ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೊಕೊವಿಚ್‌ ‘ಲಸಿಕೆ’ ಪ್ರಕರಣ ರಾಜಕೀಯ ತಿರುವು

Last Updated 7 ಜನವರಿ 2022, 4:54 IST
ಅಕ್ಷರ ಗಾತ್ರ

ಬೆಲ್‌ಗ್ರೇಡ್‌: ಲಸಿಕೆ ಹಾಕಿಸಿಕೊಳ್ಳಲು ನಿರಾಕರಿಸಿದ ಟೆನಿಸ್ ಆಟಗಾರ ನೊವಾಕ್ ಜೊಕೊವಿಚ್‌ ಅವರಿಗೆ ಆಸ್ಟ್ರೇಲಿಯನ್ ಓಪನ್ ಟೂರ್ನಿಯಲ್ಲಿ ಆಡಲು ಅವಕಾಶ ನೀಡಿದ ಬೆನ್ನಲ್ಲೇ ಉಂಟಾದ ವಿವಾದವು ಈಗ ರಾಜಕೀಯ ಆರೋಪ–ಪ್ರತ್ಯಾರೋಪಗಳಿಗೂ ಕಾರಣವಾಗಿದೆ.

ಇದೇ 17ರಿಂದ ನಡೆಯಲಿರುವ ಆಸ್ಟ್ರೇಲಿಯನ್ ಓಪನ್ ಟೂರ್ನಿಯಲ್ಲಿ ಪಾಲ್ಗೊಳ್ಳುವವರು ಲಸಿಕೆ ಹಾಕಿಸಿಕೊಳ್ಳುವುದು ಕಡ್ಡಾಯ ಮಾಡಲಾಗಿತ್ತು. ಆದರೆ ಜೊಕೊವಿಚ್‌ ಇದಕ್ಕೆ ಒಪ್ಪಿರಲಿಲ್ಲ. ಆದ್ದರಿಂದ ಅವರು ಟೂರ್ನಿಯಲ್ಲಿ ಪಾಲ್ಗೊಳ್ಳುವುದು ಅನುಮಾನವಾಗಿತ್ತು.

ಆದರೆ ತಜ್ಞರನ್ನು ಒಳಗೊಂಡ ತಂಡವೊಂದರ ಶಿಫಾರಸಿನ ಮೇರೆಗೆ ಲಸಿಕೆ ಹಾಕಿಸಿಕೊಳ್ಳದೆಯೇ ಟೂರ್ನಿಯಲ್ಲಿ ಆಡಲು ಅವರಿಗೆ ಅವಕಾಶ ನೀಡಲಾಗಿತ್ತು. ಆದರೆ ಆಸ್ಟ್ರೇಲಿಯಾ ಸರ್ಕಾರ ಅವರ ವಿಸಾವನ್ನುಯ ತಡೆಹಿಡಿದು ಪ್ರವೇಶ ನಿರಾಕರಿಸಿತ್ತು. ಈ ಹಿನ್ನೆಲೆಯಲ್ಲಿ ನ್ಯಾಯಾಲಯದ ಮೆಟ್ಟಿಲೇರಲು ಜೊಕೊವಿಚ್ ಗುರುವಾರ ನಿರ್ಧರಿಸಿದ್ದರು.

ಈ ನಡುವೆ ಸರ್ಬಿಯಾ ಅಧ್ಯಕ್ಷ ಅಲೆಕ್ಸಾಂಡರ್ ವುಸಿಕ್ ಪ್ರತಿಕ್ರಿಯಿಸಿ ರಾಜಕೀಯ ಪ್ರೇರಿತ ದುರುದ್ದೇಶದ ಬಲಿಪಶು ಜೊಕೊವಿಚ್ ಎಂದು ಆರೋಪಿಸಿದ್ದಾರೆ. ಬೆಲ್‌ಗ್ರೇಡ್‌ನಲ್ಲಿ ಜೊಕೊವಿಚ್ ಅಭಿಮಾನಿಗಳು ಬೃಹತ್ ರ‍್ಯಾಲಿ ಸಂಘಟಿಸಿ ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ. ಜೊಕೊವಿಚ್ ಅವರ ತಂದೆ ಇದಕ್ಕೆ ನೇತೃತ್ವ ನೀಡಿದ್ದರು.

ಮೆಲ್ಬರ್ನ್‌ ವಿಮಾನ್ ನಿಲ್ದಾಣದಲ್ಲಿ ಬಂದಿಳಿದ ಜೊಕೊವಿಚ್ ಅವರನ್ನು ವಶಕ್ಕೆ ಪಡೆದುಕೊಂಡಿದ್ದ ಪೊಲೀಸರು ಜೊಕೊವಿಚ್ ಬಳಿ ಎರಡು ಡೋಸ್‌ ಲಸಿಕೆ ಹಾಕಿಸಿಕೊಂಡಿದ್ದಕ್ಕೆ ತಕ್ಕ ದಾಖಲೆಗಳು ಇರಲಿಲ್ಲ ಎಂದು ಪ್ರತಿಪಾದಿಸಿದ್ದಾರೆ.

ಕೈದಿಯಂತೆ ನೋಡಿಕೊಳ್ಳುತ್ತಿದ್ದಾರೆ

ತಮ್ಮ ಮಗನನ್ನು ಆಸ್ಟ್ರೇಲಿಯಾ ಸರ್ಕಾರ ಕೈದಿಯಂತೆ ನೋಡಿಕೊಳ್ಳುತ್ತಿದೆ. ಇದು ಸರಿಯಲ್ಲ ಎಂದು ಜೊಕೊವಿಚ್ ಅವರ ತಾಯಿ ದೂರಿದ್ದಾರೆ. ‘ಜೊಕೊವಿಚ್‌ನನ್ನು ಇರಿಸಿರುವ ಜಾಗ ಸೂಕ್ತವಲ್ಲ. ಅದರಿಂದ ಆತನಿಗೂ ನಮಗೂ ಬೇಸರವಾಗಿದೆ’ ಎಂದು ಅವರು ಹೇಳಿದ್ದಾರೆ.

ಈ ನಡುವೆ ಜೊಕೊವಿಚ್ ಅವರ ಪರವಾಗಿ ಮಾತನಾಡಿರುವ ಸ್ಪೇನ್‌ನ ರಫೆಲ್ ನಡಾಲ್ ‘ಜೊಕೊವಿಚ್‌ಗೆ ನಿಯಮಗಳ ಬಗ್ಗೆ ಅರಿವಿದೆ. ಅವರಿಗೆ ಯಾವುದೇ ಸಮಸ್ಯೆ ಇಲ್ಲದೆ ಆಡುವುದು ಹೇಗೆ ಎಂದು ಗೊತ್ತು’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT