ಸಿನ್ಸಿನಾಟಿ: ವಿಶ್ವದ ಅಗ್ರಮಾನ್ಯ ಸಿಂಗಲ್ಸ್ ಆಟಗಾರ ಯಾನಿಕ್ ಸಿನ್ನರ್ ಅವರು ಸಿನ್ಸಿನಾಟಿ ಓಪನ್ ಟೆನಿಸ್ ಟೂರ್ನಿಯಲ್ಲಿ ಅಲೆಕ್ಸಾಂಡರ್ ಜ್ವೆರೇವ್ ಅವರನ್ನು ಸೋಲಿಸಿ ಫೈನಲ್ ಪ್ರವೇಶಿಸಿದರು.
ಭಾನುವಾರ ತಡರಾತ್ರಿ ನಡೆದ ಪಂದ್ಯದಲ್ಲಿ ಇಟಲಿಯ 23 ವರ್ಷ ವಯಸ್ಸಿನ ಸಿನ್ನರ್ 7-6 (11/9), 5-7, 7-6 (7/4)ರಿಂದ ಮೂರನೇ ಶ್ರೇಯಾಂಕದ ಜ್ವೆರೇವ್ ಅವರನ್ನು ಹಿಮ್ಮೆಟ್ಟಿಸಿದರು.
ಮಂಗಳವಾರ ಫೈನಲ್‌ನಲ್ಲಿ ಅವರು ಅಮೆರಿಕದ ಫ್ರಾನ್ಸಿಸ್ ಟಿಯಾಫೊ ಅವರನ್ನು ಎದುರಿಸಲಿದ್ದಾರೆ. ಸಿನ್ನರ್ ಅವರಿಗೆ ಇದು ವೃತ್ತಿಜೀವನದ ಐದನೇ ಮಾಸ್ಟರ್ಸ್ 1000 ಫೈನಲ್ ಆಗಿದೆ.
ಸಿನ್ನರ್ ಅವರು ಕಳೆದ ನಾಲ್ಕು ಮುಖಾಮುಖಿಯಲ್ಲಿ ಜ್ವೆರೇವ್ ವಿರುದ್ಧ ಸೋತಿದ್ದರು. ನಾಲ್ಕು ವರ್ಷಗಳ ಹಿಂದೆ ರೋಲ್ಯಾಂಡ್ ಗ್ಯಾರೋಸ್‌ನಲ್ಲಿ ಸಿನ್ನರ್ ಅವರು ಜರ್ಮನಿ ಆಟಗಾರನ ವಿರುದ್ಧ ಜಯ ಗಳಿಸಿದ್ದರು.
ಮತ್ತೊಂದು ಸೆಮಿಫೈನಲ್‌ನಲ್ಲಿ ಆರಂಭಿಕ ಹಿನ್ನಡೆಯಿಂದ ಚೇತರಿಸಿಕೊಂಡ ಟಿಯಾಫೊ ಅವರು 4-6, 6-1, 7-6 (7/4) ರಿಂದ 15ನೇ ಶ್ರೇಯಾಂಕದ ಹೊಲ್ಗರ್ ರೂನ್ ಅವರನ್ನು ಸೋಲಿಸಿದರು.
2013ರ ನಂತರ ಸಿನ್ಸಿನಾಟಿ ಓಪನ್‌ನಲ್ಲಿ ಫೈನಲ್ ತಲುಪಿದ ಅಮೆರಿಕದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಟಿಯಾಫೊ ಪಾತ್ರವಾದರು. 2013ರಲ್ಲಿ ಜಾನ್ ಇಸ್ನರ್ ಫೈನಲ್ ತಲುಪಿದ್ದರು.
ಮಹಿಳೆಯರ ಸಿಂಗಲ್ಸ್‌ನಲ್ಲಿ ಆರನೇ ಶ್ರೇಯಾಂಕದ ಅಮೆರಿಕದ ಜೆಸ್ಸಿಕಾ ಪೆಗುಲಾ ಅವರು ಫೈನಲ್‌ಗೆ ಲಗ್ಗೆ ಹಾಕಿದರು. ಪ್ರಶಸ್ತಿ ಸುತ್ತಿನಲ್ಲಿ ಅವರು ಮೂರನೇ ಶ್ರೇಯಾಂಕದ ಅರಿನಾ ಸಬಲೆಂಕಾ ಅವರನ್ನು ಎದುರಿಸುವರು.
ಕಳೆದ ವಾರ ಕೆನಡಿಯನ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದ 30 ವರ್ಷ ವಯಸ್ಸಿನ ಪೆಗುಲಾ ಸೆಮಿಫೈನಲ್‌ನಲ್ಲಿ 6-2, 3-6, 6-3ರಿಂದ ಸ್ಪೇನ್‌ನ ಪೌಲಾ ಬಡೋಸಾ ಅವರನ್ನು ಮಣಿಸಿದರು.
ಇದಕ್ಕೂ ಮೊದಲು ಮತ್ತೊಂದು ಸೆಮಿಫೈನಲ್‌ನಲ್ಲಿ ಸಬಲೆಂಕಾ ಅವರು 6-3, 6-3ರಿಂದ ಅಗ್ರ ಶ್ರೇಯಾಂಕದ ಇಗಾ ಶ್ವಾಂಟೆಕ್ ಅವರಿಗೆ ಆಘಾತ ನೀಡಿದ್ದರು.