ಅಮೆರಿಕ ಓ‍ಪನ್‌ ಟೂರ್ನಿ: ಅಂಪೈರ್‌ ರಾಮೋಸ್‌ ಜೊತೆ ಸೆರೆನಾ ಜಟಾಪಟಿ

7

ಅಮೆರಿಕ ಓ‍ಪನ್‌ ಟೂರ್ನಿ: ಅಂಪೈರ್‌ ರಾಮೋಸ್‌ ಜೊತೆ ಸೆರೆನಾ ಜಟಾಪಟಿ

Published:
Updated:

ನ್ಯೂಯಾರ್ಕ್‌: ಅಮೆರಿಕ ಓ‍ಪನ್‌ ಟೂರ್ನಿಯ ಮಹಿಳೆಯರ ಸಿಂಗಲ್ಸ್‌ ವಿಭಾಗದ ಫೈನಲ್‌ ಪಂದ್ಯ ಸೆರೆನಾ ವಿಲಿಯಮ್ಸ್‌ ಮತ್ತು ಅಂಗಳದ ಅಂಪೈರ್‌ ಕಾರ್ಲೊಸ್‌ ರಾಮೋಸ್‌ ಅವರ ಜಟಾಪಟಿಗೆ ಸಾಕ್ಷಿಯಾಯಿತು.

ಮೊದಲ ಸೆಟ್‌ನ ಆಟದ ವೇಳೆ ಗ್ಯಾಲರಿಯಲ್ಲಿ ಕುಳಿತಿದ್ದ ಕೋಚ್‌ ಪ್ಯಾಟ್ರಿಕ್‌ ಮೌರಾಟೊಗ್ಲೌ ಅವರು ಕೈ ಸನ್ನೆಯ ಮೂಲಕ ಸೆರೆನಾಗೆ ಸಲಹೆಗಳನ್ನು ನೀಡುತ್ತಿದ್ದರು. ಇದನ್ನು ಗಮನಿಸಿದ ಅಂಪೈರ್‌ ರಾಮೋಸ್‌, ಅಮೆರಿಕದ ಆಟಗಾರ್ತಿಗೆ ಎಚ್ಚರಿಕೆ ನೀಡಿದರು.

ಇದರಿಂದ ಕುಪಿತಗೊಂಡ ಸೆರೆನಾ ‘ನಾನು ಕೋಚ್‌ ಕಡೆ ನೋಡಿಯೇ ಇಲ್ಲ. ಅವರ ಸಲಹೆಗಳನ್ನು ಪಾಲಿಸಿಲ್ಲ. ಗೆಲುವಿಗಾಗಿ ಅಡ್ಡದಾರಿ ಹಿಡಿಯುವ ಗುಣ ನನ್ನದಲ್ಲ’ ಎಂದು ಖಾರವಾಗಿ ನುಡಿದರು. ಈ ವೇಳೆ ಕ್ರೀಡಾಂಗಣದಲ್ಲಿ ಕುಳಿತಿದ್ದ ಅಭಿಮಾನಿಗಳು ರಾಮೋಸ್‌ ಅವರನ್ನು ಮೂದಲಿಸಿದರು.

ಎರಡನೇ ಸೆಟ್‌ನ ವೇಳೆ ಹಿನ್ನಡೆ ಕಂಡ ಸೆರೆನಾ ಹತಾಶೆಯಿಂದ ರ‍್ಯಾಕೆಟ್‌ ಅನ್ನು ನೆಲಕ್ಕೆ ಬಡಿದು ಅದನ್ನು ಮುರಿದು ಹಾಕಿದರು. ಅಶಿಸ್ತು ತೋರಿದ ಕಾರಣ ಸೆರೆನಾಗೆ ಕಾರ್ಲೋಸ್‌ ‘ಗೇಮ್‌ ಪೆನಾಲ್ಟಿ’ ವಿಧಿಸಿದರು.

ಇದರಿಂದ ಕೆರಳಿದ ಅಮೆರಿಕದ ಆಟಗಾರ್ತಿ ನೇರವಾಗಿ ಕಾರ್ಲೋಸ್‌ ಬಳಿಗೆ ತೆರಳಿ ಅವಾಚ್ಯ ಶಬ್ದಗಳಿಂದ ನಿಂದಿಸಿದರು.

‘ನೀನು ಕಳ್ಳ, ಮಹಾನ್‌ ಸುಳ್ಳುಗಾರ. ಇನ್ನು ಮುಂದೆ ಎಂದೂ ನನ್ನ ಕಣ್ಣೆದುರಿಗೆ ಬರಬೇಡ. ಪಂದ್ಯ ಮುಗಿದ ನಂತರ ನನ್ನ ಹತ್ತಿರ ಬಂದು ಕ್ಷಮೆ ಕೇಳಿ ಹೋಗು’ ಎಂದರು.

ನನಗೆ ಅನ್ಯಾಯವಾಗುತ್ತಿದೆ. ನ್ಯಾಯ ಸಿಗುವವರೆಗೂ ಅಂಗಳಕ್ಕಿಳಿಯುವುದಿಲ್ಲ ಎಂದು ಹೇಳಿ ಮೈದಾನದಿಂದ ಆಚೆ ಹೋಗಿ ಕುಳಿತರು. ಪಂದ್ಯದ ರೆಫರಿ ಬ್ರಯಾನ್‌, ಸೆರೆನಾ ಬಳಿ ಬಂದು ಮನವೊಲಿಸಿದ ನಂತರ ಮತ್ತೆ ಮೈದಾನಕ್ಕಿಳಿದರು. ಪಂದ್ಯ ಮುಗಿದ ನಂತರ ಒಸಾಕ, ರಾಮೋಸ್‌ ಅವರ ಹತ್ತಿರ ಹೋಗಿ ಕೈಕುಲುಕಿದರು. ಆದರೆ ಸೆರೆನಾ, ಹಸ್ತಲಾಘವ ಮಾಡಲು ನಿರಾಕರಿಸಿದರು.

‘ನನಗೆ ಈ ಹಿಂದೆಯೂ ಅಂಪೈರ್‌ಗಳಿಂದ ಅನ್ಯಾಯವಾಗಿತ್ತು. ರಾಮೋಸ್‌ ಅವರ ಕೆಟ್ಟ ನಿರ್ಣಯಗಳಿಂದ ಪ್ರಶಸ್ತಿ ಕೈತಪ್ಪಿತು’ ಎಂದು ಸೆರೆನಾ ಅಸಮಾಧಾನ ವ್ಯಕ್ತಪಡಿಸಿದರು.

‘ಗ್ಯಾಲರಿಯಲ್ಲಿ ಕುಳಿತುಕೊಂಡು ಸೆರೆನಾಗೆ ಸಲಹೆಗಳನ್ನು ನೀಡುತ್ತಿದ್ದುದು ನಿಜ. ಒಸಾಕ ಅವರ ಕೋಚ್‌ ಸಶಚಾ ಬಾಜಿನ್‌ ಕೂಡಾ ಸಲಹೆ ಕೊಡುತ್ತಿದ್ದರು. ಅದು ರಾಮೋಸ್‌ ಕಣ್ಣಿಗೆ ಬೀಳಲಿಲ್ಲವೇ’ ಎಂದು ಸೆರೆನಾ ಅವರ ಕೋಚ್‌ ಪ್ಯಾಟ್ರಿಕ್‌ ಮೌರಾಟೊಗ್ಲೌ ಪ್ರಶ್ನಿಸಿದ್ದಾರೆ.

 **

ಟ್ವೀಟ್‌ಗಳು..

ಮಹಿಳೆಯರ ಸಿಂಗಲ್ಸ್‌ ವಿಭಾಗದ ಫೈನಲ್ ಪಂದ್ಯ ವಿವಾದಗಳೊಂದಿಗೆ ಮುಗಿದಿದ್ದು ಬೇಸರ ತರಿಸಿದೆ.

ವಸೆಕ್‌ ಪೊಸ್ಪಿಸಿಲ್‌, ಕೆನಡಾದ ಆಟಗಾರ.

**

ಪಂದ್ಯದಲ್ಲಿ ಅಂಪೈರ್‌ ತೀರ್ಮಾನವೇ ಅಂತಿಮ. ಆಟಗಾರರು ಹತಾಶೆಗೊಳಗಾಗಿ ಅವರನ್ನು ನಿಂದಿಸುವುದು ಸರಿಯಲ್ಲ.

ಲಿಯಾಮ್‌ ಬ್ರಾಡಿ, ಬ್ರಿಟನ್‌ನ ಹಿರಿಯ ಆಟಗಾರ

 ***

ಇಂಥಹ ಕೆಟ್ಟ ಅಂಪೈರಿಂಗ್‌ ಅನ್ನು ನಾನು ಎಂದಿಗೂ ನೋಡಿಯೇ ಇಲ್ಲ

ಆ್ಯಂಡಿ ರಾಡಿಕ್‌, ಅಮೆರಿಕದ ಹಿರಿಯ ಆಟಗಾರ

**

ಪಂದ್ಯದ ವೇಳೆ ಪುರುಷರು ರ‍್ಯಾಕೆಟ್‌ ಮುರಿದರೆ ಅದು ಅಶಿಸ್ತು ಎನಿಸುವುದಿಲ್ಲ. ಮಹಿಳೆಯರು ಮಾಡಿದರೆ ಮಾತ್ರ ಅದು ಕ್ಷಮಿಸಲಾರದಂತಹ ತಪ್ಪಾಗಿ ಬಿಡುತ್ತದೆ.

ವಿಕ್ಟೋರಿಯಾ ಅಜರೆಂಕಾ, ಜೆಕ್‌ ಗಣರಾಜ್ಯದ ಆಟಗಾರ್ತಿ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !