ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೋಕಿಯೊ ಒಲಿಂಪಿಕ್ಸ್‌ಗೆ ಸೆರೆನಾ ವಿಲಿಯಮ್ಸ್ ಇಲ್ಲ

Last Updated 27 ಜೂನ್ 2021, 13:46 IST
ಅಕ್ಷರ ಗಾತ್ರ

ವಿಂಬಲ್ಡನ್, ಇಂಗ್ಲೆಂಡ್‌: ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಅಮೆರಿಕದ ಟೆನಿಸ್‌ ಪಟು ಸೆರೆನಾ ವಿಲಿಯಮ್ಸ್ ಭಾನುವಾರ ತಿಳಿಸಿದ್ದಾರೆ. ಆದರೆ ಟೋಕಿಯೊಗೆ ಹೋಗದಿರಲು ಕಾರಣವೇನು ಎಂದು ಅವರು ಹೇಳಲಿಲ್ಲ.

ವಿಂಬಲ್ಡನ್ ಟೆನಿಸ್ ಟೂರ್ನಿಗೆ ಸಂಬಂಧಿಸಿದ ಆನ್‌ಲೈನ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸೆರೆನಾ ‘ಒಲಿಂಪಿಕ್ಸ್‌ನಲ್ಲಿ ಆಡುವವರ ಪಟ್ಟಿಯಲ್ಲಿ ನಾನಿಲ್ಲ. ಹೀಗಾಗಿ ಆ ಬಗ್ಗೆ ಯೋಚಿಸಿಯೂ ಇಲ್ಲ. ಹಾಗೇನಾದರೂ ನನ್ನ ಹೆಸರಿದ್ದರೂ ಟೋಕಿಯೊಗೆ ಹೋಗಲು ನಾನು ಸಿದ್ಧ ಇಲ್ಲ’ ಎಂದರು.

39 ವರ್ಷದ ಸೆರೆನಾ ಒಲಿಂಪಿಕ್ಸ್‌ನಲ್ಲಿ ಈ ವರೆಗೆ ನಾಲ್ಕು ಚಿನ್ನದ ಪದಕ ಗೆದ್ದಿದ್ದಾರೆ. 2012ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಸಿಂಗಲ್ಸ್ ಮತ್ತು ಡಬಲ್ಸ್‌ನಲ್ಲಿ ಚಾಂಪಿಯನ್ ಆಗಿರುವ ಅವರು 2000ದಲ್ಲಿ ನಡೆದ ಸಿಡ್ನಿ ಒಲಿಂಪಿಕ್ಸ್‌ನಲ್ಲೂ 2008ರ ಬೀಜಿಂಗ್ ಒಲಿಂಪಿಕ್ಸ್‌ನಲ್ಲೂ ಡಬಲ್ಸ್‌ನಲ್ಲೂ ಚಿನ್ನ ಗಳಿಸಿದ್ದರು. ಈ ಎಲ್ಲ ಟೂರ್ನಿಯಲ್ಲೂ ಡಬಲ್ಸ್‌ನಲ್ಲಿ ಅವರು ಹಿರಿಯ ಸಹೋದರಿ ವೀನಸ್ ಜೊತೆ ಕಣಕ್ಕೆ ಇಳಿದಿದ್ದರು.

2016ರ ರಿಯೊ ಒಲಿಂಪಿಕ್ಸ್‌ನ ಸಿಂಗಲ್ಸ್‌ನ ಮೂರನೇ ಸುತ್ತಿನಲ್ಲಿ ಉಕ್ರೇನ್‌ನ ಎಲಿನಾ ಸ್ವಿಟೋಲಿನಾಗೆ ಸೆರೆನಾ ಮಣಿದಿದ್ದರು. ಡಬಲ್ಸ್‌ನಲ್ಲಿ ಸೆರೆನಾ–ವೀನಸ್ ಸಹೋದರಿಯರು ಮೊದಲ ಸುತ್ತಿನಲ್ಲೇ ಹೊರಬಿದ್ದಿದ್ದರು. ಆ ಸೋಲಿಗೂ ಮೊದಲು ಈ ಜೋಡಿ 15 ‍ಪಂದ್ಯಗಳಲ್ಲಿ ಆಜೇಯರಾಗಿದ್ದರು.

‘ಹಿಂದಿನ ವರ್ಷಗಳಲ್ಲಿ ಒಲಿಂಪಿಕ್ಸ್‌ ನನ್ನ ಪಾಲಿಗೆ ನೆಚ್ಚಿನ ಕೂಟವಾಗಿತ್ತು. ಈ ಬಾರಿ ಒಲಿಂಪಿಕ್ಸ್‌ಗೆ ಹೋಗದೇ ಇರಲು ಹಲವು ಕಾರಣಗಳಿವೆ. ಅವುಗಳ ಬಗ್ಗೆ ಈಗ ಏನೂ ಹೇಳಲು ಬಯಸುವುದಿಲ್ಲ. ಮುಂದೆ ಎಂದಾದರೂ ಅವಕಾಶ ಸಿಕ್ಕಿದರೆ ಹೇಳುವೆ’ ಎಂದು ಅವರು ಹೇಳಿದರು.

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ರಫೆಲ್ ನಡಾಲ್ ಮತ್ತು ಡೊಮಿನಿಕ್ ಥೀಮ್ ಈಗಾಗಲೇ ತಿಳಿಸಿದ್ದಾರೆ. ಒಲಿಂಪಿಕ್ಸ್‌ ಬಗ್ಗೆ ಇನ್ನೂ ನಿರ್ಧಾರ ಕೈಗೊಳ್ಳಲಿಲ್ಲ ಎಂದು ರೋಜರ್ ಫೆಡರರ್‌ ಶನಿವಾರ ತಿಳಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT