ಸೆರೆನಾ–ಒಸಾಕ ಕದನ ಕುತೂಹಲ

7
ಅಮೆರಿಕ ಓಪನ್ ಟೆನಿಸ್ ಟೂರ್ನಿ: ನಡಾಲ್‌–ಡೆಲ್‌ ಪೊಟ್ರೊ, ಜೊಕೊವಿಚ್‌–ನಿಶಿಕೋರಿ ಹಣಾಹಣಿ

ಸೆರೆನಾ–ಒಸಾಕ ಕದನ ಕುತೂಹಲ

Published:
Updated:
Deccan Herald

ನ್ಯೂಯಾರ್ಕ್‌: ಆರು ಬಾರಿಯ ಚಾಂಪಿಯನ್‌ ಸೆರೆನಾ ವಿಲಿಯಮ್ಸ್ ಒಂದು ಕಡೆ; ಮೊದಲ ಬಾರಿ ಗ್ರ್ಯಾನ್‌ಸ್ಲಾಂ ಟೂರ್ನಿಯೊಂದರ ಫೈನಲ್‌ ಪ್ರವೇಶಿಸಿರುವ ನವೊಮಿ ಒಸಾಕ ಮತ್ತೊಂದು ಕಡೆ. ಇವರಿಬ್ಬರ ನಡುವಿನ ಫೈನಲ್‌ ಕದನಕ್ಕೆ ಅಮೆರಿಕ ಓಪನ್ ಟೆನಿಸ್ ಟೂರ್ನಿಯಲ್ಲಿ ವೇದಿಕೆ ಸಜ್ಜಾಗಿದೆ.

ನವೊಮಿ ಒಸಾಕ ಅವರು ಬುಧವಾರ ರಾತ್ರಿ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಗೆದ್ದು ಗ್ರ್ಯಾನ್‌ಸ್ಲಾಂ ಟೂರ್ನಿಯೊಂದರ ಫೈನಲ್‌ ಪ್ರವೇಶಿಸಿದ ಜಪಾನ್‌ನ ಮೊದಲ ಆಟಗಾರ್ತಿ ಎಂಬ ಹೆಗ್ಗಳಿಕೆ ತಮ್ಮದಾಗಿಸಿಕೊಂಡಿದ್ದರು.

ಗುರುವಾರ ರಾತ್ರಿ ನಡೆದ ಮತ್ತೊಂದು ಸೆಮಿಫೈನಲ್‌ನಲ್ಲಿ ಸೆರೆನಾ ವಿಲಿಯಮ್ಸ್‌ ಅವರು ಲಾಟ್ವಿಯಾದ ಅನಸ್ತೇಸಿಜಾ ಸೆವಸ್ತೋವ ಅವರನ್ನು 6–3, 6–0ಯಿಂದ ಮಣಿಸಿ ಫೈನಲ್‌ಗೆ ಲಗ್ಗೆ ಇರಿಸಿದರು. ಇದು ಅಮೆರಿಕ ಓಪನ್‌ನಲ್ಲಿ ಸೆರೆನಾ ಅವರಿಗೆ ಒಂಬತ್ತನೇ ಫೈನಲ್‌.

23ನೇ ಶ್ರೇಯಾಂಕದ ಸೆರೆನಾ 23ನೇ ಗ್ರ್ಯಾನ್‌ಸ್ಲಾಂ ಕಿರೀಟದ ಕನಸು ಹೊತ್ತು ಟೂರ್ನಿಯಲ್ಲಿ ಅಂಗಣಕ್ಕೆ ಇಳಿದಿದ್ದಾರೆ. ಎಲ್ಲ ಹಂತದಲ್ಲೂ ಅಮೋಘ ಆಟವಾಡಿದ್ದಾರೆ. 19ನೇ ಶ್ರೇಯಾಂಕದ ಸೆವಸ್ತೋವ ಅವರನ್ನು ಸೆಮಿಫೈನಲ್‌ನಲ್ಲಿ ಸೆರೆನಾ ಕೇವಲ 66 ನಿಮಿಷಗಳಲ್ಲಿ ಮಣಿಸಿದರು. ಪಂದ್ಯದ ನಂತರ ಅವರು ‘ಇದು ಅಮೋಘ ಜಯ’ ಎಂದು ಉದ್ಗರಿಸಿದರು.  2015 ಮತ್ತು 2016ರ ಅಮೆರಿಕ ಓಪನ್ ಟೂರ್ನಿಯ ಸೆಮಿಫೈನಲ್‌ ಪಂದ್ಯಗಳಲ್ಲಿ ಸೆರೆನಾ ಸೋತಿದ್ದರು. ಕಳೆದ ವರ್ಷ ಈ ಟೂರ್ನಿಯ ಸಂದರ್ಭದಲ್ಲಿ ಅವರು ಗರ್ಭಿಣಿಯಾಗಿದ್ದರು.

‘ಸೆರೆನಾ ವಿಲಿಯಮ್ಸ್ ಎದುರು ಫೈನಲ್‌ನಲ್ಲಿ ಆಡುವುದು ರೋಮಾಂಚಕಾರಿ ಅನುಭವ ಆಗಲಿದೆ. ಆ ಕ್ಷಣಕ್ಕಾಗಿ ನಾನು ಕಾತರದಿಂದ ಕಾಯುತ್ತಿದ್ದೇನೆ’ ಎಂದು ಒಸಾಕ ಹೇಳಿದರು. ಪಂದ್ಯ ಭಾನುವಾರ ನಡೆಯಲಿದೆ.

ನಡಾಲ್‌ಗೆ ಡೆಲ್‌ ಪೊಟ್ರೊ ಸವಾಲು: ಶನಿವಾರ ರಾತ್ರಿ ನಡೆಯಲಿರುವ ಪುರುಷರ ಸಿಂಗಲ್ಸ್ ವಿಭಾಗದ ಸೆಮಿಫೈನಲ್‌ ಪಂದ್ಯದಲ್ಲಿ ರಫೆಲ್ ನಡಾಲ್‌ ಅವರು ಅರ್ಜೆಂಟೀನಾದ ಮಾರ್ಟಿನ್ ಜುವಾನ್ ಡೆಲ್ ಪೊಟ್ರೊ ಅವರ ಸವಾಲನ್ನು ಎದುರಿಸಲಿದ್ದಾರೆ. ಮತ್ತೊಂದು ಸೆಮಿಫೈನಲ್‌ನಲ್ಲಿ ಜಪಾನ್‌ನ ಕೀ ನಿಶಿಕೋರಿ ಅವರು ಸರ್ಬಿಯಾದ ನೊವಾಕ್ ಜೊಕೊವಿಚ್‌ ಎದುರು ಸೆಣಸುವರು.

ಬುಧವಾರ ರಾತ್ರಿ ನಡೆದ ಪಂದ್ಯದಲ್ಲಿ ಕ್ರೊವೇಷ್ಯಾದ ಮರಿನ್ ಸಿಲಿಕ್‌ ಅವರನ್ನು ನಿಶಿಕೋರಿ ಮಣಿಸಿದ್ದರು. 4 ತಾಸು 49 ನಿಮಿಷಗಳ ಪಂದ್ಯದಲ್ಲಿ ಆಸ್ಟ್ರಿಯಾದ ಡಾಮಿನಿಕ್ ಥೀಮ್ ಅವರನ್ನು ನಡಾಲ್ ಸೋಲಿಸಿದ್ದರು. ಗುರುವಾರ ರಾತ್ರಿ ನಡೆದಿದ್ದ ಪಂದ್ಯದಲ್ಲಿ ಆಸ್ಟ್ರೇಲಿಯಾದ ಜಾನ್ ಮಿಲ್‌ಮ್ಯಾನ್ ಅವರನ್ನು ನೊವಾಕ್‌ ಜೊಕೊವಿಚ್‌ 6–3, 6–4, 6–4ರಲ್ಲಿ ಮಣಿಸಿದ್ದರು. 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !