ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಡಾಲ್ ಮುನ್ನಡೆ; ಶರಪೋವಗೆ ‘ಮೊದಲ’ ಆಘಾತ

ವಿಂಬಲ್ಡನ್ ಟೂರ್ನಿ: ಆರಂಭಿಕ ಸುತ್ತಿನಲ್ಲೇ ಸೋತ ರಷ್ಯಾ ಆಟಗಾರ್ತಿ; ಕ್ವಿಟೋವಾಗೂ ನಿರಾಸೆ
Last Updated 4 ಜುಲೈ 2018, 19:24 IST
ಅಕ್ಷರ ಗಾತ್ರ

ಲಂಡನ್‌: ಎದುರಾಳಿಯ ವಿರುದ್ಧ ಪಾರಮ್ಯ ಮೆರೆದ ವಿಶ್ವದ ಅಗ್ರ ಕ್ರಮಾಂಕದ ಆಟಗಾರ ರಫೆಲ್ ನಡಾಲ್‌ ವಿಂಬಲ್ಡನ್‌ ಟೆನಿಸ್ ಟೂರ್ನಿಯ ಮೊದಲ ಸುತ್ತಿನಲ್ಲಿ ಗೆಲುವು ಸಾಧಿಸಿದರು. ಬುಧವಾರ ನಡೆದ ಪಂದ್ಯದಲ್ಲಿ ಅವರು ಇಸ್ರೇಲ್‌ನ ದೂದಿ ಸೇಲಾ ಅವರನ್ನು 6–3, 6–3, 6–2ರಲ್ಲಿ ಮಣಿಸಿದರು.

ಮಹಿಳೆಯರ ವಿಭಾಗದಲ್ಲಿ ರಷ್ಯಾದ ಮರಿಯಾ ಶರಪೋವ ಮೊದಲ ಸುತ್ತಿನಲ್ಲೇ ಆಘಾತ ಅನುಭವಿಸಿದರು. ವಿಂಬಲ್ಡನ್‌ನಲ್ಲಿ ಅವರು ಎರಡನೇ ಸುತ್ತಿಗೆ ಪ್ರವೇಶಿಸದೆ ಹೊರ ಬೀಳುತ್ತಿರುವುದು ಇದೇ ಮೊದಲ ಬಾರಿ. ಅತ್ಯಂತ ರೋಚಕ ಹೋರಾಟದಲ್ಲಿ ರಷ್ಯಾದ ವಿಟಾಲಿಯಾ ಡಲಚೆಂಕೊ ಅವರು ಶರಪೋವ ವಿರುದ್ಧ 6–7 (3/7), 7–6 (7/3), 6–4ರಿಂದ ಗೆದ್ದರು.

ಮಾದಕ ವಸ್ತು ಸೇವನೆ ಆರೋಪಕ್ಕೆ ಒಳಗಾಗಿ ಎರಡು ವರ್ಷ ನಿಷೇಧಕ್ಕೆ ಒಳಗಾಗಿದ್ದ ಶರಪೋವ 2016ರಲ್ಲಿ ವಿಂಬಲ್ಡನ್‌ನಲ್ಲಿ ಆಡಿರಲಿಲ್ಲ. ಕಳೆದ ವರ್ಷ ಗಾಯದ ಸಮಸ್ಯೆಯಿಂದಾಗಿ ಕಣಕ್ಕೆ ಇಳಿದಿರಲಿಲ್ಲ. ತಮ್ಮದೇ ದೇಶದವರಾದ ವಿಟಾಲಿಯಾ ಅವರಿಗೆ ಬುಧವಾರ ಭಾರಿ ಪೈಪೋಟಿ ನೀಡಿದರೂ ಗೆಲುವು ದಕ್ಕಿಸಿಕೊಳ್ಳಲು ಶರಪೋವಗೆ ಸಾಧ್ಯವಾಗಲಿಲ್ಲ.

ಪುರುಷರ ವಿಭಾಗ ಸಿಂಗಲ್ಸ್‌ನಲ್ಲಿ ನಡಾಲ್‌ ಮತ್ತೊಮ್ಮೆ ಮಿಂಚಿನ ಆಟವಾಡಿದರು. 11ನೇ ಫ್ರೆಂಚ್ ಓಪನ್ ಪ್ರಶಸ್ತಿ ಗೆದ್ದು ಇಲ್ಲಿಗೆ ಬಂದಿದ್ದ ಅವರು ಆರಂಭದಲ್ಲಿ ಎದುರಾಳಿ ವಿರುದ್ಧ ಸೂಕ್ಷ್ಮ ಹೆಜ್ಜೆ ಇರಿಸಿದರು. ಲಯ ಕಂಡುಕೊಂಡ ನಂತರ ಅಮೋಘ ನಿರಂತರ ಪಾಯಿಂಟ್‌ಗಳನ್ನು ಹೆಕ್ಕಿ ಸುಲಭ ಜಯ ತಮ್ಮದಾಗಿಸಿಕೊಂಡರು.

ಜೊಕೊವಿಚ್‌ಗೆ ಗೆಲುವು; ಥೀಮ್‌, ಗಫಿನ್‌ ಹೊರಕ್ಕೆ
ಪುರುಷರ ವಿಭಾಗದ ಮತ್ತೊಂದು ಸಿಂಗಲ್ಸ್ ಪಂದ್ಯದಲ್ಲಿ ನೊವಾಕ್ ಜೊಕೊವಿಚ್‌ ಅಮೆರಿಕದ ಟೆನಿಸ್ ಸ್ಯಾಂಡ್‌ಗ್ರೆನ್ ಅವರನ್ನು 6–3, 6–1, 6–2ರಿಂದ ಸೋಲಿಸಿದರು. ಕಳೆದ ವರ್ಷ ಗಾಯದ ಸಮಸ್ಯೆಯಿಂದಾಗಿ ಈ ಟೂರ್ನಿಯ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ನಿವೃತ್ತರಾಗಿದ್ದ ಅವರು ಎದುರಾಳಿಯ ವಿರುದ್ಧ ಪೂರ್ಣ ಆಧಿಪತ್ಯ ಸ್ಥಾಪಿಸಿ ಜಯದ ನಗೆ ಬೀರಿದರು.

ಪುರುಷರ ಇತರ ಪಂದ್ಯಗಳಲ್ಲಿ ಡೊಮಿನಿಕ್ ಥೀಮ್ ಮತ್ತು ಡೇವಿಡ್ ಗಫಿನ್ ಮೊದಲ ಸುತ್ತಿನಲ್ಲಿ ಆಘಾತಕ್ಕೆ ಒಳಗಾದರು. ಥೀಮ್‌ ಅವರನ್ನು ಮಾರ್ಕೊಸ್‌ ಬಗ್ದಾತಿಸ್‌ 6–4, 7–5ರಿಂದ ಸೋಲಿಸಿದರೆ, ಗಫಿನ್‌ 6–4, 6–3, 6–4ರಿಂದ ಮ್ಯಾಥ್ಯೂ ಎಬ್ಡೆನ್ ಎದುರು ಸೋತರು.

ಅರ್ಜೆಂಟೀನಾದ ಜುವಾನ್‌ ಮಾರ್ಟಿನ್‌ ಡೆಲ್ ಪೊಟ್ರೊ, ಜರ್ಮನಿಯ ಪೀಟರ್‌ ಗೊಜೊವಿಕ್ ಅವರನ್ನು 6–3, 6–4, 6–3ರಿಂದ ಸೋಲಿಸಿದರು. ಜರ್ಮನಿಯ ಅಲೆಕ್ಸಾಂಡರ್ ಜೆರೆವ್‌ 7–5, 6–2, 6–0ಯಿಂದ ಜೇಮ್ಸ್‌ ಡಕ್‌ವರ್ಥ್‌ ಅವರನ್ನು ಮಣಿಸಿದರು.

ವೃತ್ತಿ ಜೀವನದ 50ನೇ ಪಂದ್ಯ ಆಡಿದ ಆಸ್ಟ್ರೇಲಿಯಾದ ನಿಕ್‌ ಕಿರ್ಗಿಯೋಸ್ ಉಜ್ಬೆಕಿಸ್ತಾನದ ಡೆನಿಸ್‌ ಇಸ್ತೊಮಿನ್ ಅವರನ್ನು 7–6 (7/3), 7–6 (7/4), 6–7 (5/7), 6–3ರಿಂದ ಮಣಿಸಿ ಎರಡನೇ ಸುತ್ತು ಪ್ರವೇಶಿಸಿದರು.

ಹಲೆಪ್‌ ಮುನ್ನಡೆ; ಕ್ವಿಟೋವಾ ಕನಸು ಭಗ್ನ
ಮಹಿಳೆಯರ ಸಿಂಗಲ್ಸ್‌ ವಿಭಾಗದಲ್ಲಿ ವಿಶ್ವದ ಅಗ್ರ ಕ್ರಮಾಂಕದ ಆಟಗಾರ್ತಿ ಸಿಮೊನಾ ಹಲೆಪ್‌ ಉತ್ತಮ ಆರಂಭ ಕಂಡರೆ, ಕ್ವಿಟೋವಾ ಸೋಲುಂಡು ಹೊರಬಿದ್ದರು. ಜಪಾನ್‌ನ ಕುರುಮಿ ನರಾ ಅವರನ್ನು ಹಲೆಪ್‌ 6–2, 6–4ರಿಂದ ಸೋಲಿಸಿದರು. ಸಸ್ನೋವಿಚ್‌ 6–4, 4–6, 6–0ಯಿಂದ ಕ್ವಿಟೋವಾ ಅವರ ವಿರುದ್ಧ ಗೆದ್ದರು.

ಹಾಲಿ ಚಾಂಪಿಯನ್‌, ಸ್ಪೇನ್‌ನ ಗಾರ್ಬೈನ್‌ ಮುಗುರುಜಾ ಅವರು ನವೊಮಿ ಬ್ರಾಡಿ ಎದುರು 6–2, 7–5ರಿಂದ ಗೆದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT