ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ಓಪನ್ ಎಟಿಪಿ ಟೆನಿಸ್ ಟೂರ್ನಿ: ಸಾಕೇತ್‌–ರಾಮ್‌ಕುಮಾರ್‌ಗೆ ಪ್ರಶಸ್ತಿ

ಗೋಜೊ–ಸೆಂಗ್‌ ಫೈನಲ್ ಹಣಾಹಣಿ
Last Updated 12 ಫೆಬ್ರುವರಿ 2022, 14:39 IST
ಅಕ್ಷರ ಗಾತ್ರ

ಬೆಂಗಳೂರು: ಸಾಕೇತ್ ಮೈನೇನಿ ಮತ್ತು ರಾಮ್‌ಕುಮಾರ್ ರಾಮನಾಥನ್ ಜೋಡಿ ಬೆಂಗಳೂರು ಓಪನ್ ಎಟಿಪಿ ಟೆನಿಸ್ ಟೂರ್ನಿಯ ಡಬಲ್ಸ್ ವಿಭಾಗದ ಪ್ರಶಸ್ತಿ ಗೆದ್ದುಕೊಂಡರು. ಕರ್ನಾಟಕ ರಾಜ್ಯ ಲಾನ್ ಟೆನಿಸ್ ಸಂಸ್ಥೆಯ ಆವರಣದಲ್ಲಿ ಶನಿವಾರ ನಡೆದ ಫೈನಲ್ ಹಣಾಹಣಿಯಲ್ಲಿ ಫ್ರಾನ್ಸ್‌ನ ಹ್ಯೂಗೊ ಗ್ರೀನಿಯರ್ ಮತ್ತು ಅಲೆಕ್ಸಾಂಡರ್ ಮುಲ್ಲರ್ ವಿರುದ್ಧ ಅವರು6-3, 6-2ರಲ್ಲಿ ಜಯ ಗಳಿಸಿದರು.

ಸಿಂಗಲ್ಸ್ ವಿಭಾಗದಲ್ಲಿ ಕ್ರೊವೇಷಿಯಾದ ಬೋರ್ನೊ ಗೋಜೊ ಮತ್ತು ಚೀನಾ ಥೈಪೆಯ ಚುನ್ ಸಿನ್‌ ಸೆಂಗ್ ಪ್ರಶಸ್ತಿ ಸುತ್ತು ಪ್ರವೇಶಿಸಿದರು.

ಡಬಲ್ಸ್ ಫೈನಲ್‌ನಲ್ಲಿ ಶರವೇಗದ ಸರ್ವ್‌ಗಳನ್ನು ಸಿಡಿಸಿದ ರಾಮ್‌ಕುಮಾರ್‌ ಅವರಿಗೆ ಮೋಹಕ ಆಟದ ಮೂಲಕ ಸಾಕೇತ್ ಉತ್ತಮ ಸಹಕಾರ ನೀಡಿದರು. ಪಂದ್ಯದ ಆರಂಭದಲ್ಲಿ 4–1ರಿಂದ ಮುನ್ನಡೆದ ಭಾರತದ ಜೋಡಿ ನಂತರ ಸುಲಭವಾಗಿ ಜಯ ಗಳಿಸಿದರು. ದೈಹಿಕವಾಗಿ ದಣಿದಂತೆ ಕಂಡುಬಂದ ಮುಲ್ಲರ್‌ ರಿಟರ್ನ್ ಮಾಡಲು ಪ್ರಯಾಸಪಟ್ಟರು. ಗ್ರೀನಿಯರ್ ಅವರಿಂದಲೂ ಹೆಚ್ಚಿನ ಸಾಧನೆ ಆಗಲಿಲ್ಲ. ಹೀಗಾಗಿ ಎರಡನೇ ಸೆಟ್‌ನಲ್ಲಿ ಭಾರತದ ಆಟಗಾರರು ಮತ್ತಷ್ಟು ಸುಲಭವಾಗಿ ಗೆಲುವು ಸಾಧಿಸಿದರು.

ಪುಟಿದೆದ್ದ ಗೋಜೊ

ಸಿಂಗಲ್ಸ್ ವಿಭಾಗದ ಸೆಮಿಫೈನಲ್‌ನಲ್ಲಿ ಫ್ರಾನ್ಸ್‌ನ ಅಲೆಕ್ಸಾಂಡರ್ ಮುಲ್ಲರ್‌ ಎದುರು ಬೋರ್ನ ಗೋಜೊ ಮೊದಲ ಸೆಟ್‌ನಲ್ಲಿ ಸೋಲುಂಡರೂ ಚೇತರಿಸಿಕೊಂಡು4-6, 6-3, 6-0ರಲ್ಲಿ ಪಂದ್ಯ ಗೆದ್ದು ಪ್ರಶಸ್ತಿ ಸುತ್ತಿಗೆ ಲಗ್ಗೆ ಇರಿಸಿದರು. ಆರನೇ ಶ್ರೇಯಾಂಕದ ಫ್ರಾನ್ಸ್ ಆಟಗಾರ ಎನ್ಜೊ ಕೊಕಾರ್ಡ್‌ ಅವರನ್ನು 7-5, 6-4ರಲ್ಲಿ ಮಣಿಸಿದ ಚುನ್ ಸಿನ್ ಸೆಂಗ್ ಫೈನಲ್‌ ಪ್ರವೇಶಿಸಿದರು.

ಫಲಿತಾಂಶಗಳು: ಸಿಂಗಲ್ಸ್‌: ಕ್ರೊವೇಷ್ಯಾದ ಬೋರ್ನ ಗೋಜೊಗೆ ಫ್ರಾನ್ಸ್‌ನ ಅಲೆಕ್ಸಾಂಡರ್ ಮುಲ್ಲರ್ ಎದುರು 4-6, 6-3, 6-0ರಲ್ಲಿ ಜಯ; ಚೀನಾ ತೈಪೆಯ ಚುನ್ ಶಿನ್‌ ಸೆಂಗ್‌ಗೆ ಫ್ರಾನ್ಸ್‌ನ ಎನ್ಜೊ ಕೊಕಾರ್ಡ್‌ ವಿರುದ್ಧ 7-5, 6-4ರಲ್ಲಿ ಗೆಲುವು.

ಡಬಲ್ಸ್ ಫೈನಲ್‌: ಭಾರತದ ಸಾಕೇತ್ ಮೈನೇನಿ–ರಾಮ್‌ಕುಮಾರ್ ರಾಮನಾಥನ್‌ಗೆ ಫ್ರಾನ್ಸ್‌ನ ಹ್ಯೂಗೊ ಗ್ರೀನಿಯರ್‌–ಅಲೆಕ್ಸಾಂಡರ್ ಮುಲ್ಲರ್‌ ಎದುರು 6-3, 6-2ರಲ್ಲಿ ಗೆಲುವು.

ಅಲೆಕ್ಸಾಂಡ್‌ ವುಕಿಚ್‌ಗೆ ಅಗ್ರ ಶ್ರೇಯಾಂಕ

ಆಸ್ಟ್ರೇಲಿಯಾದ ಅಲೆಕ್ಸಾಂಡರ್ ವುಕಿಚ್‌ ಅವರು ಬೆಂಗಳೂರು ಓಪನ್ ಟೆನಿಸ್ ಟೂರ್ನಿಯ ಎರಡನೇ ಲೆಗ್‌ನಲ್ಲಿ ಅಗ್ರ ಶ್ರೆಯಾಂಕ ಗಳಿಸಿದ್ದಾರೆ. ಪಂದ್ಯಗಳು ಸೋಮವಾರ ಆರಂಭವಾಗಲಿದ್ದು ಅರ್ಹತಾ ಸುತ್ತಿನ ಹಣಾಹಣಿ ಭಾನುವಾರದಿಂದ ನಡೆಯಲಿದೆ.

ವಿಶ್ವ ರ‍್ಯಾಂಕಿಂಗ್‌ನಲ್ಲಿ 138ನೇ ಸ್ಥಾನದಲ್ಲಿರುವ 25 ವರ್ಷದ ವುಕಿಚ್ ಮೊದಲ ಸುತ್ತಿನಲ್ಲಿ ಭಾರತದ ಪ್ರಜ್ಞೇಶ್‌ ಗುಣೇಶ್ವರನ್ ಎದುರು ಆಡಲಿದ್ದಾರೆ. ರ‍್ಯಾಂಕಿಂಗ್‌ನಲ್ಲಿ ಭಾರತದ ಆಟಗಾರರ ಪೈಕಿ ಅಗ್ರ ಸ್ಥಾನದಲ್ಲಿರುವ ರಾಮ್‌ಕುಮಾರ್ ರಾಮನಾಥನ್ ಅವರಿಗೆ ಏಳನೇ ಶ್ರೇಯಾಂಕ ನೀಡಲಾಗಿದ್ದು ಮೊದಲ ಪಂದ್ಯದಲ್ಲಿ ಫ್ರಾನ್ಸ್‌ನ ಮಥಿಯಾಸ್ ಬೋಜ್‌ ಎದುರು ಸೆಣಸುವರು.

ಎರಡನೇ ಶ್ರೇಯಾಂಕವನ್ನು ಫ್ರಾನ್ಸ್‌ನ ಹ್ಯೂಗೊ ಗ್ರೀನಿಯರ್‌ ಅವರಿಗೆ ನೀಡಲಾಗಿದ್ದು ಎನ್ಜೊ ಕಾಕಡ್‌ ಅವರಿಗೆ ಮೂರನೇ ಶ್ರೇಯಾಂಕ ಲಭಿಸಿದೆ.

ಮಕ್ಕಳು ಅತಿಥಿಗಳು

ಶನಿವಾರ ನಡೆದ ಡ್ರಾ ಸಮಾರಂಭದಲ್ಲಿ ‘ಪುಟಾಣಿ’ ಟೆನಿಸ್ ಪಟುಗಳು ಅತಿಥಿಗಳಾಗಿದ್ದರು. 12 ವರ್ಷದೊಳಗಿನವರ ವಿಭಾಗದಲ್ಲಿ ರಾಜ್ಯದ ಅಗ್ರಸ್ಥಾನದಲ್ಲಿರುವ ಸೃಷ್ಟಿ ಕಿರಣ್‌, ಅಯ್ಲಿನ್ ಮಿರಿಯಮ್‌, ಸಂಜಯ್‌ ಗಿರೀಶ್‌ ಕುಮರ್ ಮತ್ತು ಇಶಾನ್‌ ಬಾದಾಮಿ ಅವರು ಸಿಂಗಲ್ಸ್ ಮತ್ತು ಡಬಲ್ಸ್‌ ವಿಭಾಗದ ‘ಕಾಯಿನ್‌’ ಎತ್ತಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT