ಸೋಮವಾರ, ಆಗಸ್ಟ್ 15, 2022
22 °C
ಬಾಲ್ಯದ ಗೆಳೆಯ ಆ್ಯಂಡ್ರೆ ರುಬ್ಲೆವ್ ವಿರುದ್ಧ ಗೆಲುವು ಸಾಧಿಸಿದ ಮೆಡ್ವೆಡೆವ್; ಸ್ವೆಟಾನಾ ಪಿರಿಂಕೋವಗೆ ಸೋಲು

ಅಮೆರಿಕ ಓಪನ್: ಸೆರೆನಾ, ಥೀಮ್ ಸೆಮಿಗೆ

ಎಎಫ್‌ಪಿ Updated:

ಅಕ್ಷರ ಗಾತ್ರ : | |

Prajavani

ನ್ಯೂಯಾರ್ಕ್‌: ಬಲ್ಗೇರಿಯಾದ ಸ್ವೆಟಾನಾ ಪಿರಿಂಕೋವ ಅವರ ಸವಾಲನ್ನು ಮೆಟ್ಟಿನಿಂತ ಸ್ಥಳೀಯ ಆಟಗಾರ್ತಿ ಸೆರೆನಾ ವಿಲಿಯಮ್ಸ್ ಅಮೆರಿಕ ಓಪನ್ ಟೆನಿಸ್ ಟೂರ್ನಿಯ ಮಹಿಳೆಯರ ಸಿಂಗಲ್ಸ್ ವಿಭಾಗದ ಸೆಮಿಫೈನಲ್ ಪ್ರವೇಶಿಸಿದರು. ಪುರುಷರ ವಿಭಾಗದಲ್ಲಿ ಆಸ್ಟ್ರಿಯಾದ ಡಾಮಿನಿಕ್ ಥೀಮ್ ಮತ್ತು ರಷ್ಯಾದ ಡ್ಯಾನಿಲ್ ಮೆಡ್ವೆಡೆವ್ ನಾಲ್ಕರ ಘಟ್ಟಕ್ಕೆ ಲಗ್ಗೆ ಇರಿಸಿದರು.

ಆರ್ಥರ್ ಆಶ್ ಕ್ರೀಡಾಂಗಣದಲ್ಲಿ ಬುಧವಾರ ರಾತ್ರಿ ನಡೆದ ಪಂದ್ಯದಲ್ಲಿ ಮೂರನೇ ಶ್ರೇಯಾಂಕಿತ ಆಟಗಾರ್ತಿ ಸೆರೆನಾ, ಬಲ್ಗೇರಿಯಾ ಆಟಗಾರ್ತಿಯನ್ನು 4–6, 6–3, 6–2ರಲ್ಲಿ ಮಣಿಸಿದರು. 24ನೇ ಗ್ರ್ಯಾನ್‌ಸ್ಲಾಂ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿರುವ ಅವರು ಶುಕ್ರವಾರ ನಡೆಯಲಿರುವ ಸೆಮಿಫೈನಲ್‌ನಲ್ಲಿ ಪಂದ್ಯದಲ್ಲಿ ವಿಕ್ಟೋರಿಯ ಆಜರೆಂಕಾ ಎದುರು ಸೆಣಸುವರು.

ಸೆರೆನಾ ಅವರ ಆರಂಭ ಚೆನ್ನಾಗಿರಲಿಲ್ಲ. ಮೊದಲ ಸೆಟ್‌ನಲ್ಲಿ 4–6ರಲ್ಲಿ ಅವರು ಸೋಲು ಕಂಡರು. ಆದರೆ ಛಲದಿಂದ ಕಾದಾಡಿ ಮುಂದಿನ ಎರಡು ಸೆಟ್‌ಗಳನ್ನು ಸುಲಭವಾಗಿ ಗೆದ್ದುಕೊಂಡರು. ಎರಡು ತಾಸು 12 ನಿಮಿಷಗಳ ಹೋರಾಟದ ನಂತರ ಮಾತನಾಡಿದ ಅವರು ’ಹಿನ್ನಡೆ ಅನುಭವಿಸಿದಾಗ ಆತಂಕಪಡಲಿಲ್ಲ. ಹೀಗಾಗಿ ಮುಂದಿನ ಹಾದಿ ಸಲುಭವಾಯಿತು‘ ಎಂದರು.

ಪಂದ್ಯದಲ್ಲಿ ಸೆರೆನಾ 20 ಏಸ್ ಸಿಡಿಸಿದರು. ಇದು, ಎಂಟು ವರ್ಷಗಳಲ್ಲಿ ಅವರು ಪಂದ್ಯವೊಂದರಲ್ಲಿ ಸಿಡಿಸಿದ ಗರಿಷ್ಠ ಸಂಖ್ಯೆ. ಟೂರ್ನಿಯಲ್ಲಿ ಈ ವರೆಗೆ ಒಟ್ಟು 64 ಏಸ್‌ಗಳು ಅವರ ಖಾತೆಗೆ ಸೇರಿವೆ. ಅಮೆರಿಕ ಓಪನ್‌ನ ಮಹಿಳೆಯರ ಸಿಂಗಲ್ಸ್‌ನಲ್ಲಿ ಅತಿ ಹೆಚ್ಚು ಏಸ್ (70) ಸಿಡಿಸಿದ ದಾಖಲೆ ಅವರ ಹೆಸರಿನಲ್ಲೇ ಇದೆ. 1999ರಲ್ಲಿ ಅವರು ಈ ಸಾಧನೆ ಮಾಡಿದ್ದರು.

ಮಹಿಳೆಯರ ಸಿಂಗಲ್ಸ್‌ನ ಮತ್ತೊಂದು ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ವಿಕ್ಟೋರಿಯಾ ಅಜರೆಂಕಾ 6–0, 6–1ರಲ್ಲಿ ಬೆಲ್ಜಿಯಂನ ಎಲಿಸ್ ಮರ್ಟೆನ್ಸ್ ಅವರನ್ನು ಮಣಿಸಿದರು. ಪಂದ್ಯ ಕೇವಲ ಒಂದು ತಾಸು 13 ನಿಮಿಷಗಳಲ್ಲಿ ಮುಗಿಯಿತು. 2012 ಮತ್ತು 2013ರ ಅಮೆರಿಕ ಓಪನ್‌ ಟೂರ್ನಿಯ ಫೈನಲ್‌ನಲ್ಲಿ ಸೆರೆನಾ ಅವರು ಅಜರೆಂಕಾ ವಿರುದ್ಧ ಗೆಲುವು ಸಾಧಿಸಿದ್ದರು.  

ಬಾಲ್ಯದ ಗೆಳೆಯನನ್ನು ಮಣಿಸಿದ ಮೆಡ್ವೆಡೆವ್

ಮೆಡ್ವೆಡೆವ್, ತಮ್ಮ ಬಾಲ್ಯದ ಗೆಳೆಯ ಆ್ಯಂಡ್ರೆ ರುಬ್ಲೆವ್ ಅವರನ್ನು 7–6 (8/6), 6–3, 7–6(7/5)ರಲ್ಲಿ ಮಣಿಸಿದರು. 22 ವರ್ಷದ ರುಬ್ಲೆವ್ ಆರಂಭದಲ್ಲಿ ಅಮೋಘ ಆಟವಾಡಿ 5–1ರ ಮುನ್ನಡೆ ಗಳಿಸಿದರು. ಆದರೆ ಕಳೆದ ವರ್ಷದ ರನ್ನರ್ ಅಪ್ ಮೆಡ್ವೆಡೆವ್ ಪಟ್ಟು ಬಿಡಲಿಲ್ಲ. ಶಕ್ತಿಶಾಲಿ ಏಸ್ ಸಿಡಿಸಿದ ಅವರು 8–6ರಲ್ಲಿ ಮುನ್ನಡೆದರು. ನಂತರವೂ ಪಂದ್ಯ ರೋಚಕವಾಯಿತು. ಟೈಬ್ರೇಕರ್‌ನಲ್ಲಿ ಮೊದಲ ಸೆಟ್‌ ಗೆದ್ದ ಮೆಡ್ವೆಡೆವ್ ಎರಡನೇ ಸೆಟ್‌ನಲ್ಲಿ ಸುಲಭ ಗೆಲುವು ಸಾಧಿಸಿದರು. ಆದರೆ ನಿರ್ಣಾಯಕ ಸೆಟ್‌ನಲ್ಲಿ ಮತ್ತೆ ಎದುರಾಳಿಯಿಂದ ಪ್ರಬಲ ಪೈಪೋಟಿ ಕಂಡುಬಂತು. ಈ ಸೆಟ್ ಕೂಡ ಟೈಬ್ರೇಕರ್‌ನಲ್ಲಿ ಕೊನೆಗೊಂಡಿತು.

ಡಾಮಿನಿಕ್ ಥೀಮ್ ಆಸ್ಟ್ರೇಲಿಯಾದ ಅಲೆಕ್ಸ್ ಡಿ ಮಿನೌರ್ ವಿರುದ್ಧ ಎರಡು ತಾಸು ನಾಲ್ಕು ನಿಮಿಷ ನಡೆದ ಪಂದ್ಯದಲ್ಲಿ 6–1, 6–2, 6–4ರಲ್ಲಿ ಜಯ ಗಳಿಸಿದರು. ಅವರು ಭರ್ಜರಿ 11 ಏಸ್‌ಗಳನ್ನು ಸಿಡಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು