ಶನಿವಾರ, ಏಪ್ರಿಲ್ 17, 2021
22 °C

ಮಹಿಳಾ ಟೆನಿಸ್‌: ಸೋಹಾಗೆ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಅಗ್ರ ಶ್ರೇಯಾಂಕದ ಆಟಗಾರ್ತಿಯ ವಿರುದ್ಧ ಆರಂಭದ ಹಿನ್ನಡೆಯಿಂದ ಚೇತರಿಸಿಕೊಂಡ ಎರಡನೇ ಶ್ರೇಯಾಂಕಿತೆ ಸೋಹಾ ಸಾದಿಕ್ ತವರಿನ ಪ್ರೇಕ್ಷಕರನ್ನು ಪುಳಕಗೊಳಿಸಿದರು. ಪಡುಕೋಣೆ–ದ್ರಾವಿಡ್ ಸೆಂಟರ್ ಫಾರ್ ಸ್ಪೋರ್ಟ್ಸ್ ಎಕ್ಸಲೆನ್ಸ್‌ನ ಟೆನಿಸ್ ಅಕಾಡೆಮಿಯಲ್ಲಿ ನಡೆದ ಎಐಟಿಎ ಮಹಿಳಾ ಚಾಂಪಿಯನ್‌ಷಿಪ್‌ನ ಫೈನಲ್‌ನಲ್ಲಿ ಸೋಹಾ ತೆಲಂಗಾಣದ ಹುಮೇರಾ ಬಹಾರ್ಮಸ್ ಅವರನ್ನು 4-6, 6-3, 5-2ರಲ್ಲಿ ಮಣಿಸಿದರು. ಈ ಮೂಲಕ ₹ 1 ಲಕ್ಷ ಮೊತ್ತದ ಬಹುಮಾನ ಗೆದ್ದುಕೊಂಡರು.

ಎರಡು ತಿಂಗಳಲ್ಲಿ ಎಐಟಿಎ ಟೂರ್ನಿಯೊಂದರ ಎರಡನೇ ಪ್ರಶಸ್ತಿ ಮೇಲೆ ಕಣ್ಣಿಟ್ಟು ಕಣಕ್ಕೆ ಇಳಿದ ಸೋಹಾ ಆರಂಭದಲ್ಲಿ ಹಿನ್ನಡೆ ಅನುಭವಿಸಿದರು. ಆದರೆ ಚೇತರಿಸಿಕೊಂಡು ಎದುರಾಳಿಯ ಮೇಲೆ ಆಧಿಪತ್ಯ ಸ್ಥಾಪಿಸಿದರು. ಹುಮೇರಾ ಪಟ್ಟು ಬಿಡದೆ ಕಾದಾಡಿದ್ದರಿಂದ ಪಂದ್ಯ ಮೂರನೇ ಸೆಟ್ ವರೆಗೆ ಸಾಗಿತು. ಆದರೆ ಅಂತಿಮ ಸೆಟ್‌ನ ಅರ್ಧದಲ್ಲೇ ಹುಮೇರಾ ನಿವೃತ್ತರಾದ ಕಾರಣ ಸೋಹಾ ಗೆಲುವಿನ ಹಾದಿ ಸುಗಮವಾಯಿತು. 

ಮೂರು ವರ್ಷಗಳ ಹಿಂದೆ ಪ್ರಮುಖ ಟೂರ್ನಿಯೊಂದರ ಫೈನಲ್‌ನಲ್ಲಿ ಸೋಹಾ ಮತ್ತು ಹುಮೇರಾ ಮುಖಾಮುಖಿಯಾಗಿದ್ದರು. ಆಗ ಮೂರನೇ ಸೆಟ್‌ನಲ್ಲಿ ಹುಮೇರಾ ಗೆಲುವು ಸಾಧಿಸಿದ್ದರು. ಈ ಬಾರಿ ಸೋಹಾ ಗೆಲ್ಲುವ ಛಲದೊಂದಿಗೆ ಆಡಲು ಇಳಿದಿದ್ದರು. ಆದರೆ ಅರಂಭದಲ್ಲಿ 0–4ರಲ್ಲಿ ಎದುರಾಳಿ ಮುನ್ನಡೆದರು. ತಿರುಗೇಟು ನೀಡಿದ ಸೋಹಾ ನಂತರದ ಮೂರು ಗೇಮ್‌ಗಳನ್ನು ಗೆದ್ದುಕೊಂಡರು. ಆದರೆ ಸೆಟ್ ಬಿಟ್ಟುಕೊಡಲು ಹುಮೇರಾ ಸಿದ್ಧ ಇರಲಿಲ್ಲ. 

ಎರಡನೇ ಸೆಟ್‌ನ ಆರಂಭದಲ್ಲಿ ಇಬ್ಬರೂ ಬಲಶಾಲಿ ಹೊಡೆತಗಳ ಮೂಲಕ ಮಿಂಚಿದರು. ಏಳನೇ ಗೇಮ್‌ನಲ್ಲಿ ಎದುರಾಳಿಯ ಸರ್ವ್ ಮುರಿದ ಸೋಹಾ ಮುನ್ನಡೆದರು. ನಂತರ ಅಮೋಘ ಆಟ ಮುಂದುವರಿಸಿ ಸೆಟ್‌ ಗೆದ್ದು ಸಂಭ್ರಮಿಸಿದರು. ಮೂರನೇ ಸೆಟ್‌ನಲ್ಲಿ 2–5ರ ಹಿನ್ನಡೆಯಲ್ಲಿದ್ದ ವೇಳೆ ಹುಮೇರಾ ನಿವೃತ್ತಿ ಘೋಷಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು