ಬುಧವಾರ, ಅಕ್ಟೋಬರ್ 21, 2020
21 °C

’ಚಾಯ್ ವಿದ್ ರಾಜ’ದಲ್ಲಿ ಪೇಸ್, ಸಫಿನ್

‍ಪ್ರಜಾವಾಣಿ ವಾರ್ತೆ‌ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಖ್ಯಾತ ಟೆನಿಸ್ ಪಟು ಪುರವ್‌ ರಾಜ ಜೊತೆ ಸೋನಿ ಟೆನ್ ವಾಹಿನಿ ನಡೆಸುವ ಮನರಂಜನಾ ಸಂವಾದ ಕಾರ್ಯಕ್ರಮ ’ಚಾಯ್ ವಿದ್ ರಾಜ’ದಲ್ಲಿ ಈ ವಾರ ಭಾರತದ ಲಿಯಾಂಡರ್ ಪೇಸ್ ಮತ್ತು ರಷ್ಯಾದ ಮಾಜಿ ಆಟಗಾರ ಮಾರಟ್ ಸಫಿನ್ ‍ಪಾಲ್ಗೊಳ್ಳಲಿದ್ದಾರೆ. 

ಸೆಪ್ಟೆಂಬರ್‌ನಲ್ಲಿ ಆರಂಭಗೊಂಡಿರುವ ಕಾರ್ಯಕ್ರಮ ಈಗಾಗಲೇ ನಾಲ್ಕು ಕಂತುಗಳನ್ನು ಪೂರೈಸಿದ್ದು ಕೊನೆಯ ಕಂತು ಇದೇ ಶನಿವಾರ (ಅಕ್ಟೋಬರ್ 17) ಸಂಜೆ ಏಳು ಗಂಟೆಯಿಂದ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ. 

‘ಜಗತ್ತಿನ ಪ್ರಮುಖ ಟೆನಿಸ್ ಪಟುಗಳ ಜೊತೆ ಲಘುಹಾಸ್ಯಭರಿತ ಸಂವಾದ ನಡೆಸುವುದೇ ಈ ಕಾರ್ಯಕ್ರಮದ ಉದ್ದೇಶ. ಡೇವಿಸ್‌ ಕಪ್‌ನಲ್ಲಿ ಭಾರತದ ಪರವಾಗಿ ‌ಕಣಕ್ಕೆ ಇಳಿದಿದ್ದ, ಅಂಗಣದಲ್ಲಿ ಸರ್ವ್‌ಗಳನ್ನು ಸಿಡಿಸಿ ಎದುರಾಳಿ ಆಟಗಾರರನ್ನು ಕಂಗೆಡಿಸುವ ಪುರವ್ ರಾಜ ವೇದಿಕೆಯಲ್ಲಿ ರಸಸಂಭಾಷಣೆಯಲ್ಲಿ ತೊಡಗಿ ಪ್ರೇಕ್ಷಕರನ್ನು ನಗಿಸುವುದು ಈ ಕಾರ್ಯಕ್ರಮವ ವೈಶಿಷ್ಟ್ಯ. ಕ್ರೀಡೆಗಷ್ಟೇ ಸೀಮಿತವಾಗಿರುವ ಸಂವಾದ ಕಾರ್ಯಕ್ರಮಗಳ ಮಾದರಿಯಲ್ಲಿ ಇದನ್ನು ವಿನ್ಯಾಸಗೊಳಿಸಲಾಗಿದೆ‘ ಎಂದು ವಿವರಿಸಲಾಗಿದೆ.

‘ಭಾರತದಲ್ಲಿ ಕ್ರೀಡಾ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವ ಪ್ರಮುಖ ಚಾನಲ್ ಸೋನಿ ಪಿಕ್ಚರ್ಸ್‌ ಸ್ಪೋರ್ಟ್ಸ್ ನೆಟ್‌‌ವರ್ಕ್‌. ಜಗತ್ತಿನ ಅಪ್ರತಿಮ ಕ್ರೀಡಾ ಪ್ರತಿಭೆಗಳು ‍ಪಾಲ್ಗೊಂಡ ವಿವಿಧ ಕಾರ್ಯಕ್ರಮಗಳನ್ನು ನಮ್ಮ ಚಾನಲ್ ಪ್ರಸಾರ ಮಾಡಿದೆ. ಈ ಪೈಕಿ ಪ್ರಮುಖ ಕಾರ್ಯಕ್ರಮ ’ಚಾಯ್ ವಿದ್ ರಾಜ’ ಆಗಿದೆ’ ಎಂದು ಕ್ರೀಡಾ ವಿಭಾಗದ ಮುಖ್ಯ ರೆವೆನ್ಯೂ ಅಧಿಕಾರಿ ರಾಜೇಶ್ ಕೌಲ್ ತಿಳಿಸಿದ್ದಾರೆ.

ಕಾರ್ಯಕ್ರಮದ ಅಂಗವಾಗಿ ಈಚೆಗೆ ನಡೆದ ಆನ್‌ಲೈನ್ ಸಂವಾದದಲ್ಲಿ ಪಾಲ್ಗೊಂಡಿದ್ದ ಪುರವ್ ರಾಜ ’ಈ ಕಾರ್ಯಕ್ರಮ ತುಂಬ ಖುಷಿ ನೀಡಿದೆ. ಎಲ್ಲವನ್ನೂ ಸವಾಲಾಗಿ ಸ್ವೀಕರಿಸುವ ನನಗೆ ಅಂಗಣದಲ್ಲಾಗಲಿ ಪರದೆ ಮುಂದಾಗಲಿ ಆತಂಕ, ಮುಜುಗರ ಇಲ್ಲ’ ಎಂದು ಹೇಳಿದರು.  

‘ಲಾಕ್‌ಡೌನ್ ನಂತರದ ದಿನಗಳು ಕಠಿಣವಾಗಿವೆ. ವೈಯಕ್ತಿಕವಾಗಿ ನನಗೆ ಕುಟುಂಬ ಮತ್ತು ಗೆಳೆಯರ ಜೊತೆ ಕಳೆಯಲು ಸಾಕಷ್ಟು ಸಮಯ ಸಿಕ್ಕಿದೆ. ಎಷ್ಟೋ ವರ್ಷಗಳಿಂದ ಪ್ಯಾಕ್ ಆಗಿಯೇ ಇರುತ್ತಿದ್ದ ನನ್ನ ಸೂಟ್‌ಕೇಸ್ ಈಗ ತೆರೆದೇ ಇದೆ. ಟೆನಿಸ್ ಚಟುವಟಿಕೆ ಈಗ ನಿಧಾನಕ್ಕೆ ಆರಂಭವಾಗುತ್ತಿವೆ. ಅಂಗಣಗಳು ಶೀಘ್ರದಲ್ಲೇ ಕಳೆಗಟ್ಟುವ ನಿರೀಕ್ಷೆ ಇದೆ’ ಎಂದು ಅವರು ಅಭಿಪ್ರಾಯಪಟ್ಟರು. 

‘ರಾಮಕುಮಾರ್ ರಾಮನಾಥನ್ ಜೊತೆಗೂಡಿ ಆಡಿದ ದಿನಗಳು ತುಂಬ ಖುಷಿ ನೀಡಿವೆ. ನಾವು ಒಟ್ಟಾಗಿ 15 ಪಂದ್ಯಗಳನ್ನು ಮತ್ತು ಕೆಲವು ಪ್ರಶಸ್ತಿಗಳನ್ನು ಗೆದ್ದಿದ್ದೇವೆ. ಕೇವಲ ಒಂದು ಪಂದ್ಯ ಸೋತಿದ್ದೇವೆ’ ಎಂದು ಹೇಳಿದ ಅವರು ‘ಭಾರತದ ಯುವ ಆಟಗಾರರಿಗೆ ಸೂಕ್ತ ತರಬೇತಿ ಸಿಗಬೇಕಿದೆ. ಸೌಲಭ್ಯಗಳ ಕೊರತೆ ಇದ್ದು ಅದನ್ನು ಅಭಿವೃದ್ಧಿಪಡಿಸಬೇಕಾಗಿದೆ. ಅದು ಸಾಧ್ಯವಾದರೆ ನಮ್ಮಲ್ಲಿ ಸಾಕಷ್ಟು ಪ್ರತಿಭೆಗಳು ಬೆಳಕಿಗೆ ಬರುವ ಸಾಧ್ಯತೆ ಇದೆ’ ಎಂದರು.‌

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.