ಶನಿವಾರ, ಆಗಸ್ಟ್ 13, 2022
23 °C

ಫೆಬ್ರುವರಿ 8ರಿಂದ ಆಸ್ಟ್ರೇಲಿಯಾ ಓಪನ್ ಟೆನಿಸ್‌ ಟೂರ್ನಿ

ರಾಯಿಟರ್ಸ್ Updated:

ಅಕ್ಷರ ಗಾತ್ರ : | |

Prajavani

ಮೆಲ್ಬರ್ನ್‌: ಆಸ್ಟ್ರೇಲಿಯಾ ಓಪನ್ ಟೆನಿಸ್ ಟೂರ್ನಿಯು ಮುಂದಿನ ವರ್ಷದ ಫೆಬ್ರುವರಿ 8ರಿಂದ ನಡೆಯಲಿದೆ. 2021ರ ಸಾಲಿನ ಮೊದಲ ಗ್ರ್ಯಾನ್‌ಸ್ಲಾಮ್ ಟೂರ್ನಿಯು ನಿಗದಿತ ದಿನಾಂಕಕ್ಕಿಂತ ಮೂರು ವಾರ ತಡವಾಗಿ ಶುರುವಾಗಲಿದೆ ಎಂದು ಟೂರ್ನಿಯ ಸಂಘಟಕರು ಶನಿವಾರ ತಿಳಿಸಿದ್ದಾರೆ.

ಟೂರ್ನಿಯ ಮುಖ್ಯ ಸುತ್ತಿನ ಪಂದ್ಯಗಳನ್ನು ಜನೆವರಿ 18ರಂದು ಆರಂಭಿಸಲು ಈ ಮೊದಲು ನಿರ್ಧರಿಸಲಾಗಿತ್ತು. ಆದರೆ ಕೋವಿಡ್–19 ಪಿಡುಗಿನ ಹಿನ್ನೆಲೆಯಲ್ಲಿ ಆರೋಗ್ಯ ಸುರಕ್ಷತೆ ದೃಷ್ಟಿಯಿಂದ, ಸ್ಥಳೀಯ ಸರ್ಕಾರದೊಂದಿಗೆ ಚರ್ಚಿಸಿದ ಬಳಿಕ ಸಂಘಟಕರು ಟೂರ್ನಿಯನ್ನು ಮೂರು ವಾರಗಳ ಕಾಲ ಮುಂದಕ್ಕೆ ಹಾಕಲು ತೀರ್ಮಾನಿಸಿದರು.

‘ಹಲವು ರೀತಿಯಲ್ಲಿ ಈ ಬಾರಿಯ ಟೂರ್ನಿಯು ಚಾರಿತ್ರಿಕವಾಗಲಿದೆ. 100 ವರ್ಷಗಳ ಬಳಿಕ ಮೊದಲ ಬಾರಿಗೆ ಟೂರ್ನಿಯನ್ನು ಫೆಬ್ರುವರಿಯಲ್ಲಿ ನಡೆಸಲಾಗುತ್ತದೆ‘ ಎಂದು ಆಸ್ಟ್ರೇಲಿಯಾ ಓಪನ್ ಟೂರ್ನಿಯ ನಿರ್ದೇಶಕ ಕ್ರೇಗ್ ಟಿಲಿ ಹೇಳಿದ್ದಾರೆ.

ವಿಕ್ಟೋರಿಯಾ ರಾಜ್ಯದಲ್ಲಿ ಸತತ 50 ದಿನಗಳಿಂದ ಯಾವುದೇ ಕೋವಿಡ್‌ ಪ್ರಕರಣಗಳು ದಾಖಲಾಗಿಲ್ಲ. ಆದರೂ ಆರೋಗ್ಯಕ್ಕೆ ಸಂಬಂಧಿಸಿದ ನಿರ್ಬಂಧಗಳು ಮೆಲ್ಬರ್ನ್‌ನಲ್ಲಿ ಮುಂದುವರಿದಿವೆ. ಆಸ್ಟ್ರೇಲಿಯಾಕ್ಕೆ ಅಂತರರಾಷ್ಟ್ರೀಯ ಪ್ರಯಾಣವನ್ನು ಸೀಮಿತಗೊಳಿಸಲಾಗಿದೆ.

ಟೂರ್ನಿಯ ಅರ್ಹತಾ ಪಂದ್ಯಗಳನ್ನು ಮೊದಲ ಬಾರಿಗೆ ಬೇರೆ ದೇಶದಲ್ಲಿ ನಡೆಸಲು ಉದ್ದೇಶಿಸಲಾಗಿದೆ. ಮಹಿಳಾ ಪಂದ್ಯಗಳು ದುಬೈನಲ್ಲಿ ಹಾಗೂ ಪುರುಷರ ಪಂದ್ಯಗಳು ದೋಹಾದಲ್ಲಿ ನಡೆಯಲಿವೆ. ಆಸ್ಟ್ರೇಲಿಯಾಕ್ಕೆ ತೆರಳುವ ಮುಂಚೆ ಆಟಗಾರರು 14 ದಿನಗಳ ಕ್ವಾರಂಟೈನ್ ಅವಧಿ ಪೂರ್ಣಗೊಳಿಸಬೇಕಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು