ಸೆರೆನಾಗೆ ಸೋಲು: ಕುತೂಹಲ ಮೂಡಿಸಿದ ನಡಾಲ್‌, ಸ್ಟೆಫನೋಸ್ ಕದನ

7
ಆಸ್ಟ್ರೇಲಿಯಾ ಓಪನ್ ಟೆನಿಸ್ ಟೂರ್ನಿ: ಜೊಕೊವಿಚ್‌, ಲೂಕಾಸ್‌, ಪೆಟ್ರಾ ಕ್ವಿಟೋವ ಸೆಮಿಫೈನಲ್‌ಗೆ ಲಗ್ಗೆ

ಸೆರೆನಾಗೆ ಸೋಲು: ಕುತೂಹಲ ಮೂಡಿಸಿದ ನಡಾಲ್‌, ಸ್ಟೆಫನೋಸ್ ಕದನ

Published:
Updated:
Prajavani

ಮೆಲ್ಬರ್ನ್‌: ಹಾಲಿ ಚಾಂಪಿಯನ್‌ ರೋಜರ್ ಫೆಡರರ್‌ ಅವರನ್ನು ಸೋಲಿಸಿ ಗಮನ ಸೆಳೆದಿದ್ದ ಗ್ರೀಸ್‌ನ ಸ್ಟೆಫನೋಸ್‌ ಸಿಸಿಪಸ್‌ ಆಸ್ಟ್ರೇಲಿಯಾ ಓಪನ್ ಟೆನಿಸ್ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಗುರುವಾರ ಸ್ಪೇನ್‌ನ ರಫೆಲ್ ನಡಾಲ್ ಎದುರು ಸೆಣಸಲಿದ್ದಾರೆ.

ಆಸ್ಟ್ರೇಲಿಯಾ ಓಪನ್‌ನಲ್ಲಿ ಐದನೇ ಬಾರಿ ಪ್ರಶಸ್ತಿ ಸುತ್ತು ಪ್ರವೇಶಿಸುವ ಹಂಬದಲ್ಲಿರುವ ನಡಾಲ್ ಮತ್ತು ಯುವ ಆಟಗಾರ ಸಿಸಿಪಸ್‌ ನಡುವಿನ ಹಣಾಹಣಿ ಕುತೂಹಲ ಕೆರಳಿಸಿದೆ. ಮಹಿಳೆಯರ ವಿಭಾಗದ ಸೆಮಿಫೈನಲ್ಲಿ ಕಣಕ್ಕೆ ಇಳಿಯಲಿರುವ ಚೆಕ್ ಗಣರಾಜ್ಯದ ಪೆಟ್ರಾ ಕ್ವಿಟೋವ ಸತತ 10ನೇ ಜಯದ ಮೂಲಕ ಫೈನಲ್‌ ಪ್ರವೇಶಿಸುವ ಭರವಸೆಯಲ್ಲಿದ್ದಾರೆ.

ನಿಶಿಕೋರಿಗೆ ‘ಗಾಯ’: ಪುರುಷರ ವಿಭಾಗದ ಕ್ವಾರ್ಟರ್ ಫೈನಲ್‌ನಲ್ಲಿ ಜಪಾನ್‌ನ ಕೀ ನಿಶಿಕೋರಿ ಬುಧವಾರ ನಿರಾಸೆಗೆ ಒಳಗಾದರು. ಸರ್ಬಿಯಾದ ನೊವಾಕ್ ಜೊಕೊವಿಚ್‌ ಎದುರಿನ ಪಂದ್ಯದಲ್ಲಿ ಅವರು ತೊಡೆಯ ಸ್ನಾಯು ಸೆಳೆತಕ್ಕೆ ಒಳಗಾಗಿ ನಿವೃತ್ತರಾದರು. ಈ ಸಂದರ್ಭದಲ್ಲಿ ನೊವಾಕ್‌ 6–1, 4–1ರ ಮುನ್ನಡೆ ಸಾಧಿಸಿದ್ದರು.

ದಾಖಲೆಯ ಏಳನೇ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ನೊವಾಕ್‌ ಮುಂದಿನ ಪಂದ್ಯದಲ್ಲಿ 28ನೇ ಶ್ರೇಯಾಂಕದ ಫ್ರಾನ್ಸ್‌ನ ಲೂಕಾಸ್ ಪೌಲಿ ಅವರನ್ನು ಶುಕ್ರವಾರ ಎದುರಿಸುವರು. ಕ್ವಾರ್ಟರ್ ಫೈನಲ್‌ನಲ್ಲಿ ಲೂಕಾಸ್, ಕೆನಡಾದ ಮಿಲಾಸ್ ರಾನಿಕ್ ವಿರುದ್ಧ 7-6 (7/4), 6-3, 6-7 (2/7), 6-4ರಿಂದ ಗೆದ್ದರು.

ಲುಕಾಸ್‌ ಮೊದಲ ಸೆಟ್‌ನಲ್ಲಿ ಪ್ರಯಾಸದ ಜಯ ಸಾಧಿಸಿದರು. ಎರಡನೇ ಸೆಟ್‌ನಲ್ಲಿ ಸುಲಭವಾಗಿ ಗೆದ್ದರೂ ಮೂರನೇ ಸೆಟ್‌ನಲ್ಲಿ ಪ್ರಬಲ ಪೈಪೋಟಿ ನೀಡಿದ ಮಿಲಾಸ್‌ ಪಂದ್ಯದ ರೋಚಕತೆಯನ್ನು ಹೆಚ್ಚಿಸಿದರು. ಚೇತರಿಸಿಕೊಂಡ ಲೂಕಾಸ್‌ ನಿರ್ಣಾಯಕ ಸೆಟ್‌ನಲ್ಲಿ ಗೆದ್ದು ಸಂಭ್ರಮಿಸಿದರು. 24 ವರ್ಷದ ಲೂಕಾಸ್‌ ಮೆಲ್ಬರ್ನ್‌ ಪಾರ್ಕ್‌ ಅಂಗಣದಲ್ಲಿ ಪಂದ್ಯವೊಂದನ್ನು ಗೆದ್ದಿರುವುದು ಇದೇ ಮೊದಲು. ತಮ್ಮ ಸಾಧನೆಗೆ ಹೊಸ ಕೋಚ್ ಅಮೆಲಿ ಮೌರೆಸ್ಮೊ ಕಾರಣ ಎಂದು ಲೂಕಾಸ್ ಹೇಳಿಕೊಂಡಿದ್ದಾರೆ.

ಸೆರೆನಾ ವಿಲಿಯಮ್ಸ್‌ಗೆ ನಿರಾಸೆ: ವರ್ಷದ ಮೊದಲ ಗ್ರ್ಯಾನ್‌ ಸ್ಲಾಮ್ ಟೂರ್ನಿಯ 10ನೇ ದಿನವಾದ ಬುಧವಾರ ಮೆಲ್ಬರ್ನ್ ಪಾರ್ಕ್‌ ಅಚ್ಚರಿಗೆ ಫಲಿತಾಂಶಕ್ಕೆ ಸಾಕ್ಷಿಯಾಯಿತು. 24ನೇ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿ ಗೆದ್ದು ದಾಖಲೆ ಸರಿಗಟ್ಟುವ ಕನಸು ಹೊತ್ತಿದ್ದ ಅಮೆರಿಕದ ಸೆರೆನಾ ವಿಲಿಯಮ್ಸ್ ನಿರಾಸೆ ಅನುಭವಿಸಿದರು.

ಏಳನೇ ಶ್ರೇಯಾಂಕದ, ಚೆಕ್ ಗಣರಾಜ್ಯದ ಕರೊಲಿನಾ ಪ್ಲಿಸ್ಕೋವ 6-4, 4-6, 7-5ರಿಂದ ಸೆರೆನಾ ಅವರನ್ನು ಮಣಿಸಿ ಸೆಮಿಫೈನಲ್‌ಗೆ ಪ್ರವೇಶಿಸಿದರು. ನಾಲ್ಕರ ಘಟ್ಟದಲ್ಲಿ ಅವರು ಜಪಾನ್‌ನ ನವೊಮೊ ಒಸಾಕ ಎದುರಾಳಿ. ಗಾಯದ ಸಮಸ್ಯೆ ಲೆಕ್ಕಿಸದೆ ಆಡಿದ ಉಕ್ರೇನ್‌ನ ಎಲಿನಾ ಸ್ವಿಟೊಲಿನಾ ಅವರನ್ನು ನವೊಮಿ 6–4, 6–1ರಿಂದ ಎಂಟರ ಘಟ್ಟದಲ್ಲಿ ಮಣಿಸಿದರು.

ಮೊದಲ ಸೆಟ್‌ನಲ್ಲಿ ಸೋತರೂ ತಿರುಗೇಟು ನೀಡಿದ್ದ ಸೆರೆನಾ ಗೆಲುವಿನತ್ತ ಹೆಜ್ಜೆ ಇಟ್ಟಿದ್ದರು. ಆದರೆ ಕೊನೆಯ ಕ್ಷಣದಲ್ಲಿ ಮಾಡಿದ ಸ್ವಯಂ ತಪ್ಪುಗಳು, ಅವರು ಟೂರ್ನಿಯಿಂದಲೇ ಹೊರಬೀಳುವಂತೆ ಮಾಡಿದವು. ನಿರ್ಣಾಯಕ ಮೂರನೇ ಸೆಟ್‌ನಲ್ಲಿ 5–1ರ ಮುನ್ನಡೆ ಸಾಧಿಸಿದ್ದ ಅವರು ನಂತರ ಎದುರಾಳಿಗೆ ಸುಲಭವಾಗಿ ಮ್ಯಾಚ್ ಪಾಯಿಂಟ್‌ಗಳನ್ನು ಬಿಟ್ಟುಕೊಟ್ಟು ಕೈಸುಟ್ಟುಕೊಂಡರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !