬಂದಿದೆ. ಅತಿಯಾದ ಆತ್ಮವಿಶ್ವಾಸವೂ ಸೋಲಿಗೆ ಪ್ರಮುಖ ಪಾತ್ರ ವಹಿಸಿದೆ ಎನ್ನಲಾಗಿದೆ.

ಪಕ್ಷಾಂತರಿ ಎಂಬ ಕಟು ಟೀಕೆಗೆ ಒಳಗಾದರೂ; ಮೋದಿ ಮೋಡಿಗೆ ಮುದ್ದೇಬಿಹಾಳದ ಮತದಾರ ಎ.ಎಸ್‌.ಪಾಟೀಲ ನಡಹಳ್ಳಿಗೆ ಒಲಿದಿದ್ದಾರೆ. ಒಂದೂವರೆ ದಶಕದ ಹಿಂದಿನಿಂದಲೂ ಕ್ಷೇತ್ರದ ಮೇಲೆ ಮಮಕಾರ ಹೊಂದಿದ್ದ ನಡಹಳ್ಳಿ, ತಂತ್ರಗಾರಿಕೆಗೆ ಮತದಾರ ಪ್ರಭು ಕರುಣೆ ತೋರಿದ್ದಾನೆ. ಬಿಜೆಪಿಯ ಅಸಮಾಧಾನದ ಆಸ್ಫೋಟವೂ ಮತದಾನದ ವೇಳೆಗೆ ತಣ್ಣಗಾಗಿದ್ದು, ಇಲ್ಲಿ ಗೆಲುವಿಗೆ ಪೂರಕವಾಗಿದೆ.

ಎ.ಎಸ್‌.ಪಾಟೀಲ ಇದೀಗ ಸತತ ಮೂರನೇ ಗೆಲುವು ದಾಖಲಿಸುವ ಮೂಲಕ ಹ್ಯಾಟ್ರಿಕ್‌ ವಿಜಯಭೇರಿ ಬಾರಿಸಿದ್ದಾರೆ.

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಇಲ್ಲಿ ಚುನಾವಣಾ ಪ್ರಚಾರ ನಡೆಸಿದ್ದು, ಬಿಜೆಪಿಗೆ ವರವಾಗಿ ಪರಿಣಮಿಸಿದೆ.

ಭಿನ್ನಮತಕ್ಕೆ ಸೊಪ್ಪು ಹಾಕದ ಯತ್ನಾಳ ವಿಜಯಿ: ಟಿಕೆಟ್‌ ಘೋಷಣೆಗೂ ಮುನ್ನಾದಿಂದ ಹಿಡಿದು ಮತದಾನ ಪ್ರಕ್ರಿಯೆಯವರೆಗೂ ಬಿಜೆಪಿ ಬಂಡಾ ಯದ ಕಿಡಿ ಹೊತ್ತಿದ್ದ ವಿಜಯಪುರ ನಗರ ವಿಧಾನಸಭಾ ಕ್ಷೇತ್ರದಲ್ಲಿ ಬಸನಗೌಡ ಪಾಟೀಲ ಯತ್ನಾಳ ವಿಜಯ ಪತಾಕೆ ಹಾರಿಸಿದ್ದಾರೆ.

ಆರಂಭದಿಂದಲೂ ಸ್ವಪಕ್ಷೀಯ ಎದುರಾಳಿಗಳನ್ನು ಸಾಮಾಜಿಕ ಜಾಲತಾಣ, ಪ್ರಚಾರ ಸಭೆಗಳಲ್ಲಿ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡು ಅಪಾಯವನ್ನು ಮೈಮೇಲೆ ಸ್ವತಃ ಆಹ್ವಾನಿಸಿಕೊಂಡಿದ್ದರೂ; ಯತ್ನಾಳ ಗೆಲುವು ಸಾಧಿಸಿದ್ದಾರೆ. ವಿರೋಧಿಗಳ ಕರಾಮತ್ತು ಏನು ನಡೆದಿಲ್ಲ. ಮತದಾರ ಮನ್ನಣೆಯನ್ನೂ ನೀಡಿಲ್ಲ.

ಕಾಂಗ್ರೆಸ್‌ ತನ್ನ ಹುರಿಯಾಳನ್ನು ಘೋಷಿಸಿದ ಬೆನ್ನಿಗೆ ಬಹುತೇಕ ಮುಸ್ಲಿಂ ಮುಖಂಡರೇ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಇದು ದೋಸ್ತಿಯ ಗೆಲುವಿಗೆ ಉಡುಗೊರೆ ಎಂದೇ ಟೀಕಿಸಿದ್ದರು. ನಿಕಟಪೂರ್ವ ಶಾಸಕ ಡಾ.ಮಕ್ಬೂಲ್ ಎಸ್.ಬಾಗವಾನ ಸೋನಿಯಾ ಗಾಂಧಿ ಸಮಾರಂಭ ಹೊರತು ಪಡಿಸಿದರೆ ಉಳಿದೆಡೆ ಕಾಣಿಸಿಕೊಳ್ಳದಿದ್ದುದುರ ಜತೆ, ಅಭ್ಯರ್ಥಿ ಬಗ್ಗೆ ಮುಸ್ಲಿಂ ಸಮಾಜದಲ್ಲೇ ತೀವ್ರ ಅಸಮಾಧಾನ ವ್ಯಕ್ತವಾಗಿದ್ದು, ಬಸನಗೌಡ ಪಾಟೀಲ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದೆ.

ವಿಜಯಪುರ ನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ, ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ರೋಡ್‌ ಷೋ ನಡೆಸಿದ್ದರೂ; ಕಮಲ ಪಾಳೆಯ ಇಲ್ಲಿ ವಿಜಯಿಯಾಗಿದೆ.

ಮೋದಿ–ಶಾ ಜೋಡಿಗೆ ಮಣಿಯದ ಬಬಲೇಶ್ವರ

ಧರ್ಮ ಕಾರಣದಿಂದ ರಾಜ್ಯದ ಪ್ರತಿಷ್ಠಿತ ಕ್ಷೇತ್ರಗಳಲ್ಲೊಂದಾದ ಬಬಲೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ, ಅಮಿತ್‌ ಶಾ ಮೋಡಿಯ ಮ್ಯಾಜಿಕ್‌ ನಡೆಯಲಿಲ್ಲ. ಬಿಜೆಪಿಯ ಇಬ್ಬರೂ ರಾಷ್ಟ್ರೀಯ ದಂಡ ನಾಯಕರು ಪ್ರಚಾರ ನಡೆಸಿದರೂ; ಬಬಲೇಶ್ವರ ಒಲಿದಿಲ್ಲ.

ಪಂಚಪೀಠಾಧೀಶ್ವರರ ಪೈಕಿ ಕಾಶಿಯ ಡಾ.ಚಂದ್ರಶೇಖರ ಶಿವಾಚಾರ್ಯರು, ಶ್ರೀಶೈಲದ ಚನ್ನಸಿದ್ದರಾಮ ಪಂಡಿತಾರಾಧ್ಯರು ಸೇರಿದಂತೆ ಸ್ಥಳೀಯ ವಿವಿಧ ಮಠದ ಹಲ ಶಿವಾಚಾರ್ಯರು ಚುನಾವಣಾ ಪ್ರಚಾರದ ನಡುವೆ ಬಬಲೇಶ್ವರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅನೇಕ ಹಳ್ಳಿಗಳಿಗೆ ಭೇಟಿ ನೀಡಿದರೂ ಎಂ.ಬಿ.ಪಾಟೀಲ ಗೆಲುವು ತಡೆಯಲಾಗಿಲ್ಲ.

ನೀರಾವರಿ, ಮತ ಕ್ಷೇತ್ರದಲ್ಲಿನ ಅಭಿವೃದ್ಧಿ ಜತೆ ಜತೆಯಲ್ಲೇ ಚುನಾವಣೆ ಪೂರ್ವದಿಂದಲೂ ಎಂ.ಬಿ.ಪಾಟೀಲ ಫೌಂಡೇಷನ್‌ನಿಂದ ನೀಡಿರುವ ಸಾಲು ಸಾಲು ಉಡುಗೊರೆಗಳು, ಮತದಾನಕ್ಕೂ ಮುನ್ನಾ ನಡೆದ ಕಾಣದ ‘ಕೈ’ ಕರಾಮತ್ತು ಎಂ.ಬಿ.ಪಾಟೀಲರನ್ನು ವಿಜಯದ ದಡದತ್ತ ಸುಲಲಿತವಾಗಿ ಕೊಂಡೊಯ್ದಿದೆ.

ಬಿಜೆಪಿಯ ಕೆಲ ಮುಖಂಡರು, ಪಾಲಿಕೆ ಸದಸ್ಯರು ಸೇರಿದಂತೆ ಇನ್ನಿತರ ಪ್ರಮುಖರು ಪರೋಕ್ಷವಾಗಿ ಎಂ.ಬಿ.ಪಾಟೀಲ ಪರ ಕೆಲಸ ಮಾಡಿದ್ದು, ಕಮಲ ಪಾಳೆಯ ತೀವ್ರ ಮುಖಭಂಗ ವಹಿಸಿದೆ. ಇಲ್ಲಿನ ಫಲಿತಾಂಶ ಸ್ವತಃ ಬಿಎಸ್‌ವೈಗೂ ಮುಜುಗರ ತಂದಿಟ್ಟಿದೆ ಎನ್ನಲಾಗಿದೆ.

**
ಮತದಾರರು ಮುಪ್ಪಿನ ಕಾಲದಲ್ಲೂ ನನ್ನ ಕೈ ಹಿಡಿದಿದ್ದಾರೆ. ಅವರಿಗೆ ನಾ ಕೃತಜ್ಞನಾಗಿರುವೆ. ನಾಲ್ಕು ಸತತ ಸೋಲಿನ ಬಳಿಕ ವಿಜಯಿಯಾಗಿದ್ದು ಸಂತಸವಾಗಿದೆ. ಜನರ ಋಣ ತೀರಿಸುವೆ
– ಎಂ.ಸಿ.ಮನಗೂಳಿ, ಸಿಂದಗಿ ಶಾಸಕ

**
ಅಭಿವೃದ್ಧಿಗೆ ಇಂಡಿಯ ಮತದಾರರು ಪಗಾರ ನೀಡಿದ್ದಾರೆ. ಜಾತಿ ರಾಜಕಾರಣಕ್ಕೆ ಮನ್ನಣೆ ನೀಡಿಲ್ಲ. ನಮ್ಮ ಕುಟುಂಬ ಚಿರಋಣಿಯಾಗಿರಲಿದೆ
– ಯಶವಂತರಾಯಗೌಡ ಪಾಟೀಲ, ಇಂಡಿ ಶಾಸಕ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT