ಸೋಮವಾರ, ಸೆಪ್ಟೆಂಬರ್ 16, 2019
26 °C
ಇಟಾಲಿಯನ್‌ ಓಪನ್‌ ಟೂರ್ನಿಯಲ್ಲಿ ರೆಬೆಕ್ಕಾ ವಿರುದ್ಧ ಜಯ

ಟೆನಿಸ್‌ಗೆ ಮರಳಿದ ಸೆರೆನಾ

Published:
Updated:

ರೋಮ್‌: ಗಾಯದಿಂದ ಬಳಲಿದ್ದ ಅಮೆರಿಕಾ ಆಟಗಾರ್ತಿ ಸೆರೆನಾ ವಿಲಿಯಮ್ಸ್‌ ಅಂಗಣಕ್ಕೆ ಮರಳಿದ್ದಾರೆ. ಸೋಮವಾರ ಆರಂಭವಾದ ಇಟಾಲಿಯನ್‌ ಓಪನ್‌ ಟೆನಿಸ್‌ ಟೂರ್ನಿಯಲ್ಲಿ ಎರಡನೇ ಸುತ್ತಿಗೆ ಅವರು ಲಗ್ಗೆಯಿಟ್ಟಿದ್ದಾರೆ. ಮೊದಲ ಸುತ್ತಿನ ಪಂದ್ಯದಲ್ಲಿ ಅರ್ಹತಾ ಸುತ್ತಿನಿಂದ ಬಂದ ಆಟಗಾರ್ತಿ ರೆಬೆಕ್ಕಾ ಪೀಟರ್ಸನ್‌ ಅವರಿಗೆ 6–4, 6–2 ಸೆಟ್‌ಗಳಿಂದ ಸೋಲುಣಿಸಿದರು.

ಗಾಯದ ಹಿನ್ನೆಲೆಯಲ್ಲಿ 37ರ ಪ್ರಾಯದ ಸೆರೆನಾ ಅವರು ಮಿಯಾಮಿ ಓಪನ್‌ ಟೂರ್ನಿಯಿಂದ ಹಿಂದೆ ಸರಿದಿದ್ದರು. ಆ ಬಳಿಕ ಅವರು ಕಣಕ್ಕೆ ಇಳಿದಿರಲಿಲ್ಲ. ವಿಶ್ವ ಕ್ರಮಾಂಕ ಪಟ್ಟಿಯಲ್ಲಿ 11ನೇ ಸ್ಥಾನದಲ್ಲಿರುವ ಅವರು ಮಾರ್ಚ್‌ನಲ್ಲಿ ನಡೆದ ಇಂಡಿಯಾನಾ ವೆಲ್ಸ್‌ ಟೂರ್ನಿಯಲ್ಲೂ ಆಡಿರಲಿಲ್ಲ.

ಮೊದಲ ಮ್ಯಾಚ್‌ ಪಾಯಿಂಟ್‌ನಲ್ಲಿ ಡಬಲ್‌ ಫಾಲ್ಟ್‌ ಎಸಗಿದರೂ 58ನೇ ಕ್ರಮಾಂಕದ ಆಟಗಾರ್ತಿಯ ಎದುರು ಗೆಲುವಿನ ನಗೆ ಬೀರುವಲ್ಲಿ ವಿಫಲರಾಗಲಿಲ್ಲ. ಸೆರೆನಾ ನಾಲ್ಕು ಬಾರಿ ಇಟಾಲಿಯನ್‌ ಓಪನ್‌ ಪ್ರಶಸ್ತಿಗೆ ಮುತ್ತಿಕ್ಕಿದ್ದಾರೆ.

ಸೆರೆನಾ ಮುಂದಿನ ಪಂದ್ಯದಲ್ಲಿ ತನ್ನ ಅಕ್ಕ ವೀನಸ್‌ ವಿಲಿಯಮ್ಸ್‌ ಅಥವಾ ಬೆಲ್ಜಿಯಂ ಆಟಗಾರ್ತಿ ಎಲಿಸಾ ಮೆರ್ಟೆನ್ಸ್‌ ಅವರನ್ನು ಎದುರಿಸಲಿದ್ದಾರೆ.

Post Comments (+)