ಭಾನುವಾರ, ಮೇ 29, 2022
22 °C
ಆಸ್ಟ್ರೇಲಿಯಾ ಓಪನ್ ಟೆನಿಸ್ ಟೂರ್ನಿ: ಜೊಕೊವಿಚ್‌ ಜಯಭೇರಿ

ಸೆಮಿಯಲ್ಲಿ ಸೆರೆನಾ–ಒಸಾಕ ಪೈಪೋಟಿ

ಎಪಿ/ರಾಯಿಟರ್ಸ್ Updated:

ಅಕ್ಷರ ಗಾತ್ರ : | |

Prajavani

ಮೆಲ್ಬರ್ನ್‌: ಆಸ್ಟ್ರೇಲಿಯಾ ಓಪನ್ ಟೆನಿಸ್ ಟೂರ್ನಿಯ ಮಹಿಳಾ ಸಿಂಗಲ್ಸ್‌ನಲ್ಲಿ ಅಮೆರಿಕದ ಸೆರೆನಾ ವಿಲಿಯಮ್ಸ್ ಹಾಗೂ ಜಪಾನ್‌ನ ನವೊಮಿ ಒಸಾಕ ನಡುವಿನ ಹಣಾಹಣಿಗೆ ವೇದಿಕೆ ಸಜ್ಜುಗೊಂಡಿದೆ. ಕ್ವಾರ್ಟರ್‌ಫೈನಲ್‌ ಪಂದ್ಯಗಳಲ್ಲಿ ಎದುರಾಳಿಗಳನ್ನು ಮಣಿಸಿದ ಇವರಿಬ್ಬರು ಮಂಗಳವಾರ ನಾಲ್ಕರ ಘಟ್ಟ ತಲುಪಿದ್ದಾರೆ.

ದಾಖಲೆಯ 24ನೇ ಗ್ರ್ಯಾನ್‌ಸ್ಲಾಮ್ ಮೇಲೆ ಕಣ್ಣಿಟ್ಟಿರುವ ಸೆರೆನಾ 6–3, 6–3ರಿಂದ ಎರಡನೇ ಶ್ರೇಯಾಂಕದ ಆಟಗಾರ್ತಿ ರುಮೇನಿಯಾದ ಸಿಮೊನಾ ಹಲೆಪ್ ಎದುರು ಜಯಭೇರಿ ಮೊಳಗಿಸಿದರು. 10ನೇ ಶ್ರೇಯಾಂಕದ ಸೆರೆನಾ, 2017ರಲ್ಲಿ ಕೊನೆಯ ಬಾರಿ ಇಲ್ಲಿ ಟ್ರೋಫಿಗೆ ಮುತ್ತಿಕ್ಕಿದ್ದರು.

ಸೆರೆನಾ ಹಾಗೂ ಒಸಾಕ ಒಟ್ಟು ನಾಲ್ಕನೇ ಬಾರಿ ಮುಖಾಮುಖಿಯಾಗುತ್ತಿದ್ದಾರೆ. ಇಬ್ಬರ ನಡುವೆ ಇದುವರೆಗೆ ನಡೆದಿರುವ ಈ ಹಿಂದಿನ ಮೂರು ಪಂದ್ಯಗಳ ಪೈಕಿ ಒಸಾಕ ಎರಡರಲ್ಲಿ ಗೆಲುವು ಸಾಧಿಸಿದ್ದರು. 2018ರ ಅಮೆರಿಕ ಓಪನ್ ಫೈನಲ್‌ ಕೂಡ ಅದರಲ್ಲಿ ಹೆಚ್ಚು ನೆನಪಿನಲ್ಲಿ ಉಳಿಯುವಂತಹದ್ದು. ಆ ಪಂದ್ಯದ ವೇಳೆ ಕೋಚ್‌, ಸೆರೆನಾ ಅವರಿಗೆ ಸೂಚನೆಗಳನ್ನು ನೀಡುತ್ತಿದ್ದುದನ್ನು ಅಂಪೈರ್ ತಡೆದಿದ್ದರು. ಇದರಿಂದ ಸಿಟ್ಟಿಗೆದ್ದ ಸೆರೆನಾ ಅಂಪೈರ್‌ ಜೊತೆಗೆ ವಾಗ್ವಾದಕ್ಕಿಳಿದಿದ್ದರು. ಇದು ವಿವಾದಕ್ಕೆ ಕಾರಣವಾಗಿತ್ತು. ಪಂದ್ಯದಲ್ಲಿ ಒಸಾಕ 6–2, 6–4ರಿಂದ ಗೆದ್ದು ಮೊದಲ ಬಾರಿ ಗ್ರ್ಯಾನ್‌ಸ್ಲಾಮ್ ಕಿರೀಟ ಧರಿಸಿದ್ದರು.

ಮಹಿಳಾ ಸಿಂಗಲ್ಸ್ ವಿಭಾಗದ ಮತ್ತೊಂದು ಎಂಟರಘಟ್ಟದ ಹಣಾಹಣಿಯಲ್ಲಿ ಒಸಾಕ 6–2, 6–2ರಿಂದ ತೈವಾನ್‌ನ ಹೇ ಸು ವೈ ಅವರನ್ನು ಪರಾಭವಗೊಳಿಸಿದರು.

ಜೊಕೊವಿಚ್‌ಗೆ ಜಯ: ಅಲೆಕ್ಸಾಂಡರ್ ಜ್ವೆರೆವ್‌ ಅವರ ಸವಾಲು ಮೀರಿದ ಹಾಲಿ ಚಾಂಪಿಯನ್‌, ಸರ್ಬಿಯಾದ ನೊವಾಕ್ ಜೊಕೊವಿಚ್ ಟೂರ್ನಿಯ ನಾಲ್ಕರ ಘಟ್ಟಕ್ಕೆ ಲಗ್ಗೆಯಿಟ್ಟರು. ರಾಡ್ ಲೇವರ್ ಅರೆನಾದಲ್ಲಿ ನಡೆದ ಜಿದ್ದಾಜಿದ್ದಿನ ಪೈಪೋಟಿಯಲ್ಲಿ ಅವರು 6–7, 6–2, 6–4, 7–6ರಿಂದ ಜರ್ಮನಿ ಆಟಗಾರನಿಗೆ ಸೋಲುಣಿಸಿದರು.

ಟೈಬ್ರೇಕ್‌ವರೆಗೆ ಸಾಗಿದ ಮೊದಲ ಸೆಟ್‌ನಲ್ಲಿ ನಿರಾಸೆ ಅನುಭವಿಸಿದ ವಿಶ್ವದ ಅಗ್ರ ಕ್ರಮಾಂಕದ ಆಟಗಾರ ಬಳಿಕ ಪುಟಿದೆದ್ದರು. ಆದರೂ ಅಲೆಕ್ಸಾಂಡರ್ ತೋರಿದ ಹೋರಾಟ ಗಮನಸೆಳೆಯಿತು.

ಜೊಕೊವಿಚ್‌ 39ನೇ ಬಾರಿ ಗ್ರ್ಯಾನ್‌ಸ್ಲಾಮ್ ಟೂರ್ನಿಯೊಂದರ ಸೆಮಿಫೈನಲ್ ತಲುಪಿದರು. ಮುಂದಿನ ಪಂದ್ಯದಲ್ಲಿ ಅವರು ರಷ್ಯಾದ ಅಸ್ಲಾನ್ ಕರಾತ್ಸೆವ್‌ ಅವರನ್ನು ಎದುರಿಸುವ ಸಾಧ್ಯತೆಯಿದೆ.

ಕರಾತ್ಸೆವ್ ಕರಾಮತ್ತು: ಪುರುಷರ ವಿಭಾಗದ ಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ 114ನೇ ಶ್ರೇಯಾಂಕದ ಆಟಗಾರ ರಷ್ಯಾದ ಅಸ್ಲಾನ್ ಕರಾತ್ಸೆವ್‌ 2-6, 6-4, 6-1, 6-2ರಿಂದ 18ನೇ ಶ್ರೇಯಾಂಕದ ಆಟಗಾರ ಬಲ್ಗೇರಿಯಾದ ಗ್ರಿಗರ್ ಡಿಮಿಟ್ರೊವ್ ಅವರಿಗೆ ಆಘಾತ ನೀಡಿದರು. ಈ ಮೂಲಕ ವೃತ್ತಿಪರ ಯುಗದಲ್ಲಿ, ಗ್ರ್ಯಾನ್‌ಸ್ಲಾಮ್ ಪದಾರ್ಪಣೆಯಲ್ಲಿಯೇ ಸೆಮಿಫೈನಲ್ ತಲುಪಿದ ಮೊದಲ ಆಟಗಾರ ಎನಿಸಿಕೊಂಡರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು